ಬೆಂಗಳೂರು: ಶ್ರೇಯಸ್ ಅಯ್ಯರ್ ನಾಯಕತ್ವದ ಭಾರತ ‘ಎ’ ತಂಡ ಶನಿವಾರದಿಂದ ಆಲೂರಿನ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ‘ಎ’ ಎದುರು ಆರಂಭವಾಗಲಿರುವ ಎರಡನೇ ‘ಟೆಸ್ಟ್’ನಲ್ಲಿ ಗೆಲ್ಲಲೇ ಬೇಕಾದ ಒತ್ತಡದಲ್ಲಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ ಪ್ರವಾಸಿ ಬಳಗವು ಗೆದ್ದಿತ್ತು. ಇದರಿಂದಾಗಿ ಎರಡು ಪಂದ್ಯಗಳ ಸರಣಿಯಲ್ಲಿ 1–0 ಮುನ್ನಡೆ ಸಾಧಿಸಿದೆ. ಉಳಿದಿರುವ ಪಂದ್ಯವನ್ನು ಗೆದ್ದರೆ ಸಮಬಲ ಮಾಡಿಕೊಳ್ಳುವ ಅವಕಾಶ ಭಾರತ ಎ ತಂಡಕ್ಕೆ ಇದೆ. ಒಂದೊಮ್ಮೆ ಡ್ರಾ ಆದರೆ ಸರಣಿಯು ಮಿಷೆಲ್ ಮಾರ್ಷ್ ಬಳಗದ ಪಾಲಾಗುತ್ತದೆ.
ಆತಿಥೇಯ ತಂಡದ ಬೌಲರ್‌ಗಳು ಮೊದಲ ಪಂದ್ಯದಲ್ಲಿ ಉತ್ತಮವಾಗಿ ಆಡಿದ್ದರು. ಮಧ್ಯಮವೇಗಿ ಮೊಹಮ್ಮದ್ ಸಿರಾಜ್ ಅವರು ಒಟ್ಟು 11 ವಿಕೆಟ್‌ಗಳನ್ನು ಕಬಳಿಸಿದ್ದರು. ಸ್ಪಿನ್ನರ್ ಕುಲದೀಪ್ ಯಾದವ್ ಕೂಡ ಉತ್ತಮವಾಗಿ ಆಡಿದ್ದರು. ಆದರೆ ನಿಜವಾದ ಚಿಂತೆ ಇರುವುದು ಬ್ಯಾಟಿಂಗ್‌ನಲ್ಲಿ. ಮೊದಲ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ಅಂಕಿತ್ ಭಾವ್ನೆ (91 ರನ್) ಮತ್ತು ಎರಡನೇ ಇನಿಂಗ್ಸ್‌ನಲ್ಲಿ ಮಯಂಕ್ ಅಗರವಾಲ್ (80 ರನ್) ಅವರು ಅರ್ಧಶತಕಗಳನ್ನು ಗಳಿಸಿದ್ದರು. ಆದರೆ, ಅಭಿಮನ್ಯು ಈಶ್ವರನ್, ಆರ್. ಸಮರ್ಥ್, ನಾಯಕ ಅಯ್ಯರ್, ಕೃಷ್ಣಪ್ಪ ಗೌತಮ್ ಅವರಿಂದ ಹೆಚ್ಚು ರನ್‌ಗಳು ಹರಿದು ಬರಲಿಲ್ಲ. ಇದರಿಂದಾಗಿ ಕೊನೆಯ ಇನಿಂಗ್ಸ್‌ನಲ್ಲಿ 242 ರನ್‌ಗಳ ಗುರಿಯನ್ನು ಮುಟ್ಟಲು ತಂಡಕ್ಕೆ ಸಾಧ್ಯವಾಗಿರಲಿಲ್ಲ.
ಹೋದ ತಿಂಗಳು ದಕ್ಷಿಣ ಆಫ್ರಿಕಾ ‘ಎ’ ಎದುರು ನಡೆದಿದ್ದ ಸರಣಿಯಲ್ಲಿ ಭಾರತ ಎ ತಂಡವು 1–0ಯಿಂದ ಗೆದ್ದಿತ್ತು. ಚತುಷ್ಕೋನ ಏಕದಿನ ಕ್ರಿಕೆಟ್ ಸರಣಿಯಲ್ಲಿ ‘ಎ‘ ತಂಡವು ಮೂರನೇ ಸ್ಥಾನ ಪಡೆದಿತ್ತು. ಆಸ್ಟ್ರೇಲಿಯಾ ‘ಎ’ ತಂಡವು ಫೈನಲ್‌ನಲ್ಲಿ ಭಾರತ ‘ಬಿ’ ಎದುರು ಸೋತಿತ್ತು.
ಆರಂಭಿಕ ಬ್ಯಾಟ್ಸ್‌ಮನ್ ಪೃಥ್ವಿ ಶಾ ಮತ್ತು ಹನುಮವಿಹಾರಿ ಅವರು ಇಂಗ್ಲೆಂಡ್‌ನಲ್ಲಿ ಆಡುತ್ತಿರುವ ಭಾರತ ತಂಡದಲ್ಲಿದ್ದಾರೆ. ಆದ್ದರಿಂದ ಇಲ್ಲಿ ಶುಭಮನ್ ಗಿಲ್ ಅವರಿಗೆ ಕಣಕ್ಕಿಳಿಯುವ ಅವಕಾಶ ಸಿಗಲಿದೆ.
ಆಸ್ಟ್ರೇಲಿಯಾ ಬಳಗವು ಮೊದಲ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಅಲ್ಪ ಹಿನ್ನಡೆ ಸಾಧಿಸಿತ್ತು. ಆದರೆ ನಂತರ ಅದು ಪುಟಿದೇಳಲು ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಟ್ರಾವಿಸ್ ಹೆಡ್ ಕಾರಣರಾಗಿದ್ದರು.
ಬೌಲಿಂಗ್ ವಿಭಾಗದಲ್ಲಿ ಮಧ್ಯಮವೇಗಿಗಳಾದ ಮೈಕೆಲ್ ನೆಸೆರ್, ಮಾರ್ನಸ್ ಲಾಬುಚಾನ್, ಬ್ರೆಂಡನ್ ಡಾಜೆಟ್ ಅವರು ಉತ್ತಮವಾಗಿ ಆಡಿದ್ದರು. ಅವರ ದಾಳಿಯನ್ನು ಹಿಮ್ಮೆಟ್ಟಿಸಲು ಆತಿಥೇಯ ಬ್ಯಾಟ್ಸ್‌ಮನ್‌ಗಳು ದಿಟ್ಟವಾಗಿ ಆಡಬೇಕಿದೆ.
ತಂಡಗಳು: ಭಾರತ ‘ಎ’: ಶ್ರೇಯಸ್ ಅಯ್ಯರ್(ನಾಯಕ), ಎ.ಆರ್. ಈಶ್ವರನ್, ಶುಭಮನ್ ಗಿಲ್, ಅಂಕಿತ್ ಭಾವ್ನೆ, ಶಾಬಾಜ್ ನದೀಂ, ಕುಲದೀಪ್ ಯಾದವ್, ಕೆ.ಎಸ್. ಭರತ್, ಅಂಕಿತ್ ರಜಪೂತ್, ಕೆ.ಗೌತಮ್, ಮಯಂಕ್ ಅಗರವಾಲ್, ಆರ್. ಸಮರ್ಥ, ರಜನೀಶ್ ಗುರುಬಾನಿ, ನವದೀಪ್ ಸೈನಿ, ಮೊಹಮ್ಮದ್ ಸಿರಾಜ್.
ಆಸ್ಟ್ರೇಲಿಯಾ ‘ಎ’: ಟ್ರಾವಿಸ್ ಹೆಡ್(ನಾಯಕ). ಅಲೆಕ್ಸ್ ಕ್ಯಾರಿ, ಮಾರ್ನಸ್ ಲಾಬುಚಾನ್, ಮೈಕೆಲ್ ನೆಸರ್, ಜೇ ರಿಚರ್ಡ್‌ಸನ್, ಡಾರ್ಚಿ ಶಾರ್ಟ್, ಬಿಲ್ಲಿ ಸ್ಟಾನ್‌ಲೇಕ್, ಕ್ರಿಸ್ ಟ್ರಿಮೇನ್, ಜ್ಯಾಕ್ ವೈಲ್ಡ್‌ರ್‌ಮುತ್, ಜೊಲ್ ಪ್ಯಾರಿಸ್, ಜೊನಾಥನ್ ಮೆರಿಯೊ, ಕ್ಯಾಮರಾನ್ ಗ್ರೀನ್, ಬ್ರೆಂಡನ್ ಡಾಜೆಟ್, ಜಾನ್ ಹಾಲಂಡ್, ಕರ್ಟಿಸ್ ಪ್ಯಾಟರ್ಸನ್, ಉಸ್ಮಾನ್ ಖ್ವಾಜಾ, ಪೀಟರ್ ಹ್ಯಾಂಡ್ಸ್‌ಕಂಬ್, ಆಷ್ಟನ್ ಆಗರ್, ಮಿಚೆಲ್ ಮಾರ್ಷ್, ಮ್ಯಾಥ್ಯೂ ರೆನ್‌ಶಾ, ಮಿಚೆಲ್ ಸ್ವೆಪ್ಸನ್.
ಪಂದ್ಯ ಆರಂಭ: ಬೆಳಿಗ್ಗೆ 9
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.