ಮೆಲ್ಬರ್ನ್: ಮುಂಬರಲಿರುವ ಭಾರತ ತಂಡದ ಎದುರಿನ ಬಾರ್ಡರ್–ಗಾವಸ್ಕರ್ ಟ್ರೋಫಿ ಕ್ರಿಕೆಟ್ ಟೂರ್ನಿಗಾಗಿ ಆಸ್ಟ್ರೇಲಿಯಾ ತಂಡವು ಈಗಾಗಲೇ ಸಿದ್ಧತೆಯನ್ನು ಗಂಭೀರವಾಗಿಯೇ ಆರಂಭಿಸಿದೆ. ತಂತ್ರಗಾರಿಕೆಗಳನ್ನು ಹೆಣೆಯುತ್ತಿದೆ.
ಭಾರತದ ಬ್ಯಾಟಿಂಗ್ ಬಲವನ್ನು ಕಟ್ಟಿಹಾಕಲು ತಮ್ಮ ಆಲ್‌ರೌಂಡರ್‌ಗಳ ಸಾಮರ್ಥ್ಯವನ್ನು ಬಳಸಿಕೊಳ್ಳುವತ್ತ ಚಿತ್ತ ನೆಟ್ಟಿದೆ. ತಮ್ಮ ಪರಿಣತ ಬೌಲರ್‌ಗಳ ಕಾರ್ಯಬಾಹುಳ್ಯವನ್ನು ಆಲ್‌ರೌಂಡರ್‌ಗಳಾದ ಕ್ಯಾಮರಾನ್ ಗ್ರೀನ್ ಮತ್ತು ಮಿಚೆಲ್ ಮಾರ್ಷ್ ಅವರಿಗೂ ಹಂಚಲು ನಾಯಕ ಪ್ಯಾಟ್ ಕಮಿನ್ಸ್ ಯೋಜಿಸಿದ್ದಾರೆ.
‘ಮುಂಬರುವ ಬೇಸಿಗೆ ಋತುವು ಈ ಹಿಂದಿನ ಎಲ್ಲ ಋತುಗಳಿಗಿಂತ ವಿಭಿನ್ನವಾಗಲಿದೆ. ನಾವು ಗ್ರೀನ್ ಮತ್ತು ಮಾರ್ಷ್ ಅವರ ಬೌಲಿಂಗ್ ಸಾಮರ್ಥ್ಯವನ್ನು ತುಸು ಹೆಚ್ಚು ಬಳಸಿಕೊಳ್ಳುವ ಯೋಚನೆಯಲ್ಲಿದ್ದೇವೆ. ಈ ಹಿಂದಿನ ಟೆಸ್ಟ್‌ಗಳಲ್ಲಿ ಅವರಿಗೆ ಹೆಚ್ಚು ಒತ್ತಡ ಹಾಕಿರಲಿಲ್ಲ. ದೇಶಿ ಕ್ರಿಕೆಟ್‌ನಲ್ಲಿ ಕ್ಯಾಮ್ (ಗ್ರೀನ್) ಬೌಲಿಂಗ್ ಹೆಚ್ಚು ಮಾಡಿದವರು. ಆದರೆ ಟೆಸ್ಟ್‌ನಲ್ಲಿ ಬ್ಯಾಟಿಂಗ್ ಮೇಲೆ ಹೆಚ್ಚು ಗಮನ ಕೊಟ್ಟರು’ ಎಂದರು.
25 ವರ್ಷದ ಗ್ರೀನ್ ಅವರು ಒಟ್ಟು 28 ಟೆಸ್ಟ್‌ಗಳನ್ನು ಆಡಿದ್ದಾರೆ. ಅದರಲ್ಲಿ 35 ವಿಕೆಟ್ ಗಳಿಸಿದ್ದಾರೆ.
‘ಮೊದಲನೇಯದಾಗಿ ಅವರಿಬ್ಬರೂ (ಗ್ರೀನ್ ಮತ್ತು ಮಾರ್ಷ್) ಮೊದಲ ಆರು ಬ್ಯಾಟಿಂಗ್ ಕ್ರಮಾಂಕಗಳಲ್ಲಿ ಇರುವುದು ಖಚಿತ. ಈ ವಿಷಯದಲ್ಲಿ ಅವರು ನಿರಾಶೆಗೊಳಿಸುವುದಿಲ್ಲ. ಬೌಲಿಂಗ್‌ನಲ್ಲಿ ನಮಗೆ ಅದೃಷ್ಟವಶಾತ್ ಸ್ಪಿನ್ನರ್ ನೇಥನ್ ಲಯನ್ ಹೆಚ್ಚು ಓವರ್‌ಗಳನ್ನು ಬೌಲಿಂಗ್ ಮಾಡುತ್ತಾರೆ. ಆದ್ದರಿಂದ ಆಲ್‌ರೌಂಡರ್‌ಗಳು ಬೌಲಿಂಗ್ ಮಾಡುವ ಅಗತ್ಯ ಹೆಚ್ಚು ಇರುವುದಿಲ್ಲ. ಆದರೆ ಈಗ ಮಿಚ್ (ಮಾರ್ಷ್) ಮತ್ತು ಕ್ಯಾಮ್ (ಗ್ರೀನ್) ಅವರು ಇರುವುದರಿಂದ ಐದು ಹಾಗೂ ಆರನೇ ಬೌಲರ್‌ಗಳ ಸ್ಥಾನವನ್ನು ತುಂಬಿದ್ದಾರೆ. ಇದು ತಂಡದ ಸಾಮರ್ಥ್ಯವನ್ನು ಹೆಚ್ಚಿಸಿದೆ’ ಎಂದು ವೇಗದ ಬೌಲರ್ ಕಮಿನ್ಸ್ ಅಭಿಪ್ರಾಯಪಟ್ಟರು.
ಕಮಿನ್ಸ್ ಅವರು ಭಾರತ ಎದುರಿನ ಸರಣಿಗೂ ಮುನ್ನ ಎಂಟು ವಾರಗಳ ವಿಶ್ರಾಂತಿ ಪಡೆದಿದ್ದಾರೆ. ಅವರು ಈಚೆಗಷ್ಟೇ ಅಮೆರಿಕದ ಮೇಜರ್ ಲೀಗ್ ಕ್ರಿಕೆಟ್‌ನಲ್ಲಿ ಆಡಿ ಹಿಂದಿರುಗಿದ್ದಾರೆ. ಕಳೆದ ಒಂದು ವರ್ಷದಲ್ಲಿ ಅವರು ಸತತ ಪ್ರವಾಸ ಮತ್ತು ಪ್ರಮುಖ ಟೂರ್ನಿಗಳಲ್ಲಿ ಆಡಿ ದಣಿದಿದ್ದಾರೆ. ಆದ್ದರಿಂದ ದೀರ್ಘ ಸಮಯ ವಿಶ್ರಾಂತಿ ಪಡೆದು ಉಲ್ಲಸಿತರಾಗಿ ಹಿಂದಿರುಗಲು ಉದ್ದೇಶಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.