ಸಿಡ್ನಿ: ಡ್ರಾಗೊಂಡ ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಭಾರತೀಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಜೊತೆ ನಡೆದುಕೊಂಡ ರೀತಿ ಬಗ್ಗೆ ಆಸ್ಟ್ರೇಲಿಯಾ ತಂಡದ ನಾಯಕ ಟಿಮ್ ಪೇನ್ ಕ್ಷಮೆ ಕೇಳಿದ್ದಾರೆ. ತನ್ನ ಕೆಟ್ಟ ನಡವಳಿಕೆಯಿಂದ ತಾನೇ ತೀವ್ರ ನಿರಾಶೆಗೊಂಡಿರುವುದಾಗಿ ಅವರು ಹೇಳಿದ್ದಾರೆ.
ಇದೇವೇಳೆ, ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್ ಸಹ ಕ್ರೀಸ್‌ನಲ್ಲಿ ರಿಷಬ್ ಪಂತ್ ಅವರ ಗಾರ್ಡ್ ಮಾರ್ಕ್ ಅಳಿಸಿ ವಂಚಿಸಲು ಯತ್ನಿಸಿದ ತನ್ನ ನಡವಳಿಕೆಯಿಂದ ನನಗೇ ಆಘಾತವಾಗಿದೆ ಎಂದು ಮಾಧ್ಯಮಗಳ ಮುಂದೆ ಹೇಳಿದ್ದಾರೆ.
ಸಿಡ್ನಿ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ಗೆಲುವಿಗೆ ಅವಕಾಶ ನೀಡದೆ ಕ್ರೀನ್‌ನಲ್ಲಿ ಗಟ್ಟಿಯಾಗಿ ನಿಂತು ಪಂದ್ಯವನ್ನು ಡ್ರಾನತ್ತ ಕೊಂಡೊಯ್ದ ಅಶ್ವಿನ್ ಅವರ ಏಕಾಗ್ರತೆ ಕೆಡಿಸುವ ನನ್ನ ಯತ್ನದ ಹಿಂದೆ ತೀವ್ರ ಹತಾಶೆ ಇತ್ತು ಎಂದು ಪೇನ್ ಹೇಳಿದ್ದಾರೆ.
"ನಿನ್ನೆ ನಾನು ನಡೆದುಕೊಂಡ ರೀತಿ ಬಗ್ಗೆ ಕ್ಷಮೆಯಾಚಿಸಲು ಇಚ್ಛಿಸುತ್ತೇನೆ... ಪಂದ್ಯದಲ್ಲಿ ನನ್ನ ನಾಯಕತ್ವ ಅಷ್ಟು ಉತ್ತಮವಾಗಿರಲಿಲ್ಲ, ಪಂದ್ಯದ ಒತ್ತಡವನ್ನೆಲ್ಲ ನನ್ನ ಮೇಲೇ ಹಾಕಿಕೊಂಡೆ," ಎಂದು ಆಸ್ಟ್ರೇಲಿಯಾ ನಾಯಕ ಹೇಳಿದ್ದಾರೆ.
ಟಿಮ್ ಪೇನ್ ಪಂದ್ಯದ ಸಂದರ್ಭ ಅಶ್ವಿನ್ ಜೊತೆ ನಡೆಸಿದ ಸ್ಲೆಡ್ಜಿಂಗ್ ಘಟನೆಯ ಧ್ವನಿ ಸ್ಟಂಪ್ ಮೈಕ್ರೊಫೋನ್‌ಗಳಲ್ಲಿ ದಾಖಲಾಗಿತ್ತು.
2018 ರಲ್ಲಿ "ಸ್ಯಾಂಡ್‌ಪೇಪರ್-ಗೇಟ್" ಬಾಲ್-ಟ್ಯಾಂಪರಿಂಗ್ ಹಗರಣದ ಬಳಿಕ ಟೆಸ್ಟ್ ನಾಯಕನಾಗಿ ನೇಮಕಗೊಂಡ ತಾನು ತಂಡದ ವಿಷಕಾರಿ ಸಂಸ್ಕೃತಿಯನ್ನು ತೊಡೆದು ಹಾಕಿ ತಂಡದ ಘನತೆ ಹೆಚ್ಚಿಸುವ ತಾನೇ ಹಾಕಿಕೊಂಡ ತನ್ನ ಗುರಿಯನ್ನು ತಲುಪುವಲ್ಲಿ ದುರ್ಬಲನಾಗಿದ್ದೇನೆ ಎಂದು ಪೇನ್ ಒಪ್ಪಿಕೊಂಡಿದ್ದಾರೆ.
"ನಾನು ಆಟವನ್ನು ಆನಂದಿಸಲು ಬಯಸುವ ನಾಯಕ, ಮುಖದ ಮೇಲೆ ಮಂದಹಾಸದಿಂದ ಆಟವನ್ನು ಆಡಲು ಬಯಸುತ್ತೇನೆ. ನನ್ನ ನಿರೀಕ್ಷೆಗಳು ಮತ್ತು ನಮ್ಮ ತಂಡದ ಮಾನದಂಡಗಳನ್ನು ನಾನು ಪಾಲಿಸಿಲ್ಲ" ಎಂದು ಅವರು ಹೇಳಿದರು.
ಈ ಮಧ್ಯೆ, ಪಂದ್ಯದ ಎರಡನೆಯ ದಿನದಂದು ಅಂಪೈರ್ ಪಾಲ್ ವಿಲ್ಸನ್ ಅವರ ಮೇಲೆ ಅಸಮಾಧಾನ ವ್ಯಕ್ತಪಡಿಸಿದ ನಂತರ, ಪೇನ್‌ಗೆ ದಂಡ ವಿಧಿಸಲಾಗಿದೆ.
ಆಸ್ಟ್ರೇಲಿಯಾ ತಂಡ ಸ್ಲೆಡ್ಜಿಂಗ್ ಮತ್ತು ಕೆಟ್ಟ ಭಾಷೆ ಬಳಕೆ ಮಾಡುವ ಮೂಲಕ ಹಳೆಯ ದಿನಗಳಿಗೆ ಮರಳುತ್ತಿದೆ ಎಂದು ಇಂಗ್ಲೆಂಡ್‌ನ ಮಾಜಿ ಕ್ರಿಕೆಟಿಗ ಮೈಕಲ್ ವಾನ್ ಸೇರಿದಂತೆ ಹಲವರು ಟೀಕಿಸಿದ್ದರು.
ಈ ಹಿಂದೆ ಸ್ಯಾಂಡ್ ಪೇಪರ್ ಹಗರಣದಲ್ಲಿ ಹೆಸರು ಕಡಿಸಿಕೊಂಡಿದ್ದ ಸ್ಮಿತ್ ಸಹ ಉದ್ದೇಶಪೂರ್ವಕವಾಗಿ ರಿಷಬ್ ಪಂತ್ ಅವರ ಗಾರ್ಡ್ ಮಾರ್ಕ್ ಅಳಿಸಿದ ವಿಡಿಯೊ ಬಹಿರಂಗಗೊಂಡಿದ್ದವು. ಇದು ಅತ್ಯಂತ ಕಳಪೆ ಎಂದು ಮೈಕಲ್ ವಾನ್ ಟ್ವೀಟ್ ಮಾಡಿದರೆ, ವೀರೇಂದ್ರ ಸೆಹ್ವಾಗ್, ಆಸ್ಟ್ರೇಲಿಯಾ ತಂಡ ರಿಷಬ್ ಪಂತ್ ಗಾರ್ಡ್ ಮಾರ್ಕ್ ಅಳಿಸುವುದು ಸೇರಿದಂತೆ ಗೆಲ್ಲಲು ಬೇಕಾದ ಎಲ್ಲ ತಂತ್ರ ಬಳಸುತ್ತಿದೆ ಎಂದು ಟೀಕಿಸಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸ್ಮಿತ್, "ನನ್ನ ಈ ನಡವಳಿಕೆ ಬಗ್ಗೆ ನನಗೆ ನಾನೇ ಅತ್ಯಂತ ಆಘಾತಕ್ಕೊಳಗಾಗಿದ್ದೇನೆ ಮತ್ತು ನಿರಾಶೆಗೊಂಡಿದ್ದೇನೆ,"ಎಂದು ಆಸ್ಟ್ರೇಲಿಯಾ ಮಾಧ್ಯಮಗಳ ಮುಂದೆ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.