ADVERTISEMENT

ಆ್ಯಷಸ್: ಪಿಂಕ್ ಬಾಲ್ ಟೆಸ್ಟ್‌‌ನಲ್ಲಿ ಆಸೀಸ್‌ಗೆ ಭರ್ಜರಿ ಗೆಲುವು, 2-0 ಮುನ್ನಡೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಡಿಸೆಂಬರ್ 2021, 10:32 IST
Last Updated 20 ಡಿಸೆಂಬರ್ 2021, 10:32 IST
ಆಸ್ಟ್ರೇಲಿಯಾ ಆಟಗಾರರ ಸಂಭ್ರಮ
ಆಸ್ಟ್ರೇಲಿಯಾ ಆಟಗಾರರ ಸಂಭ್ರಮ   

ಅಡಿಲೇಡ್: ಪ್ರವಾಸಿ ಇಂಗ್ಲೆಂಡ್ ವಿರುದ್ಧ ಅಡಿಲೇಡ್‌ನಲ್ಲಿ ನಡೆದ ಆ್ಯಷಸ್ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲೂ ಆಸ್ಟ್ರೇಲಿಯಾ 275 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.

ಈ ಮೂಲಕ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-0 ಅಂತರದ ಮಹತ್ವದ ಮುನ್ನಡೆ ಕಾಯ್ದುಕೊಂಡಿದೆ.

ಅಡಿಲೇಡ್‌ನಲ್ಲಿ ಸಾಗಿದ ಪಿಂಕ್ ಬಾಲ್ ಹಗಲು-ರಾತ್ರಿ ಟೆಸ್ಟ್ ಪಂದ್ಯದ ಅಂತಿಮ ದಿನದಾಟದಲ್ಲಿ ಸೋಲನ್ನು ತಪ್ಪಿಸಿಕೊಳ್ಳಲು ಪರದಾಡಿದ ಆಂಗ್ಲರ ಪಡೆ ಅಂತಿಮವಾಗಿ 192 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. ಈ ಮೂಲಕ ಹೀನಾಯ ಸೋಲಿನ ಮುಖಭಂಗಕ್ಕೊಳಗಾಗಿದೆ.

ದ್ವಿತೀಯ ಟೆಸ್ಟ್ ಆರಂಭಕ್ಕೂ ಮುನ್ನ ಕೋವಿಡ್ ಸೋಂಕಿತ ವ್ಯಕ್ತಿಯೊಂದಿಗೆ ಸಂಪರ್ಕಕ್ಕೆ ಬಂದಿದ್ದ ನಾಯಕ ಪ್ಯಾಟ್ ಕಮಿನ್ಸ್ ಅಲಭ್ಯರಾಗಿದ್ದರು. ಇದರಿಂದಾಗಿ 'ಬಾಲ್ ಟ್ಯಾಂಪರಿಂಗ್' ಪ್ರಕರಣದ ಮೂರುವರೆ ವರ್ಷಗಳ ನಂತರ ತಂಡವನ್ನು ಮುನ್ನಡೆಸುವ ಅದೃಷ್ಟವನ್ನು ಸ್ಟೀವ್ ಸ್ಮಿತ್ ಪಡೆದಿದ್ದರು.

ಪಂದ್ಯಶ್ರೇಷ್ಠ: ಮಾರ್ನಸ್ ಲಾಬುಶೇನ್

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಆಸೀಸ್, ಮಾರ್ನಸ್ ಲಾಬುಶೇನ್ (103), ಡೇವಿಡ್ ವಾರ್ನರ್ (95), ಸ್ಟೀವ್ ಸ್ಮಿತ್ (93) ಹಾಗೂ ಅಲೆಕ್ಸ್ ಕ್ಯಾರಿ (51) ಅಮೋಘ ಆಟದ ನೆರವಿನಿಂದ ಒಂಬತ್ತು ವಿಕೆಟ್ ನಷ್ಟಕ್ಕೆ 473 ರನ್ ಗಳಿಸಿ ಡಿಕ್ಲೇರ್ ಘೋಷಿಸಿತು.

ಬಳಿಕ ಮಿಚೆಲ್ ಸ್ಟಾರ್ಕ್ (37ಕ್ಕೆ 4) ಹಾಗೂ ನೇಥನ್ ಲಯನ್ (58ಕ್ಕೆ 3) ದಾಳಿಗೆ ಸಿಲುಕಿದ ಇಂಗ್ಲೆಂಡ್, ಡೇವಿಡ್ ಮಲಾನ್ (80) ಹಾಗೂ ನಾಯಕ ಜೋ ರೂಟ್ (62) ಹೋರಾಟದ ಹೊರತಾಗಿಯೂ 236 ರನ್ನಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು.

ಮೊದಲ ಇನ್ನಿಂಗ್ಸ್‌ನಲ್ಲಿ 237 ರನ್‌ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಮುಂದುವರಿಸಿದ ಆಸೀಸ್, ಲಾಬುಶೇನ್ (51) ಹಾಗೂ ಟ್ರಾವಿಸ್ ಹೆಡ್ (51) ನೆರವಿನಿಂದ ಒಂಬತ್ತು ವಿಕೆಟ್ ನಷ್ಟಕ್ಕೆ 230 ರನ್ ಗಳಿಸಿ ಡಿಕ್ಲೇರ್ ಘೋಷಿಸಿತ್ತು.

ಬಳಿಕ 468 ರನ್‌ಗಳ ಬೃಹತ್ ಗುರಿ ಬೆನ್ನತ್ತಿದ ಇಂಗ್ಲೆಂಡ್, ಜೇ ರಿಚರ್ಡ್ಸನ್ (42ಕ್ಕೆ 5 ವಿಕೆಟ್) ದಾಳಿಗೆ ಸಿಲುಕಿ 192 ರನ್ನಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. ಇದರೊಂದಿಗೆ ಜೋಸ್ ಬಟ್ಲರ್ (26 ರನ್, 207 ಎಸೆತ) ಹಾಗೂ ಕ್ರಿಸ್ ವೋಕ್ಸ್ (44) ದಿಟ್ಟ ಹೋರಾಟ ವ್ಯರ್ಥವೆನಿಸಿತು.

ಬ್ರಿಸ್ಬೇನ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲೂ ಆಸ್ಟ್ರೇಲಿಯಾ ಒಂಬತ್ತು ವಿಕೆಟ್ ಅಂತರದ ಗೆಲುವು ದಾಖಲಿಸಿತ್ತು.ನಾಯಕತ್ವ ವಹಿಸಿದ್ದ ಚೊಚ್ಚಲ ಪಂದ್ಯದಲ್ಲೇ ಪ್ಯಾಟ್ ಕಮಿನ್ಸ್ ಐದು ವಿಕೆಟ್ ಸಾಧನೆ ಮಾಡಿದ್ದರು. ಈಗಮೂರನೇ ಪಂದ್ಯವು ಡಿಸೆಂಬರ್ 26ರಂದು ಮೆಲ್ಬರ್ನ್‌ನಲ್ಲಿಆರಂಭವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.