ಮೆಲ್ಬರ್ನ್: ಪಾಕಿಸ್ತಾನದ ಬಿಗು ದಾಳಿಯೆದುರು ಬಂಡೆಯಂತೆ ಅಚಲವಾಗಿ ನಿಂತ ಮಾರ್ನಸ್ ಲಾಬುಷೇನ್, ಎರಡನೇ ಟೆಸ್ಟ್‌ನ ಮೊದಲ ದಿನ ಆಸ್ಟ್ರೇಲಿಯಾ ತಂಡ ಕುಸಿಯದಂತೆ ನೋಡಿಕೊಂಡರು. ಆಸ್ಟ್ರೇಲಿಯಾ ದಿನದಾಟ ಮುಗಿದಾಗ 3 ವಿಕೆಟ್‌ಗೆ 187 ರನ್ ಗಳಿಸಿ ನಿಟ್ಟುಸಿರುಬಿಟ್ಟಿತು.
120 ಎಸೆತಗಳನ್ನು ಆಡಿರುವ ಲಾಬುಷೇನ್ 44 ರನ್ ಗಳಿಸಿ ಅಜೇಯರಾಗುಳಿದರು. ಟ್ರಾವಿಸ್ ಹೆಡ್ 9 ರನ್ ಗಳಿಸಿ ಆಟ ಕಾದಿರಿಸಿದರು. ಮೊದಲ ದಿನ ಸುಮಾರು ಮೂರು ಗಂಟೆಗಳ ಆಟ ಮಳೆಯ ಪಾಲಾಯಿತು. ಪಾಕ್ ನಾಯಕ ಶಾನ್ ಮಸೂದ್ ಟಾಸ್ ಗೆದ್ದು ಆತಿಥೇಯರನ್ನು ಆಡಲು ಇಳಿಸಿದ್ದರು.
ಪಾಕ್ ನಾಯಕ ಶಾನ್ ಮಸೂದ್ ಬೌಲಿಂಗ್ ಆಯ್ಕೆ ಮಾಡಿಕೊಂಡ ನಂತರ, ಚೆಂಡಿಗೆ ಸ್ವಿಂಗ್ ನೀಡುತ್ತಿದ್ದ ಪಿಚ್‌ನಲ್ಲಿ ಪಾಕ್ ಬೌಲರ್‌ಗಳು ಪರಿಣಾಮಕಾರಿಯಾಗಿ ಬೌಲ್ ಮಾಡಿದರು. ಡೇವಿಡ್ ವಾರ್ನರ್ (38), ಉಸ್ಮಾನ್ ಖ್ವಾಜಾ (42) ಮತ್ತು ಸ್ಟೀವ್ ಸ್ಮಿತ್ (26) ಅವರ ವಿಕೆಟ್‌ಗಳನ್ನು ಪಡೆಯುವಲ್ಲಿ ಯಶಸ್ವಿಯಾದರು. ಆದರೆ ಸಹನೆಯಿಂದ ಆಡಿದ ಲಾಬುಷೇನ್ ಬೌಲರ್‌ಗಳನ್ನು ಹತಾಶಗೊಳಿಸಿದರು.
ಮೊದಲ ಟೆಸ್ಟ್ ಪಂದ್ಯವನ್ನು 360 ರನ್‌ಗಳಿಂದ ಗೆದ್ದುಕೊಂಡ ಆಸ್ಟ್ರೇಲಿಯಾ ಈ ಪಂದ್ಯವನ್ನೂ ಗೆದ್ದು ಸರಣಿ ಗೆಲ್ಲುವ ಉತ್ಸಾಹದಲ್ಲಿದೆ. ಅಂತಿಮ ಟೆಸ್ಟ್ ಜ. 3 ರಿಂದ 7ರವರೆಗೆ ಸಿಡ್ನಿಯಲ್ಲಿ ನಡೆಯಲಿದೆ.
ಪರ್ತ್ ಟೆಸ್ಟ್‌ನಲ್ಲಿ 164 ರನ್ ಗಳಿಸಿದ್ದ ವಾರ್ನರ್ ಕೇವಲ ಎರಡು ರನ್ ಗಳಿಸಿದ್ದಾಗ, ಎರಡನೇ ಸ್ಲಿಪ್‌ನಲ್ಲಿದ್ದ ಅಬ್ದುಲ್ಲಾ ಶಫೀಕ್ ಸುಲಭ ಕ್ಯಾಚನ್ನು ಕೈಚೆಲ್ಲಿದರು. 17 ರನ್ ಗಳಿಸಿದ್ದಾಗ ಚೆಂಡು ಬ್ಯಾಟಿನಂಚಿಗೆ ತಗುಲಿದರೂ ಸ್ಲಿಪ್ ಮೇಲಿಂದ ಚಿಮ್ಮಿಹೋಯಿತು. ಆದರೆ ಅವರ ಅದೃಷ್ಟ ಲಂಚ್‌ಗೆ ಮೊದಲಿನ ಓವರ್‌ನಲ್ಲಿ ಕೊನೆಗೊಂಡಿತು. ತಾತ್ಕಾಲಿಕ ಸ್ಪಿನ್ನರ್ ಅಗಾ ಸಲ್ಮಾನ್ ಬೌಲಿಂಗ್‌ನಲ್ಲಿ ಅವರು ಸ್ಲಿಪ್‌ನಲ್ಲಿದ್ದ ಬಾಬರ್ ಆಜಂ ಅವರಿಗೆ ಕ್ಯಾಚಿತ್ತರು.
37 ವರ್ಷದ ಖ್ವಾಜಾ, ವೇಗದ ಬೌಲರ್ ಹಸನ್ ಅಲಿ ಬೌಲಿಂಗ್‌ನಲ್ಲಿ ಸ್ಲಿಪ್‌ನಲ್ಲಿದ್ದ ಸಲ್ಮಾನ್‌ಗೆ ಕ್ಯಾಚ್ ನೀಡಿದರು (2–108). ಮೋಡಗಳು ದಟ್ಟೈಸುತ್ತಿದ್ದಂತೆ ಸ್ಮಿತ್ ಮತ್ತು ಲಾಬುಷೇನ್ ನಿಧಾನಗತಿಯಲ್ಲಿ ಆಡಿದರು. ರನ್‌ಗಳು ಬತ್ತತೊಡಗಿದವು. ಜಮಾಲ್ ಬೌಲಿಂಗ್‌ನಲ್ಲಿ ಲಾಬುಷೇನ್ ಮೊದಲ ಬೌಂಡರಿ ಗಳಿಸಿದ್ದು ಅವರೆದುರಿಸಿದ 75ನೇ ಎಸೆತದಲ್ಲಿ! ಸ್ಮಿತ್ 19ರಲ್ಲಿದ್ದಾಗ ಶಹೀನ್ ಶಾ ಅಫ್ರೀದಿ ಬೌಲಿಂಗ್‌ನಲ್ಲಿ ಎಲ್‌ಬಿ ತೀರ್ಪು ಪಡೆದಿದ್ದರು. ಆದರೆ ಮರುಪರೀಶೀಲನೆ ತೀರ್ಪಿನಲ್ಲಿ, ಚೆಂಡಿನ ಮಟ್ಟ ಬೇಲ್ಸ್‌ಗಿಂತ ಮೇಲಿದ್ದು ಅವರು ಬಚಾವಾದರು. ಆದರೆ ಕೆಲವೇ ನಿಮಿಷಗಳ ನಂತರ ಅವರು ಜಮಾಲ್ ಬೌಲಿಂಗ್‌ನಲ್ಲಿ ವಿಕೆಟ್ ಕೀಪರ್ ರಿಜ್ವಾನ್ ಅವರಿಗೆ ಕ್ಯಾಚಿತ್ತರು. ಈ ವೇಳೆ ಅಂಪೈರ್ ಔಟ್ ನೀಡಿರಲಿಲ್ಲ. ಆದರೆ ಮರುಪರಿಶೀಲನೆಯಲ್ಲಿ ಚೆಂಡು, ಬ್ಯಾಟಿಗೆ ಸ್ವಲ್ಪ ಮುತ್ತಿಕ್ಕಿದ್ದು ಸ್ಪಷ್ಟವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.