ಪರ್ತ್: ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ದಿಗ್ಗಜ ಕ್ರಿಕೆಟಿಗ ರಿಕಿ ಪಾಂಟಿಂಗ್ ಅವರನ್ನುಅನಾರೋಗ್ಯದ ಕಾರಣ ಶುಕ್ರವಾರ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆಸ್ಟ್ರೇಲಿಯಾದ ಪರ್ತ್ ಕ್ರೀಡಾಂಗಣದಲ್ಲಿ ಆತಿಥೇಯ ತಂಡ ಹಾಗೂ ವೆಸ್ಟ್ ಇಂಡೀಸ್ ಟೆಸ್ಟ್ ಪಂದ್ಯದಲ್ಲಿ ಮುಖಾಮುಖಿಯಾಗಿವೆ. ಈ ಪಂದ್ಯದ ವೀಕ್ಷಕ ವಿವರಣೆಯಲ್ಲಿ ತೊಡಗಿದ್ದ ವೇಳೆ ಪಾಂಟಿಂಗ್ ಅವರಿಗೆ ಹೃದಯ ಸಂಬಂಧಿ ಸಮಸ್ಯೆ ಕಾಣಿಸಿಕೊಂಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಊಟದ ವಿರಾಮದ ವೇಳೆ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಳ್ಳುತ್ತಿದ್ದಂತೆಯೇ ಪಾಂಟಿಂಗ್ ಅವರು ಕ್ರೀಡಾಂಗಣದಿಂದ ಹೊರ ನಡೆದಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
47 ವರ್ಷದ ಪಾಂಟಿಂಗ್ ಅವರು ತವರಿನಲ್ಲಿ ನಡೆಯುತ್ತಿರುವ 2 ಪಂದ್ಯಗಳ ಟೆಸ್ಟ್ ಸರಣಿ ವೇಳೆ 'ಸೆವೆನ್ ನೆಟ್‌ವರ್ಕ್' ವಾಹಿನಿಯ ವೀಕ್ಷಕ ವಿವರಣೆಯಲ್ಲಿ ಭಾಗವಹಿಸಿದ್ದರು.
'ರಿಕಿ ಪಾಂಟಿಂಗ್ ಆರೋಗ್ಯದಲ್ಲಿ ಏರುಪೇರಾಗಿದೆ. ಈ ದಿನದ ವೀಕ್ಷಕ ವಿವರಣೆಯಲ್ಲಿ ಅವರು ಭಾಗವಹಿಸುವುದಿಲ್ಲ' ಎಂದು ಸೆವೆನ್ ನೆಟ್‌ವರ್ಕ್ ವಾಹಿನಿಯ ವಕ್ತಾರರು ತಿಳಿಸಿದ್ದಾರೆ.
ಆಸ್ಟ್ರೇಲಿಯಾ ಹಿಡಿತದಲ್ಲಿ ಪಂದ್ಯ
ಬುಧವಾರ ಆರಂಭವಾದ ಸರಣಿಯ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ಮೇಲುಗೈ ಸಾಧಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆತಿಥೇಯ ಪಡೆ ಮೊದಲ ಇನಿಂಗ್ಸ್‌ನಲ್ಲಿ 4 ವಿಕೆಟ್ ನಷ್ಟಕ್ಕೆ 598 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತ್ತು. ಮಾರ್ನ್ ಲಾಬುಷೇನ್ (204) ಹಾಗೂ ಸ್ಟೀವ್ ಸ್ಮಿತ್ (ಅಜೇಯ 200) ದ್ವಿಶತಕ ಸಿಡಿಸಿ ಮಿಂಚಿದ್ದರು. ಉಸ್ಮಾನ್ ಖ್ವಾಜಾ (65) ಮತ್ತು ಟ್ರಾವಿಸ್ ಹೆಡ್ ಸಹ (99) ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು.
ಇದಕ್ಕುತ್ತರವಾಗಿ ಇನಿಂಗ್ಸ್ ಆರಂಭಿಸಿದ ಪ್ರವಾಸಿ ಪಡೆ 283 ರನ್ ಗಳಿಸಿ ಆಲೌಟ್ ಆಗಿದೆ. 315 ರನ್ ಮುನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿರುವ ಆಸೀಸ್‌ಮೂರನೇ ದಿನದಾಟದ ಅಂತ್ಯಕ್ಕೆ 29 ರನ್ ಗಳಿಸಿ 1 ವಿಕೆಟ್ ಕಳೆದುಕೊಂಡಿದೆ.
ಖ್ವಾಜಾ 6 ರನ್ ಗಳಿಸಿ ಔಟಾಗಿದ್ದಾರೆ. ಡೇವಿಡ್ ವಾರ್ನರ್ (17) ಹಾಗೂ ಲಾಬುಷೇನ್ (3) ಕ್ರೀಸ್‌ನಲ್ಲಿದ್ದಾರೆ.
ಇನ್ನೂ ಎರಡು ದಿನಗಳ ಆಟ ಬಾಕಿ ಇದ್ದು, ಸ್ಪಷ್ಟ ಫಲಿತಾಂಶ ನಿರೀಕ್ಷಿಸಬಹುದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.