ಮೆಲ್ಬೋರ್ನ್: ಆಸ್ಟ್ರೇಲಿಯಾ ವೇಗಿ ಸ್ಕಾಟ್ ಬೊಲ್ಯಾಂಡ್ ಅವರ ಬಿಗುವಿನ ಬೌಲಿಂಗ್ ದಾಳಿಗೆ ತತ್ತರಿಸಿದ ಇಂಗ್ಲೆಂಡ್ ತಂಡ, ಆ್ಯಷಸ್ಟೆಸ್ಟ್ ಸರಣಿಯ ಮೂರನೇ ಪಂದ್ಯದಲ್ಲಿ ಇನಿಂಗ್ಸ್ ಹಾಗೂ 14 ರನ್ ಅಂತರದಿಂದ ಸೋಲೊಪ್ಪಿಕೊಂಡಿತು.
ಇಲ್ಲಿನ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ, ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಜೋ ರೂಟ್ ನಾಯಕತ್ವದ ಆಂಗ್ಲ ಪಡೆ ಮೊದಲ ಇನಿಂಗ್ಸ್‌ನಲ್ಲಿ185 ರನ್ ಗಳಿಸಿ ಆಲೌಟ್ ಆಗಿತ್ತು. ಇದಕ್ಕುತ್ತರವಾಗಿ ಪ್ಯಾಟ್ ಕಮಿನ್ಸ್ ಬಳಗವು, ಎಲ್ಲ ವಿಕೆಟ್‌ಗಳನ್ನು ಕಳೆದುಕೊಳ್ಳುವ ಮುನ್ನ 267 ರನ್ ಕಲೆಹಾಕಿ, 82 ರನ್‌ಗಳ ಮುನ್ನಡೆ ಪಡೆದುಕೊಂಡಿತ್ತು.
ಎರಡನೇ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್‌ಗೆ ಪದಾರ್ಪಣೆ ಪಂದ್ಯವಾಡಿದ ಸ್ಕಾಟ್, ಆಘಾತ ನೀಡಿದರು. ಮೊದಲ ಇನಿಂಗ್ಸ್‌ನಲ್ಲಿ 1 ವಿಕೆಟ್ ಪಡೆದುಕೊಂಡಿದ್ದ ಅವರು ಇಲ್ಲಿ ಆರು ಮಂದಿಗೆ ಪೆವಿಲಿಯನ್ ದಾರಿ ತೋರಿದರು. ಹೀಗಾಗಿ ಪ್ರವಾಸಿ ತಂಡ ಕೇವಲ68 ರನ್ ಗಳಿಗೆ ಕುಸಿಯಿತು. ಇದರೊಂದಿಗೆ ಪಂದ್ಯವು ಮೂರೇ ದಿನದಲ್ಲಿ ಮುಕ್ತಾಯವಾಯಿತು.
ನಾಯಕ ಜೋ ರೂಟ್ ಅವರು ಮೊದಲ ಇನಿಂಗ್ಸ್‌ನಲ್ಲಿ50 ರನ್ ಗಳಿಸಿದ್ದೇ, ಪಂದ್ಯದಲ್ಲಿ ಇಂಗ್ಲೆಂಡ್ ಪರ ದಾಖಲಾದ ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ. ಆಸ್ಟ್ರೇಲಿಯಾ ಪರ ಪ್ಯಾಟ್ ಕಮಿನ್ಸ್ 3 (ಮೊದಲ ಇನಿಂಗ್ಸ್‌ನಲ್ಲಿ 3) ವಿಕೆಟ್, ಮಿಚೇಲ್ ಸ್ಟಾರ್ಕ್ 5 (ಮೊದಲ ಇನಿಂಗ್ಸ್‌ನಲ್ಲಿ 2, ಎರಡನೇ ಇನಿಂಗ್ಸ್‌ನಲ್ಲಿ 3) ವಿಕೆಟ್, ಸ್ಕಾಟ್ ಬೊಲ್ಯಾಂಡ್ 7 (ಮೊದಲ ಇನಿಂಗ್ಸ್‌ನಲ್ಲಿ 1, ಎರಡನೇ ಇನಿಂಗ್ಸ್‌ನಲ್ಲಿ 6) ವಿಕೆಟ್, ನಾಥನ್ ಲಯನ್ 1 (ಮೊದಲ ಇನಿಂಗ್ಸ್) ವಿಕೆಟ್, ಕ್ಯಾಮರೂನ್ ಗ್ರೀನ್ 2 (ಮೊದಲ ಇನಿಂಗ್ಸ್‌ನಲ್ಲಿ 1, ಎರಡನೇ ಇನಿಂಗ್ಸ್‌ನಲ್ಲಿ 1) ವಿಕೆಟ್ ಪಡೆದರು.
ಸರಣಿಯ ಮೊದಲ ಎರಡು ಪಂದ್ಯಗಳಲ್ಲಿಯೂ ಇಂಗ್ಲೆಂಡ್ ಹೀನಾಯವಾಗಿ ಸೋಲು ಕಂಡಿತ್ತು.
ಆಸ್ಟ್ರೇಲಿಯಾ ಈ ಗೆಲುವಿನೊಂದಿಗೆ ಸರಣಿಯಲ್ಲಿ 3–0 ಮುನ್ನಡೆ ಸಾಧಿಸಿದೆ. 2017-18ರಲ್ಲಿ ನಡೆದ ಪ್ರತಿಷ್ಠಿತ ಆ್ಯಷಸ್ ಟ್ರೋಫಿ ಸರಣಿಯಲ್ಲಿ 4–0 ಅಂತರದ ಗೆಲುವು ಕಂಡಿದ್ದ ಆಸಿಸ್, 2019ರಲ್ಲಿ 2–2ರ ಸಮಬಲ ಸಾಧಿಸಿತ್ತು. ಹೀಗಾಗಿ ಟ್ರೋಫಿ ಆಸಿಸ್ ಬಳಿಯೇ ಉಳಿಯಲಿದೆ.
ಸ್ಕೋರ್ ವಿವರ
ಮೊದಲ ಇನಿಂಗ್ಸ್
ಇಂಗ್ಲೆಂಡ್:185 ರನ್‌ಗಳಿಗೆ ಆಲೌಟ್
ಆಸ್ಟ್ರೇಲಿಯಾ:267 ರನ್‌ಗಳಿಗೆ ಆಲೌಟ್
ಎರಡನೇ ಇನಿಂಗ್ಸ್
ಇಂಗ್ಲೆಂಡ್:68ರನ್‌ಗಳಿಗೆ ಆಲೌಟ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.