ADVERTISEMENT

ಟಿ20 ವಿಶ್ವಕಪ್‌: ಆಸ್ಟ್ರೇಲಿಯಾ ತಂಡಕ್ಕೆ ಆ್ಯರನ್ ಫಿಂಚ್ ನಾಯಕ

ಪಿಟಿಐ
Published 19 ಆಗಸ್ಟ್ 2021, 15:06 IST
Last Updated 19 ಆಗಸ್ಟ್ 2021, 15:06 IST
ಆ್ಯರನ್ ಫಿಂಚ್ –ಪಿಟಿಐ ಚಿತ್ರ
ಆ್ಯರನ್ ಫಿಂಚ್ –ಪಿಟಿಐ ಚಿತ್ರ   

ಮೆಲ್ಬರ್ನ್‌: ಈ ವರ್ಷದ ಅಕ್ಟೋಬರ್‌ ತಿಂಗಳಲ್ಲಿ ನಡೆಯಲಿರುವ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಪಾಲ್ಗೊಳ್ಳುವ ಆಸ್ಟ್ರೇಲಿಯಾ ತಂಡವನ್ನು ಸ್ಫೋಟಕ ಶೈಲಿಯ ಬ್ಯಾಟ್ಸ್‌ಮನ್ ಆ್ಯರನ್ ಫಿಂಚ್ ಮುನ್ನಡೆಸುವರು.

15 ಮಂದಿಯ ತಂಡವನ್ನು ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ಗುರುವಾರ ಪ್ರಕಟಿಸಿದ್ದು ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್‌ ಮತ್ತು ಪ್ಯಾಟ್ ಕಮಿನ್ಸ್ ಅವರನ್ನು ಕರೆಸಿಕೊಳ್ಳಲಾಗಿದೆ.ಈಚೆಗೆ ನಡೆದ ವೆಸ್ಟ್ ಇಂಡೀಸ್ ಮತ್ತು ಬಾಂಗ್ಲಾದೇಶ ಎದುರಿನ ಸರಣಿಗಳಲ್ಲಿ ಈ ಮೂವರಿಗೆ ಅವಕಾಶ ನೀಡಿರಲಿಲ್ಲ.

ಒಮಾನ್ ಮತ್ತು ಯುಎಇಯಲ್ಲಿ ಪಂದ್ಯಗಳು ನಡೆಯಲಿವೆ. ನಿಧಾನಗತಿಯ ಮತ್ತು ಸ್ಪಿನ್‌ ಬೌಲಿಂಗ್‌ಗೆ ನೆರವಾಗುವ ಪಿಚ್‌ಗಳು ಇರುವುದನ್ನು ಗಮನದಲ್ಲಿರಿಸಿಕೊಂಡು ವೇಗಿಗಳು, ಸ್ಪಿನ್‌ ಬೌಲರ್‌ಗಳು ಮತ್ತು ಭರ್ಜರಿ ಹೊಡೆತಗಳ ಬ್ಯಾಟ್ಸ್‌ಮನ್‌ಗಳನ್ನು ತಂಡಕ್ಕೆ ಆರಿಸಲಾಗಿದೆ.

ADVERTISEMENT

ಈ ವರೆಗೆ ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡದೇ ಇರುವ ಜೋಶ್ ಇಂಗ್ಲಿಸ್ ಅವರಿಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ. ವಿಕೆಟ್ ಕೀಪರ್ ಮ್ಯಾಥ್ಯೂ ವೇಡ್‌ ಅಲಭ್ಯವಾದರೆ ಅವರ ಬದಲಿಗೆ ಇವರನ್ನು ಬಳಸಿಕೊಳ್ಳುವ ಉದ್ದೇಶದಿಂದ ತಂಡದ ಆಡಳಿತ ಈ ನಿರ್ಧಾರ ಕೈಗೊಂಡಿದೆ. ಅಲೆಕ್ಸ್ ಕ್ಯಾರಿ ಮತ್ತು ಜೋಶ್ ಫಿಲಿಪ್‌ ಅವರನ್ನು ಕೈಬಿಡಲಾಗಿದೆ. ಡ್ಯಾನ್ ಕ್ರಿಸ್ಟಿಯನ್, ನೇಥನ್ ಎಲಿಸ್ ಮತ್ತು ಡ್ಯಾನಿಯಲ್ ಸ್ಯಾಮ್ಸ್ ಅವರನ್ನೂ ಕಾಯ್ದಿರಿಸಿದ ಆಟಗಾರರಾಗಿ ಸೇರಿಸಿಕೊಳ್ಳಲಾಗಿದೆ.

ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ದಾಖಲೆಯ ಐದು ಬಾರಿ ಚಾಂಪಿಯನ್ ಆಗಿರುವ ಆಸ್ಟ್ರೇಲಿಯಾ ಎರಡು ಬಾರಿ ರನ್ನರ್ ಅಪ್ ಕೂಡ ಆಗಿದೆ. ಆದರೆ ಟಿ20 ವಿಶ್ವಕಪ್‌ ಟೂರ್ನಿಗಳಲ್ಲಿ ವೈಫಲ್ಯ ಕಂಡಿದೆ. ಈಚೆಗೆ ನಡೆದ ವೆಸ್ಟ್ ಇಂಡೀಸ್ ಮತ್ತು ಬಾಂಗ್ಲಾದೇಶ ಎದುರಿನ ಸರಣಿಗಳಲ್ಲಿ ಸೋತಿರುವುದರಿಂದ ಈಗ ತಂಡ ಚಿಂತೆಯಲ್ಲಿದೆ. ಆ ಸರಣಿಗಳಲ್ಲಿ ಮಾರ್ಕಸ್ ಸ್ಟೋಯಿನಿಸ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌ ಮತ್ತು ಕೇನ್‌ ರಿಚರ್ಡ್ಸನ್ ಅವರು ಕೂಡ ಆಡಿರಲಿಲ್ಲ. ಸ್ಮಿತ್ ಮೊಣಕೈ ನೋವಿನಿಂದ ಮತ್ತು ಫಿಂಚ್ ಮೊಣಕಾಲು ನೋವಿನಿಂದ ಬಳಲುತ್ತಿದ್ದಾರೆ. ಸ್ಪಿನ್ ಬೌಲಿಂಗ್‌ಗೆ ಆದ್ಯತೆ ನೀಡಲು ಮುಂದಾಗಿರುವ ಆಡಳಿತ ಆ್ಯಷ್ಟನ್ ಅಗರ್‌, ಮಿಷೆಲ್ ಸ್ವೆಪ್ಸನ್ ಮತ್ತು ಆ್ಯಡಂ ಜಂಪಾ ಅವರಿಗೂ ಅವಕಾಶ ನೀಡಲಾಗಿದೆ.

16 ತಂಡಗಳನ್ನು ಒಳಗೊಂಡ ವಿಶ್ವಕಪ್‌ ಟೂರ್ನಿ ಅಕ್ಟೋಬರ್ 17ರಂದು ಆರಂಭಗೊಂಡು ನವೆಂಬರ್ 14 ವರೆಗೆ ನಡೆಯಲಿದೆ. ಆಸ್ಟ್ರೇಲಿಯಾ ತಂಡ ಸೂಪರ್ 12 ಹಂತದ ಮೊದಲ ಪಂದ್ಯದಲ್ಲಿ ಅಕ್ಟೋಬರ್ 23ರಂದು ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ.

ತಂಡ: ಆ್ಯರನ್ ಫಿಂಚ್‌ (ನಾಯಕ), ಪ್ಯಾಟ್ ಕಮಿನ್ಸ್‌ (ಉಪನಾಯಕ), ಆ್ಯಷ್ಟನ್ ಅಗರ್‌, ಜೋಶ್‌ ಹ್ಯಾಜಲ್‌ವುಡ್‌, ಜೋಶ್ ಇಂಗ್ಲಿಸ್‌, ಮಿಷೆಲ್ ಮಾರ್ಷ್‌, ಗ್ಲೆನ್ ಮ್ಯಾಕ್ಸ್‌ವೆಲ್‌, ಕೇನ್ ರಿಚರ್ಡ್ಸನ್‌, ಸ್ಟೀವ್ ಸ್ಮಿತ್, ಮಿಷೆಲ್ ಸ್ಟಾರ್ಕ್‌, ಮಾರ್ಕಸ್ ಸ್ಟೋಯಿನಿಸ್, ಮಿಷೆಲ್ ಸ್ವೆಪ್ಸನ್, ಮ್ಯಾಥ್ಯೂ ವೇಡ್, ಡೇವಿಡ್ ವಾರ್ನರ್, ಆ್ಯಡಂ ಜಂಪಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.