ಕೇನ್ಸ್: ನ್ಯೂಜಿಲೆಂಡ್ ತಂಡದ ವಿರುದ್ಧ ತವರಿನಲ್ಲಿ ನಡೆದ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಆಸ್ಟ್ರೇಲಿಯಾ ಕ್ಲೀನ್ ಸ್ವೀಪ್ ಸಾಧನೆ ಮಾಡಿದೆ.
ಅಮೋಘ ಶತಕ ಸಿಡಿಸಿ ಕೊನೇ ಪಂದ್ಯ ಗೆದ್ದು ಕೊಟ್ಟಸ್ವೀವನ್ ಸ್ಮಿತ್, ಎದುರಾಳಿ ತಂಡ ಆಟಗಾರರು ಮಾಡಿದ ಸಣ್ಣ ಎಡವಟ್ಟನ್ನು ಗುರುತಿಸಿ ಲಾಭ ಪಡೆದುಕೊಳ್ಳುವ ಮೂಲಕ ಸುದ್ದಿಯಾಗಿದ್ದಾರೆ.
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಆಸ್ಟ್ರೇಲಿಯಾ, ಕೇವಲ 16 ರನ್ ಗಳಿಸುವಷ್ಟರಲ್ಲೇ ಆರಂಭಿಕರಿಬ್ಬರನ್ನೂ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ನಂತರ ಮಾರ್ನಸ್ ಲಾಬುಶೇನ್ (52) ಜೊತೆಗೂಡಿ ಚೆಂದದ ಇನಿಂಗ್ಸ್ ಕಟ್ಟಿದಸ್ಮಿತ್ ತಮ್ಮ ತಂಡವನ್ನು ಅಪಾಯದಿಂದ ಪಾರು ಮಾಡಿದರು.
ಈ ಜೋಡಿ ಮೂರನೇ ವಿಕೆಟ್ ಪಾಲುದಾರಿಯಲ್ಲಿ 118 ರನ್ ಕಲೆ ಹಾಕಿತು. ಲಾಬುಶೇನ್ ವಿಕೆಟ್ ಪತನದ ಬಳಿಕ ಅಲೆಕ್ಸ್ ಕಾರಿ (ಅಜೇಯ 42) ಜೊತೆಅರ್ಧಶತಕದ ಜೊತೆಯಾಟವಾಡಿದ ಸ್ಮಿತ್, ತಂಡ ಸವಾಲಿನ ಮೊತ್ತ ಕಲೆಹಾಕಲು ನೆರವಾದರು.
ಒಟ್ಟು 131 ಎಸೆತಗಳನ್ನು ಎದುರಿಸಿದ ಸ್ಮಿತ್ 11 ಬೌಂಡರಿ ಮತ್ತು 1 ಸಿಕ್ಸರ್ ಸಹಿತ 105 ರನ್ ಗಳಿಸಿದರು.
ಹೀಗಾಗಿ ಆಸ್ಟ್ರೇಲಿಯಾ ನಿಗದಿತ 50 ಓವರ್‌ಗಳಲ್ಲಿ 5 ವಿಕೆಟ್‌ಗೆ267 ರನ್ ಕಲೆಹಾಕಿತು. ಈ ಮೊತ್ತ ಬೆನ್ನತ್ತಿದ ನ್ಯೂಜಿಲೆಂಡ್ 242ರನ್ ಗಳಿಸಿದ್ದಾಗ ಇನ್ನೂ 1 ಎಸೆತ ಇರುವಂತೆಯೇ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡು 25 ರನ್ ಅಂತರದ ಸೋಲೊಪ್ಪಿಕೊಂಡಿತು.
ಇದನ್ನೂ ಓದಿ:ಕ್ರಿಕೆಟ್: ಆಸ್ಟ್ರೇಲಿಯಾ ‘ಕ್ಲೀನ್ಸ್ವೀಪ್’
ಸ್ಮಿತ್ ಚುರುಕುಮತಿಗೆ ಶಹಬ್ಬಾಸ್ ಹೇಳಿದ ನೆಟ್ಟಿಗರು
ಆಟಗಾರರು ಬ್ಯಾಟಿಂಗ್ ವೇಳೆ ಫೀಲ್ಡರ್‌ಗಳನ್ನು ನೋಡಿ ಅದಕ್ಕೆ ತಕ್ಕಂತೆ ಬ್ಯಾಟಿಂಗ್ ಮಾಡುವುದು ಸಾಮಾನ್ಯ.ಅಂತೆಯೇ,ಜಿಮ್ಮಿ ನೀಶಮ್ ಅವರು38ನೇ ಓವರ್ ಎಸೆಯಲು ಬಂದಾಗ ಫೀಲ್ಡ್ ಸೆಟ್ಟಿಂಗ್ ಗಮನಿಸಿದ ಸ್ಮಿತ್, ನಿಯಮದಂತೆ 30 ಯಾರ್ಡ್ ಸರ್ಕಲ್‌ನಲ್ಲಿ ಇರಬೇಕಾದ ಫೀಲ್ಡರ್‌ಗಳ ಸಂಖ್ಯೆ ಕಡಿಮೆ ಇರುವುದನ್ನು ಗುರುತಿಸಿಕೊಂಡರು.
ಇದರ ಲಾಭ ಪಡೆಯಲು ಚೆಂಡನ್ನು (ಓವರ್‌ನ ಎರಡನೇ ಎಸೆತ) ಸಿಕ್ಸರ್‌ಗೆ ಅಟ್ಟಿದ ಸ್ಮಿತ್, ಎಸೆತವನ್ನು ನೋಬಾಲ್ ಎಂದು ಘೋಷಿಸುವಂತೆ ತಕ್ಷಣವೇ ಅಂಪೈರ್‌ಗೆ ಮನವಿ ಮಾಡಿದರು. ನ್ಯೂಜಿಲೆಂಡ್ ಆಟಗಾರರು ಮಾಡಿದ್ದ ಎಡವಟ್ಟನ್ನು ಮನವರಿಕೆ ಮಾಡಿಕೊಟ್ಟರು. ಬಳಿಕ ಫೀಲ್ಡರ್‌ಗಳ ಸಂಖ್ಯೆ ಲೆಕ್ಕ ಹಾಕಿದ ಅಂಪೈರ್‌ಗಳು ಸ್ಮಿತ್ ಸಿಕ್ಸರ್ ಬಾರಿಸಿದ್ದ ಎಸೆತವನ್ನು ನೋ ಬಾಲ್ ಎಂದು ಹಾಗೂ ನಂತರದ ಎಸೆತವನ್ನು ಫ್ರೀ ಹಿಟ್ ಎಂದು ಘೋಷಿಸಿದರು.
ಈ ಸಂದರ್ಭದ ವಿಡಿಯೊ ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಸ್ಮಿತ್ ಚುರುಕುಮತಿಗೆ ನೆಟ್ಟಿಗರು ಶಹಬ್ಬಾಸ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.