ಪರ್ತ್: ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ನಡುವಣ ಟೆಸ್ಟ್ ಪಂದ್ಯದ ವೇಳೆ ಅಸ್ವಸ್ಥಗೊಂಡಿದ್ದ ಬ್ಯಾಟಿಂಗ್ ದಿಗ್ಗಜ ರಿಕಿ ಪಾಂಟಿಂಗ್ ಅವರು ಚೇತರಿಸಿಕೊಂಡಿದ್ದು, ಶನಿವಾರ ವೀಕ್ಷಕ ವಿವರಣೆಗೆ ಮರಳಿದ್ದಾರೆ.
ಆಸ್ಟ್ರೇಲಿಯಾದ ಪರ್ತ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ವೀಕ್ಷಕ ವಿವರಣೆಯಲ್ಲಿ ತೊಡಗಿದ್ದ ವೇಳೆ 47 ವರ್ಷದ ಪಾಂಟಿಂಗ್‌ಅಸ್ವಸ್ಥರಾಗಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೀಗಾಗಿ ದಿನದಾಟದ ಉಳಿದ ಅವಧಿಯಲ್ಲಿ ಅವರು ವೀಕ್ಷಕ ವಿವರಣೆಗೆ ಬಂದಿರಲಿಲ್ಲ.
ಶನಿವಾರ ವೀಕ್ಷಕ ವಿವರಣೆಗೆ ಆಗಮಿಸಿದ ನಂತರ ಮಾತನಾಡಿರುವ ಪಾಂಟಿಂಗ್, 'ಸದ್ಯ ಆರೋಗ್ಯವಾಗಿದ್ದೇನೆ. ಹೊಸ ಉರುಪು ಮತ್ತು ಉತ್ಸಾಹದಿಂದ ಇದ್ದೇನೆ. ಬಹುಶಃ ನಿನ್ನೆ ಬಹಳಷ್ಟು ಜನರನ್ನು ನಾನು ಹೆದರಿಸಿದ್ದೇನೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ನನಗೂ ಭಯವಾಗಿತ್ತು' ಎಂದು ಹೇಳಿಕೊಂಡಿದ್ದಾರೆ.
ವೀಕ್ಷಕ ವಿವರಣೆ ಸ್ಥಳದಲ್ಲಿದ್ದಾಗ, ಎದೆ ಭಾಗದಲ್ಲಿ ಅಲ್ಪ ಪ್ರಮಾಣದ ಆದರೆ ತೀಕ್ಷ್ಣವಾದ ನೋವು ಕಾಣಿಸಿತು. ಅದನ್ನು ನಿಯಂತ್ರಿಸಿಕೊಳ್ಳಲು ನೋಡಿದೆ.ವೀಕ್ಷಕ ವಿವರಣೆ ಸ್ಥಳದಿಂದ ಹೊರಬಂದು ಚೂರು ನಡೆದಾಡಿದೆ. ಸ್ವಲ್ಪ ಹೊತ್ತಿನಲ್ಲೇ ತಲೆತಿರುಗಿದಂತಾಗಿ ಕುರ್ಚಿ ಹಿಡಿದುಕೊಂಡೆ.ಲೈವ್ ಕಾರ್ಯಕ್ರಮದಲ್ಲಿದ್ದ ಕಾರಣ, ಹೆಚ್ಚಿನಪ್ರಯತ್ನ ಮಾಡಲು ಹೋಗಲಿಲ್ಲ ಎಂದು ವಿವರಿಸಿದ್ದಾರೆ.
ಬಳಿಕ ಪಾಂಟಿಂಗ್,ಅಲ್ಲೇ ಇದ್ದ ತಮ್ಮ ಆತ್ಮೀಯ ಗೆಳೆಯ ಹಾಗೂ ವೀಕ್ಷಕ ವಿವರಣೆಯಲ್ಲಿ ತೊಡಗಿದ್ದ ಜಸ್ಟಿನ್ ಲ್ಯಾಂಗರ್ ಅವರಿಗೆ ವಿಷಯ ತಿಳಿಸಿದ್ದಾರೆ. ನಂತರ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.
ಆಸ್ಟ್ರೇಲಿಯಾದ ದಿಗ್ಗಜ ಕ್ರಿಕೆಟಿಗರಾದ ಶೇನ್ ವಾರ್ನ್ ಮತ್ತು ರಾಡ್ ಮಾರ್ಶ್ ಅವರು ಇದೇ ವರ್ಷ ಮಾರ್ಚ್ 4ರಂದು ಮೃತಪಟ್ಟಿದ್ದರು. ಒಂದು ತಿಂಗಳ ಬಳಿಕ ಆ್ಯಂಡ್ರೋ ಸೈಮಂಡ್ಸ್ ಅವರು ಕಾರು ಅಪಘಾತದಿಂದ ಸಾವಿಗೀಡಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.