ನವದೆಹಲಿ: ಭರ್ಜರಿ ಹೊಡೆತಗಳ ಆಟಗಾರ ಜೇಕ್ ಫ್ರೇಸರ್ ಮೆಕ್‌ಗುರ್ಕ್ ಮತ್ತು ಮ್ಯಾಥ್ಯೂ ಶಾರ್ಟ್ ಅವರು ಅಮೆರಿಕ– ವೆಸ್ಟ್ ಇಂಡೀಸ್‌ನಲ್ಲಿ ಮುಂದಿನ ತಿಂಗಳು ನಡೆಯಲಿರುವ ಟಿ20 ವಿಶ್ವಕಪ್ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ತಂಡದ ಟ್ರಾವೆಲಿಂಗ್ ರಿಸರ್ವ್ ಆಗುವ ಸಾಧ್ಯತೆಯಿದೆ.
22 ವರ್ಷದ ಮೆಕ್‌ಗುರ್ಕ್ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆರಂಭ ಆಟಗಾರರಾಗಿ ಕೆಲವು ಸ್ಫೋಟಕ ಇನಿಂಗ್ಸ್‌ಗಳನ್ನು ಆಡಿದ್ದರು. ಆದರೆ ಅವರು ಇನ್ನೂ ಟಿ20 ಅಂತರರಾಷ್ಟ್ರೀಯ ತಂಡಕ್ಕೆ ಪದಾರ್ಪಣೆ ಮಾಡಿಲ್ಲ. ವಿಶ್ವಕಪ್ 15 ಸದಸ್ಯರ ತಂಡಕ್ಕೆ ಆಯ್ಕೆಯಾಗಿರಲಿಲ್ಲ. ಅನುಭವಿಗಳಾದ ಡೇವಿಡ್ ವಾರ್ನರ್, ಟ್ರಾವಿಸ್ ಹೆಡ್ ಮತ್ತು ಮಿಚೆಲ್ ಮಾರ್ಷ್ ಅವರು ಮೊದಲ ಮೂರು ಕ್ರಮಾಂಕದಲ್ಲಿ ಆಡುವ ಕಾರಣ ಮೆಕ್‌ಗುರ್ಕ್‌ಗೆ ಅವಕಾಶ ಸಿಕ್ಕಿರಲಿಲ್ಲ.
ಬ್ಯಾಟಿಂಗ್ ಆಲ್‌ರೌಂಡರ್ ಮ್ಯಾಥ್ಯೂ ಶಾರ್ಟ್, ಇನ್ನೊಂದೆಡೆ ಆಸ್ಟ್ರೇಲಿಯಾ ಆಡಿದ ಕೊನೆಯ 14 ಟಿ20 ಪಂದ್ಯಗಳ ಪೈಕಿ 9 ಪಂದ್ಯಗಳಲ್ಲಿ ಆಡಿದ್ದಾರೆ. ಜೊತೆಗೆ ಸತತ ಎರಡು ಋತುಗಳಲ್ಲಿ ಅವರು ಬಿಗ್‌ಬ್ಯಾಷ್ ಲೀಗ್ ಟೂರ್ನಿಯ ಆಟಗಾರ ಪ್ರಶಸ್ತಿಗೂ ಪಾತ್ರರಾಗಿದ್ದಾರೆ.
ಕೆರಿಬಿಯನ್‌ನ ವಿಶ್ವಕಪ್‌ಗೆ ಒಬ್ಬರನ್ನಷ್ಟೇ ಮೀಸಲು ಆಟಗಾರರಾಗಿ ಕರೆದೊಯ್ಯಲಾಗುವುದು ಎಂದು ಆಸ್ಟ್ರೇಲಿಯಾ ಆಯ್ಕೆ ಸಮಿತಿ ಅಧ್ಯಕ್ಷ ಜಾರ್ಜ್ ಬೇಲಿ ಹೇಳಿದ್ದರು. ಆದರೆ ಈಗ ಶಾರ್ಟ್ ಜೊತೆಗೆ ಎರಡನೇ ಆಟಗಾರನಾಗಿ ಮೆಕ್‌ಗುರ್ಕ್ ಅವರನ್ನೂ ಹೆಸರಿಸಲಾಗಿದೆ ಎಂದು ಇಎಸ್‌ಪಿಎನ್ ಕ್ರಿಕ್‌ಇನ್ಪೋ ಹೇಳಿದೆ.
ಗುರುವಾರ, ಆಸ್ಟ್ರೇಲಿಯಾ ತಂಡವು ಕೆರಿಬಿಯನ್ ದ್ವೀಪಕ್ಕೆ ತೆರಳಲಿದ್ದು, ಟ್ರಿನಿಡಾಡ್‌ನಲ್ಲಿ ತಂಡ ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳಲಿದೆ. ನಮೀಬಿಯಾ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ಎರಡು ಅಭ್ಯಾಸ ಪಂದ್ಯಗಳನ್ನೂ ಆಡಲಿದೆ.
ಹೆಡ್, ಕ್ಯಾಮರೂನ್ ಗ್ರೀನ್, ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಅವರು ಐಪಿಎಲ್ ಪ್ಲೇ ಆಫ್ ತಲುಪಿರುವ ತಂಡಗಳಲ್ಲಿ ಹಂಚಿಹೋಗಿದ್ದಾರೆ.
ಮಾರ್ಷ್, ಹೇಜಲ್‌ವುಡ್, ಜೋಸ್ ಇಂಗ್ಲಿಷ್, ಆ್ಯಡಂ ಜಂಪಾ ಮತ್ತು ಆಸ್ಟನ್ ಆಗರ್ – ಈ ಎಲ್ಲರೂ ಬ್ರಿಸ್ಬೇನ್‌ನಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಶಾರ್ಟ್ ಕೂಡ ಇದರಲ್ಲಿ ಸೇರಿದ್ದಾರೆ. ಮಾರ್ಷ್ ಮಂಡಿಯ ಸ್ನಾಯರಜ್ಜು ನೋವಿನಿಂದ ಇನ್ನೂ ಗುಣಮುಖರಾಗಿಲ್ಲ ಎಂದು ವರದಿಗಳು ತಿಳಿಸಿವೆ.
ಆಸ್ಟ್ರೇಲಿಯಾ ವಿಶ್ವಕಪ್‌ನಲ್ಲಿ ತನ್ನ ಮೊದಲ ಪಂದ್ಯವನ್ನು ಬಾರ್ಬಾಡೋಸ್‌ನಲ್ಲಿ ಜೂನ್ 5ರಂದು ಒಮಾನ್ ವಿರುದ್ಧ ಆಡಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.