ADVERTISEMENT

ಟಿ20 ವಿಶ್ವಕಪ್ ಗೆದ್ದು ಇತಿಹಾಸ ರಚಿಸುವ ತವಕದಲ್ಲಿ ಆಸ್ಟ್ರೇಲಿಯಾ-ನ್ಯೂಜಿಲೆಂಡ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ನವೆಂಬರ್ 2021, 8:33 IST
Last Updated 13 ನವೆಂಬರ್ 2021, 8:33 IST
ಆ್ಯರನ್ ಫಿಂಚ್ ಹಾಗೂ ಕೇನ್ ವಿಲಿಯಮ್ಸನ್
ಆ್ಯರನ್ ಫಿಂಚ್ ಹಾಗೂ ಕೇನ್ ವಿಲಿಯಮ್ಸನ್    

ದುಬೈ: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ದುಬೈನಲ್ಲಿ ಭಾನುವಾರ ನಡೆಯಲಿರುವ ಫೈನಲ್ ಮುಖಾಮುಖಿಯಲ್ಲಿ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ತಂಡಗಳು ಸೆಣಸಲಿವೆ. ಈ ಪಂದ್ಯದಲ್ಲಿ ಯಾರೇ ಗೆದ್ದರೂ ಟ್ವೆಂಟಿ-20 ಕ್ರಿಕೆಟ್ ಜಗತ್ತಿನಲ್ಲಿ ಹೊಸ ಚಾಂಪಿಯನ್ ತಂಡ ಹೊರಹೊಮ್ಮಲಿದೆ ಎಂಬುದು ಖಾತ್ರಿಯಾಗಿದೆ.

ಏಕೆಂದರೆ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ತಂಡಗಳು ಇದುವರೆಗೆ ಟ್ವೆಂಟಿ-20 ವಿಶ್ವಕಪ್ ಟೂರ್ನಿಯನ್ನು ಗೆದ್ದಿಲ್ಲ. ಈ ಹಿಂದೆ 2010ರಲ್ಲಿ ಕಾಂಗರೂ ಪಡೆ ಫೈನಲ್ ಪ್ರವೇಶಿಸಿತ್ತಾದರೂ ಇಂಗ್ಲೆಂಡ್ ವಿರುದ್ಧ ಸೋತು ರನ್ನರ್-ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತ್ತು. ಐದು ಬಾರಿಯ ಏಕದಿನ ವಿಶ್ವಕಪ್ ಚಾಂಪಿಯನ್ ಆಸ್ಟ್ರೇಲಿಯಾ ಈಗ ಎರಡನೇ ಬಾರಿಗೆ ಟಿ20 ವಿಶ್ವಕಪ್ ಫೈನಲ್‌ಗೆ ಲಗ್ಗೆಯಿಟ್ಟಿದೆ.

ಅತ್ತ ನ್ಯೂಜಿಲೆಂಡ್ ಇದೇ ಮೊದಲ ಬಾರಿಗೆ ಫೈನಲ್‌ಗೆ ಪ್ರವೇಶಿಸಿದೆ. ಅಷ್ಟೇ ಯಾಕೆ ಏಕದಿನದಲ್ಲೂ ಇದುವರೆಗೆ ವಿಶ್ವಕಪ್ ಗೆದ್ದಿಲ್ಲ ಎಂಬುದು ಗಮನಾರ್ಹವೆನಿಸುತ್ತದೆ. ಅಲ್ಲದೆ ವೈಟ್ ಬಾಲ್ ಕ್ರಿಕೆಟ್‌ನಲ್ಲಿ ಚೊಚ್ಚಲ ವಿಶ್ವಕಪ್ ಕಿರೀಟವನ್ನು ಎದುರು ನೋಡುತ್ತಿದೆ.

ಐಸಿಸಿ ಟೂರ್ನಿಯಲ್ಲಿ ಸತತ ಮೂರನೇ ಬಾರಿಗೆ ನ್ಯೂಜಿಲೆಂಡ್ ಫೈನಲ್‌ಗೆ ಪ್ರವೇಶಿಸಿದೆ. 2015ರ ಏಕದಿನ ವಿಶ್ವಕಪ್‌ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧವೇ ಸೋಲು ಅನುಭವಿಸಿತ್ತು. 2019ರಲ್ಲಿ ಇಂಗ್ಲೆಂಡ್ ವಿರುದ್ಧ ಸೂಪರ್ ಓವರ್‌ನಲ್ಲಿ 'ಟೈ' ಆದರೂ ಅತಿ ಹೆಚ್ಚು ಬೌಂಡರಿ ಗಳಿಕೆ ಆಧಾರದಲ್ಲಿ (ಸಿಕ್ಸರ್ ಸೇರಿದಂತೆ) ವಿಶ್ವಕಪ್ ಟ್ರೋಫಿ ಕೈತಪ್ಪಿತ್ತು. ಈಗ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಗೆದ್ದಿರುವ ಕಿವೀಸ್‌ ತಂಡಕ್ಕೀಗ ಫೈನಲ್‌ನಲ್ಲಿ ಆಸೀಸ್ ವಿರುದ್ಧ ಸೇಡು ತೀರಿಸಿಕೊಳ್ಳಲು ಸುವರ್ಣಾವಕಾಶ ಒದಗಿ ಬಂದಿದೆ.

ಪ್ರಸಕ್ತ ಸಾಲಿನಲ್ಲೇ ಭಾರತವನ್ನು ಮಣಿಸಿದ್ದ ನ್ಯೂಜಿಲೆಂಡ್, ಚೊಚ್ಚಲ ಐಸಿಸಿ ಟೆಸ್ಟ್ ವಿಶ್ವ ಚಾಂಪಿಯನ್‌ಶಿಪ್ ಜಯಿಸಿತ್ತು ಎಂಬುದು ಬ್ಲ್ಯಾಕ್ ಕ್ಯಾಪ್ಸ್ ತಂಡದ ಸಾಧನೆಗೆ ಕೈಗನ್ನಡಿಯಾಗಿದೆ.

ಇವೆಲ್ಲದರ ಹೊರತಾಗಿ ಭಾರತ ಹಾಗೂ ಪಾಕಿಸ್ತಾನದಂತೆ ಸಾಂಪ್ರದಾಯಿಕ ಬದ್ದ ಎದುರಾಳಿಗಳಾದ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ತಂಡಗಳು ಹೋರಾಡುತ್ತಿವೆ ಎಂಬುದು ಕೂಡ ಪಂದ್ಯದ ರೋಚಕತೆಯನ್ನು ಇಮ್ಮಡಿಗೊಳಿಸುತ್ತದೆ. ಅಲ್ಲದೆ ಇತ್ತಂಡಗಳು ಇತಿಹಾಸ ರಚಿಸುವ ತವಕದಲ್ಲಿದೆ.

ಆಸೀಸ್-ಕಿವೀಸ್ ಫೈನಲ್ ಹಾದಿ...
ಟಿ20 ವಿಶ್ವಕಪ್ ಟೂರ್ನಿಯ ಸೂಪರ್-12 ಹಂತದಲ್ಲಿ ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡಗಳು ಸಮಾನ ಅಂಕ ಕಲೆ ಹಾಕಿ ಗುಂಪಿನ ಎರಡನೇ ತಂಡವಾಗಿ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿತ್ತು. ಆಸೀಸ್ ಹಾಗೂ ಕಿವೀಸ್ ಆಡಿರುವ ಐದು ಪಂದ್ಯಗಳ ಪೈಕಿ ತಲಾ ನಾಲ್ಕರಲ್ಲಿ ಗೆಲುವು ದಾಖಲಿಸಿತ್ತು.

ಈ ಪೈಕಿ ಆಸ್ಟ್ರೇಲಿಯಾ, ಸೂಪರ್-12 ಹಂತದಲ್ಲಿ ಇಂಗ್ಲೆಂಡ್ ವಿರುದ್ಧ 125 ರನ್ನಿಗೆ ಆಲೌಟ್ ಆಗಿ ಹೀನಾಯ ಸೋಲಿಗೆ ಶರಣಾಗಿತ್ತು. ಇನ್ನೊಂದೆಡೆ ಕಿವೀಸ್, ಸೂಪರ್-12ರಲ್ಲಿ ಸ್ಕಾಟ್ಲೆಂಡ್ ವಿರುದ್ಧ ಸೋಲಿನ ದವಡೆಯಿಂದ ಹೊರಬಂದಿತ್ತಲ್ಲದೆ 16 ರನ್ ಅಂತರದ ರೋಚಕ ಗೆಲುವು ದಾಖಲಿಸಿತ್ತು.

ಇನ್ನೂ ಸೆಮಿಫೈನಲ್‌ನಲ್ಲೂ ಸಮಾನ ಪರಿಸ್ಥಿತಿ ಎದುರಾಗಿತ್ತು. ಇಂಗ್ಲೆಂಡ್ ವಿರುದ್ಧ 167 ರನ್ ಗೆಲುವಿನ ಗುರಿ ಬೆನ್ನತ್ತಿದ್ದ ಕಿವೀಸ್ ಇನ್ನೊಂದು ಓವರ್ ಬಾಕಿ ಉಳಿರುವಂತೆಯೇ ಐದು ವಿಕೆಟ್ ಅಂತರಕ್ಕೆ ಗೆಲುವು ದಾಖಲಿಸಿತ್ತು.19ನೇ ಓವರ್‌ನಲ್ಲಿ ಡ್ಯಾರಿಲ್ ಮಿಚೆಲ್ 20 ರನ್ ಸಿಡಿಸುವ ಮೂಲಕ ಕಿವೀಸ್‌ಗೆ ರೋಚಕ ಗೆಲುವು ಒದಗಿಸಿಕೊಡುವಲ್ಲಿ ನೆರವಾದರು.

ದ್ವಿತೀಯ ಸೆಮಿಫೈನಲ್‌ನಲ್ಲಿ ಪಾಕಿಸ್ತಾನ ಒಡ್ಡಿದ 177 ರನ್ ಗುರಿಯನ್ನು ಆಸೀಸ್ ಕೂಡ ಇನ್ನೊಂದು ಓವರ್ ಬಾಕಿ ಉಳಿದರುವಂತೆಯೇ ಗುರಿ ತಲುಪಿತ್ತು. 19ನೇ ಓವರ್‌ನಲ್ಲಿ ಮ್ಯಾಥ್ಯೂ ವೇಡ್ ಹ್ಯಾಟ್ರಿಕ್ ಸಿಕ್ಸರ್ ಸೇರಿದಂತೆ 22 ರನ್ ಸೊರೆಗೈಯುವ ಮೂಲಕ ಐದು ವಿಕೆಟ್ ಅಂತರದ ಗೆಲುವು ದಾಖಲಿಸಿತ್ತು.

ಆಸ್ಟ್ರೇಲಿಯಾದ ಫೈನಲ್‌ ಹಾದಿ:

ಸೂಪರ್-12
ದಕ್ಷಿಣ ಆಫ್ರಿಕಾ ವಿರುದ್ಧ 5 ವಿಕೆಟ್ ಗೆಲುವು,
ಶ್ರೀಲಂಕಾ ವಿರುದ್ಧ 7 ವಿಕೆಟ್ ಗೆಲುವು
ಇಂಗ್ಲೆಂಡ್ ವಿರುದ್ದ 8 ವಿಕೆಟ್ ಸೋಲು
ಬಾಂಗ್ಲಾದೇಶ ವಿರುದ್ಧ ಎಂಟು ವಿಕೆಟ್ ಗೆಲುವು
ವೆಸ್ಟ್‌ಇಂಡೀಸ್ ವಿರುದ್ಧ 8 ವಿಕೆಟ್ ಗೆಲುವು

ಸೆಮಿಫೈನಲ್
ಪಾಕಿಸ್ತಾನ ವಿರುದ್ಧ 5 ವಿಕೆಟ್ ಗೆಲುವು.

ನ್ಯೂಜಿಲೆಂಡ್ ಫೈನಲ್ ಹಾದಿ:

ಸೂಪರ್-12
ಪಾಕಿಸ್ತಾನ ವಿರುದ್ಧ 5 ವಿಕೆಟ್ ಸೋಲು,
ಭಾರತ ವಿರುದ್ಧ 8 ವಿಕೆಟ್ ಗೆಲುವು
ಸ್ಕಾಟ್ಲೆಂಡ್ ವಿರುದ್ಧ 16 ರನ್ ಗೆಲುವು
ನಮೀಬಿಯಾ ವಿರುದ್ಧ 52 ರನ್ ಗೆಲುವು
ಅಫ್ಗಾನಿಸ್ತಾನ ವಿರುದ್ಧ 8 ವಿಕೆಟ್ ಗೆಲುವು

ಸೆಮಿಫೈನಲ್
ಇಂಗ್ಲೆಂಡ್ ವಿರುದ್ಧ 5 ವಿಕೆಟ್ ಗೆಲುವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.