ADVERTISEMENT

ಟೆಸ್ಟ್ ಕ್ರಿಕೆಟ್: ಅಶ್ವಿನ್‌ಗೆ ಆರು ವಿಕೆಟ್, ಗ್ರೀನ್ ಚೊಚ್ಚಲ ಶತಕ

ಉಸ್ಮಾನ್ ಖ್ವಾಜಾ ಬ್ಯಾಟಿಂಗ್ ಬಲದಿಂದ ಆಸ್ಟ್ರೇಲಿಯಾ ದೊಡ್ಡ ಮೊತ್ತ

ಪಿಟಿಐ
Published 10 ಮಾರ್ಚ್ 2023, 19:31 IST
Last Updated 10 ಮಾರ್ಚ್ 2023, 19:31 IST
ವಿಕೆಟ್ ಗಳಿಸಿದ ಅಕ್ಷರ್ ಪಟೇಲ್ ಅವರನ್ನು ಅಭಿನಂದಿಸಿದ ಸಹ ಆಟಗಾರರು  –ಎಎಫ್‌ಪಿ ಚಿತ್ರ
ವಿಕೆಟ್ ಗಳಿಸಿದ ಅಕ್ಷರ್ ಪಟೇಲ್ ಅವರನ್ನು ಅಭಿನಂದಿಸಿದ ಸಹ ಆಟಗಾರರು  –ಎಎಫ್‌ಪಿ ಚಿತ್ರ   

ಅಹಮದಾಬಾದ್: ಬ್ಯಾಟರ್‌ಗಳು ಮಿಂಚಿದ ಇಲ್ಲಿಯ ನರೇಂದ್ರ ಮೋದಿ ಕ್ರೀಡಾಂಗಣ ಪಿಚ್‌ನಲ್ಲಿಯೂ ಆರ್. ಅಶ್ವಿನ್ ತಮ್ಮ ಕೈಚಳಕ ಮೆರೆದರು. ಆಸ್ಟ್ರೇಲಿಯಾ ಎದುರು ನಡೆಯುತ್ತಿರುವ ಬಾರ್ಡರ್‌ ಗಾವಸ್ಕರ್ ಟ್ರೋಫಿ ಟೂರ್ನಿಯ ನಾಲ್ಕನೇ ಟೆಸ್ಟ್‌ನಲ್ಲಿ ಆರು ವಿಕೆಟ್ ಗಳಿಸಿದ ಅವರು ಆತಿಥೇಯ ತಂಡದ ಹೋರಾಟಕ್ಕೆ ಜೀವ ತುಂಬಿದರು.

ಆದರೂ; ಆಸ್ಟ್ರೇಲಿಯಾ ತಂಡವು ಎಡಗೈ ಬ್ಯಾಟರ್ ಉಸ್ಮಾನ್ ಖ್ವಾಜಾ ಹಾಗೂ ಟೆಸ್ಟ್‌ ಕ್ರಿಕೆಟ್‌ನಲ್ಲಿ ತಮ್ಮ ಚೊಚ್ಚಲ ಶತಕ ದಾಖಲಿಸಿದ ಕ್ಯಾಮರಾನ್ ಗ್ರೀನ್ ಅವರ ನೆರವಿನಿಂದ ಮೊದಲ ಇನಿಂಗ್ಸ್‌ 480 ರನ್‌ಗಳ ಉತ್ತಮ ಮೊತ್ತ ಪೇರಿಸಿತು. ಅದಕ್ಕುತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಭಾರತ ತಂಡವು ವಿಕೆಟ್ ನಷ್ಟವಿಲ್ಲದೇ 36 ರನ್ ಗಳಿಸಿದೆ. ನಾಯಕ ರೋಹಿತ್ ಶರ್ಮಾ (ಬ್ಯಾಟಿಂಗ್ 17) ಹಾಗೂ ಶುಭಮನ್ ಗಿಲ್ (ಬ್ಯಾಟಿಂಗ್ 18) ಕ್ರೀಸ್‌ನಲ್ಲಿದ್ದಾರೆ.

ಅಶ್ವಿನ್ ಆರು ವಿಕೆಟ್: ಚೆನ್ನೈನ ಅಶ್ವಿನ್ ಮೊದಲ ದಿನದಾಟದಲ್ಲಿ ಒಂದು ವಿಕೆಟ್ ಗಳಿಸಿದ್ದರು. ಎರಡನೇ ದಿನವೂ ಬ್ಯಾಟರ್‌ಗಳಿಗೆ ರನ್‌ ಗಳಿಸಲು ಉತ್ತಮವಾಗಿದ್ದ ಪಿಚ್‌ನಲ್ಲಿ ಅಶ್ವಿನ್ ಐದು ವಿಕೆಟ್‌ಗಳನ್ನು ತಮ್ಮ ಖಾತೆಗೆ ಸೇರಿಸಿಕೊಂಡರು. ತವರಿನ ಅಂಗಳದಲ್ಲಿ ಇದು ಅವರ 26ನೇ ಐದು ವಿಕೆಟ್‌ ಗೊಂಚಲು. ಅವರು ಅನಿಲ್ ಕುಂಬ್ಳೆ ಅವರ ದಾಖಲೆಯನ್ನು ಮುರಿದರು.

ADVERTISEMENT

ಉಸ್ಮಾನ್–ಗ್ರೀನ್ ಜೊತೆಯಾಟ: ಶತಕ ಗಳಿಸಿದ್ದ ಉಸ್ಮಾನ್ ಹಾಗೂ 49 ರನ್ ಗಳಿಸಿದ್ದ ಗ್ರೀನ್ ಕ್ರೀಸ್‌ನಲ್ಲಿದ್ದರು. ಶುಕ್ರವಾರ ಬೆಳಿಗ್ಗೆಯೂ ಅವರು ಬೌಲರ್‌ಗಳ ತಂತ್ರಗಳಿಗೆ ಎದೆಗೊಟ್ಟು ನಿಂತರು. ಉಸ್ಮಾನ್ ಹೆಚ್ಚು ರಕ್ಷಣಾತ್ಮಕವಾಗಿ ಆಡಿದರು. ಆದರೆ ಗ್ರೀನ್ ಮಾತ್ರ ತಮ್ಮ ಆಕ್ರಮಣಶೈಲಿಯನ್ನು ಮುಂದುವರಿಸಿದರು. 170 ಎಸೆತಗಳಲ್ಲಿ 114 ರನ್‌ ಗಳಿಸಿದರು. ಅದರಲ್ಲಿ 18 ಬೌಂಡರಿಗಳಿದ್ದವು.

23 ವರ್ಷದ ಗ್ರೀನ್ ಅವರಿಗೆ ಇದು ಟೆಸ್ಟ್ ಕ್ರಿಕೆಟ್‌ನಲ್ಲಿ ಮೊದಲ ಶತಕ. 20ನೇ ಟೆಸ್ಟ್ ಆಡುತ್ತಿರುವ ಅವರು ಭಾರತದ ಬೌಲರ್‌ಗಳ ದಾಳಿಯನ್ನು ದಿಟ್ಟತನದಿಂದ ಎದುರಿಸಿದರು. ಅವರು ಉಸ್ಮಾನ್ ಅವರೊಂದಿಗೆ ಐದನೇ ವಿಕೆಟ್ ಜೊತೆಯಾಟದಲ್ಲಿ 208 ರನ್ ಸೇರಿಸಿದರು. ಅಶ್ವಿನ್ ಎಸೆತವನ್ನು ಕಟ್ ಮಾಡುವ ಯತ್ನದಲ್ಲಿ ಗ್ರೀನ್ ವಿಕೆಟ್‌ಕೀಪರ್ ಭರತ್‌ಗೆ ಕ್ಯಾಚಿತ್ತರು. ಅದರೊಂದಿಗೆ ಜೊತೆಯಾಟವೂ ಮುರಿದುಬಿತ್ತು.

ಇನ್ನೊಂದೆಡೆ ಅನುಭವಿ ಆಟಗಾರ ಉಸ್ಮಾನ್ (180; 422ಎ) ದ್ವಿಶತಕದ ಸನಿಹದಲ್ಲಿ ಎಡವಿದರು. ಚಹಾ ವಿರಾಮದ ನಂತರ ಅವರು ಅಕ್ಷರ್ ಪಟೇಲ್ ಬೀಸಿದ ಎಲ್‌ಬಿಡಬ್ಲ್ಯು ಬಲೆಯಲ್ಲಿ ಬಿದ್ದರು.

ಕೊನೆಯ ಹಂತದಲ್ಲಿ ನೇಥನ್ ಲಯನ್ (34; 96ಎ) ಹಾಗೂ ಟಾಡ್ ಮರ್ಫಿ (41; 61ಎ) ಒಂದಿಷ್ಟು ಕಾಡಿದರು.

ಸ್ಕೋರ್‌ ಕಾರ್ಡ್‌

ಮೊದಲ ಇನಿಂಗ್ಸ್: ಆಸ್ಟ್ರೇಲಿಯಾ: 480 (167.2 ಓವರ್‌) (ಗುರುವಾರ 90 ಓವರ್‌ಗಳಲ್ಲಿ 4ಕ್ಕೆ255)

ಉಸ್ಮಾನ್ ಎಲ್‌ಬಿಡಬ್ಲ್ಯು ಅಕ್ಷರ್ 180 (422ಎ, 4X21), ಗ್ರೀನ್ ಸಿ ಭರತ್‌ ಬಿ ಅಶ್ವಿನ್‌ 114 (170ಎ, 4X18), ಕ್ಯಾರಿ ಸಿ ಅಕ್ಷರ್ ಬಿ ಅಶ್ವಿನ್‌ 0 (4ಎ), ಸ್ಟಾರ್ಕ್‌ ಸಿ ಶ್ರೇಯಸ್‌ ಬಿ ಅಶ್ವಿನ್‌ 6 (20ಎ), ಲಯನ್‌ ಸಿ ಕೊಹ್ಲಿ ಬಿ ಅಶ್ವಿನ್‌ 34 (96ಎ, 4X6), ಮರ್ಫಿ ಎಲ್‌ಬಿಡಬ್ಲ್ಯು ಅಶ್ವಿನ್‌ 41 (61ಎ, 4X5), ಕುನೆಮನ್‌ ಔಟಾಗದೆ 0 (7ಎ) ಇತರೆ: 15 (ಬೈ 9, ಲೆಗ್‌ಬೈ 3, ವೈಡ್ 1, ನೋಬಾಲ್ 2)

ವಿಕೆಟ್ ಪತನ: 5-378 (ಕ್ಯಾಮರಾನ್ ಗ್ರೀನ್‌, 130.2), 6-378 (ಅಲೆಕ್ಸ್ ಕ್ಯಾರಿ, 130.6), 7-387 (ಮಿಚೆಲ್ ಸ್ಟಾರ್ಕ್‌, 135.3), 8-409 (ಉಸ್ಮಾನ್ ಖ್ವಾಜಾ, 146.1), 9-479 (ಟಾಡ್‌ ಮರ್ಫಿ, 165.3), 10-480 (ನೇಥನ್ ಲಯನ್‌, 167.2)

ಬೌಲಿಂಗ್‌: ಮೊಹಮ್ಮದ್ ಶಮಿ 31–3–134–2, ಉಮೇಶ್ ಯಾದವ್ 25–2–105–0, ಆರ್. ಅಶ್ವಿನ್ 47.2–15–91–6, ರವೀಂದ್ರ ಜಡೇಜ 35–5–89–1, ಅಕ್ಷರ್ ಪಟೇಲ್ 28–8–47–1, ಶ್ರೇಯಸ್ ಅಯ್ಯರ್ 1–0–2–0

ಭಾರತ ವಿಕೆಟ್‌ ನಷ್ಟವಿಲ್ಲದೆ 36 (10 ಓವರ್‌)

ರೋಹಿತ್‌ ಬ್ಯಾಟಿಂಗ್‌ 17 (33ಎ, 4X2), ಶುಭಮನ್‌ ಬ್ಯಾಟಿಂಗ್‌ 18 (27ಎ, 4X1, 6X1) ಇತರೆ: 1 (ಲೆಗ್‌ಬೈ 1)

ಬೌಲಿಂಗ್‌: ಮಿಚೆಲ್ ಸ್ಟಾರ್ಕ್‌ 3–1–7–0, ಕ್ಯಾಮರಾನ್ ಗ್ರೀನ್‌ 2–0–11–0, ನೇಥನ್ ಲಯನ್‌ 3–0–14–0, ಮ್ಯಾಥ್ಯು ಕುನೆಮನ್‌ 2–0–3–0

**

ಕಮಿನ್ಸ್‌ಗೆ ಮಾತೃವಿಯೋಗ
ಅಹಮದಾಬಾದ್ (ಪಿಟಿಐ):
ಆಸ್ಟ್ರೇಲಿಯಾ ತಂಡದ ವೇಗಿ ಪ್ಯಾಟ್ ಕಮಿನ್ಸ್ ಅವರ ತಾಯಿ ಮರಿಯಾ ಅವರು ಗುರುವಾರ ರಾತ್ರಿ ನಿಧನರಾದರು.

ಇಲ್ಲಿನಡೆಯುತ್ತಿರುವ ಟೆಸ್ಟ್‌ನಲ್ಲಿ ಶುಕ್ರವಾರ ಆಟಗಾರರು ತಮ್ಮ ತೋಳಿಗೆ ಕಪ್ಪುಪಟ್ಟಿ ಕಟ್ಟಿಕೊಂಡು ಮೃತರಿಗೆ ಗೌರವ ಸಲ್ಲಿಸಿದರು.

ಮರಿಯಾ ಅವರು 2005ರಿಂದಲೂ ಸ್ತನ ಕ್ಯಾನ್ಸ್‌ರ್‌ನಿಂದ ಬಳಲುತ್ತಿದ್ದರು. ಇತ್ತೀಚೆಗೆ ಅವರ ಆರೋಗ್ಯ ಸ್ಥಿತಿ ಬಿಗಡಾಯಿಸಿದ್ದರಿಂದ ಕಮಿನ್ಸ್‌ ಅವರು ಭಾರತ ಪ್ರವಾಸದ ಮಧ್ಯದಲ್ಲೇ ತವರಿಗೆ ಮರಳಿದ್ದರು. ಆದ್ದರಿಂದ ಇಂದೋರ್ ಹಾಗೂ ಅಹಮದಾಬಾದ್ ಟೆಸ್ಟ್‌ಗಳಲ್ಲಿ ಅವರ ಬದಲಿಗೆ ಸ್ಟೀವ್ ಸ್ಮಿತ್ ತಂಡದ ನಾಯಕತ್ವ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.