ಪರ್ತ್: ಬಾರ್ಡರ್ ಗಾವಸ್ಕರ್ ಟ್ರೋಫಿ ಸರಣಿಯ ಮೊದಲ ಟೆಸ್ಟ್‌ನಲ್ಲಿ ಭಾರಿ ಸೋಲು ಕಂಡ ತಂಡವನ್ನೇ ಎರಡನೇ ಟೆಸ್ಟ್‌ಗೆ ಉಳಿಸಿಕೊಳ್ಳಲು ಆಸ್ಟ್ರೇಲಿಯಾ ನಿರ್ಧರಿಸಿದೆ. ಆಲ್‌ರೌಂಡರ್ ಮಿಚೆಲ್ ಮಾರ್ಷ್ ಅವರ ಬೌಲಿಂಗ್ ಫಿಟ್ನೆಸ್ ಬಗ್ಗೆ ಮಾತ್ರ ಸ್ವಲ್ಪ ಕಳವಳವಿದೆ ಎಂದು ತಂಡದ ಕೋಚ್ ಹಾಗೂ ಆಯ್ಕೆಗಾರ ಆ್ಯಂಡ್ರೂ ಮೆಕ್‌ಡೊನಾಲ್ಡ್ ತಿಳಿಸಿದ್ದಾರೆ.
ಆಸ್ಟ್ರೇಲಿಯಾ ತಂಡ ಹೆಚ್ಚುವರಿ ತಾಲೀಮು ಪಡೆಯಲು ನಿಗದಿಗಿಂತ ಒಂದು ದಿನ ಮೊದಲೇ ಅಡಿಲೇಡ್‌ಗೆ ಹೊರಟಿತು. ಅಡಿಲೇಡ್ ಟೆಸ್ಟ್ ಪಿಂಕ್‌ಬಾಲ್ (ಹಗಲು–ರಾತ್ರಿ) ಪಂದ್ಯವಾಗಿದ್ದು ಡಿಸೆಂಬರ್ 6ರಂದು ಶುರುವಾಗಲಿದೆ.
‘ಪರ್ತ್‌ನಲ್ಲಿ ಆಡಿದ ತಂಡದ ಆಟಗಾರರೇ ಅಡಿಲೇಡ್‌ನಲ್ಲೂ ಇರುತ್ತಾರೆ’ ಎಂದು ಮೆಕ್‌ಡೊನಾಲ್ಡ್ ಅವರನ್ನು ಉಲ್ಲೇಖಿಸಿ ಕ್ರಿಕೆಟ್.ಕಾಮ್.ಎಯು ವರದಿ ಮಾಡಿದೆ.
ಪರ್ತ್ ಟೆಸ್ಟ್‌ನಲ್ಲಿ ಮಾರ್ಷ್ 17 ಓವರುಗಳನ್ನು ಮಾತ್ರ ಮಾಡಿದ್ದು ಮೂರು ವಿಕೆಟ್ ಪಡೆದಿದ್ದರು. ಅವರಿಗೆ ಹ್ಯಾಮ್‌ಸ್ಟ್ರಿಂಗ್ ನೋವು ಕಾಡುತ್ತಿದೆ. ‘ಮಾರ್ಷ್ ಫಿಟ್ನೆಸ್ ಬಗ್ಗೆ ಕಾದುನೋಡುತ್ತೇವೆ’ ಎಂದು ಅವರು ಹೇಳಿದರು.
ಮಾರ್ನಸ್ ಲಾಬುಷೇನ್ ಅವರ ಫಾರ್ಮ್ ಆಸ್ಟ್ರೇಲಿಯಾದ ಚಿಂತೆಗೆ ಕಾರಣವಾಗಿದೆ. ಅವರು ಲಯ ಕಂಡುಕೊಳ್ಳಲು ಪರದಾಡುತ್ತಿದ್ದಾರೆ. ಕೊನೆಯ 10 ಟೆಸ್ಟ್ ಇನಿಂಗ್ಸ್‌ಗಳಲ್ಲಿ ಲಾಬುಷೇನ್ ಕೇವಲ 13.66 ಸರಾಸರಿ ಹೊಂದಿದ್ದಾರೆ.
ಆದರೆ ಬ್ಯಾಟರ್ ಸಾಮರ್ಥ್ಯದ ಮೇಲೆ ಮೆಕ್‌ಡೊನಾಲ್ಡ್ ವಿಶ್ವಾಸವಿರಿಸಿಕೊಂಡಿದ್ದಾರೆ. ‘ಅವರು ನಮಗೆ ಅಗತ್ಯವಿರುವ ಆಟಗಾರ’ ಎನ್ನುವ ಮೂಲಕ ಮೆಕ್‌ಡೊನಾಲ್ಡ್, ಅನುಭವಿ ಆಟಗಾರನ ಬೆನ್ನಿಗೆ ನಿಂತಿದ್ದಾರೆ.
ಭಾರಿ ಸೋಲು ಕಂಡರೂ, ತಂಡದ ಮನೋಬಲ ಗಟ್ಟಿಯಾಗಿಯೇ ಇದೆ ಎಂದು ಮೆಕ್‌ಡೊನಾಲ್ಡ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.