ADVERTISEMENT

ಬಾರ್ಡರ್‌–ಗವಾಸ್ಕರ್‌ ಸರಣಿ: ಮೊದಲ ಪಂದ್ಯದ ಮೇಲೆ ಭಾರತ ಹಿಡಿತ, ಆತಂಕದಲ್ಲಿ ಆಸಿಸ್‌

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2018, 10:59 IST
Last Updated 9 ಡಿಸೆಂಬರ್ 2018, 10:59 IST
ಪೀಟರ್‌ ಹ್ಯಾಂಡ್ಸ್‌ಕಂಬ್‌ ವಿಕೆಟ್‌ ಪಡೆದ ಸಂಭ್ರಮದಲ್ಲಿ ಭಾರತ ತಂಡ
ಪೀಟರ್‌ ಹ್ಯಾಂಡ್ಸ್‌ಕಂಬ್‌ ವಿಕೆಟ್‌ ಪಡೆದ ಸಂಭ್ರಮದಲ್ಲಿ ಭಾರತ ತಂಡ   

ಅಡಿಲೇಡ್‌:ಭಾರತ ನೀಡಿದ 323ರನ್‌ಗಳ ಗೆಲುವಿನ ಗುರಿ ಬೆನ್ನತ್ತಿರುವ ಆಸ್ಟ್ರೇಲಿಯಾ ತಂಡ ಪ್ರಮುಖ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಪಂದ್ಯ ಮುಕ್ತಾಯಕ್ಕೆ ಇನ್ನೊಂದು ದಿನದ ಆಟ ಬಾಕಿ ಇದ್ದು, ವಿರಾಟ್‌ ಕೊಹ್ಲಿ ಪಡೆ ಪಂದ್ಯದ ಮೇಲಿನ ಹಿಡಿತ ಬಿಗಿಗೊಳಿಸಿದೆ.

ಇಲ್ಲಿನ ಓವಲ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವಬಾರ್ಡರ್‌–ಗವಾಸ್ಕರ್‌ ಟೆಸ್ಟ್‌ ಸರಣಿಯ ಮೊದಲ ಪಂದ್ಯ ಗೆಲ್ಲಲು ಆತಿಥೇಯ ತಂಡ ಕೊನೆಯ ದಿನ 219ರನ್‌ ಗಳಿಸಬೇಕಿದೆ.ಉಳಿದಿರುವ ಕೇವಲ ಆರು ವಿಕೆಟ್‌ ಮಾತ್ರ.

ಗುರುವಾರ ಆರಂಭವಾದ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಭಾರತ ಎಲ್ಲ ವಿಕೆಟ್‌ ಕಳೆದುಕೊಂಡು 250 ರನ್‌ ಗಳಿಸಿತ್ತು. ಇದಕ್ಕುತ್ತರವಾಗಿ ಟಿಮ್‌ ಪೇನ್‌ ಬಳಗ 235 ರನ್‌ಗಳಿಗೆ ಆಲೌಟ್‌ ಆಗಿತ್ತು.15 ರನ್‌ಗಳ ಅಲ್ಪ ಮುನ್ನಡೆ ಪಡೆದಿದ್ದ ಪ್ರವಾಸಿ ತಂಡ ಎರಡನೇ ಇನಿಂಗ್ಸ್‌ನಲ್ಲಿ 307 ರನ್‌ಗಳಿಸಿತ್ತು.

ADVERTISEMENT
ಎರಡನೇ ಇನಿಂಗ್ಸ್‌ನಲ್ಲಿ 70 ರನ್‌ ಗಳಿಸಿದ ಅಜಿಂಕ್ಯಾ ರಹಾನೆ ಬ್ಯಾಟಿಂಗ್‌ ವೇಳೆ ಪುಟಿದ ಚೆಂಡನ್ನು ವೀಕ್ಷಿಸಿದ್ದು ಹೀಗೆ

ಸವಾಲಿನ ಗುರಿ ಎದುರು ಎರಡನೇ ಇನಿಂಗ್ಸ್‌ ಆರಂಭಿಸಿದ ಪೇನ್‌ ಬಳಗಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಬ್ಯಾಟಿಂಗ್‌ ಆರಂಭಿಸಿದ ಆ್ಯರನ್‌ ಫಿಂಚ್‌ ಹಾಗೂ ಮಾರ್ಕಸ್‌ ಹ್ಯಾರಿಸ್‌ ಜೋಡಿಯನ್ನು ಸ್ಪಿನ್ನರ್‌ ಅಶ್ವಿನ್‌ 12 ನೇ ಓವರ್‌ನಲ್ಲಿ ಬೇರ್ಪಡಿಸಿದರು. ಫಿಂಚ್‌ 11 ರನ್‌ ಗಳಿಸಿ ನಿರ್ಗಮಿಸಿದರೆ, ಹ್ಯಾರಿಸ್‌(26) 17ನೇ ಓವರ್‌ನಲ್ಲಿ ವಿಕೆಟ್‌ ಒಪ್ಪಿಸಿದರು. ಈ ವೇಳೆ ತಂಡದ ಮೊತ್ತ 44ರನ್‌.

ಬಳಿಕ ಬಂದ ಉಸ್ಮಾನ್‌ ಖವಾಜ(08) ಹಾಗೂ ಪೀಟರ್‌ ಹ್ಯಾಂಡ್ಸ್‌ಕಂಬ್‌(14) ಸಾಮರ್ಥ‌್ಯಕ್ಕೆ ತಕ್ಕ ಆಟವಾಡಲಿಲ್ಲ. ಸದ್ಯ ಶಾನ್‌ ಮಾರ್ಷ್‌ ಹಾಗೂ ಟ್ರಾವಿಸ್‌ ಹೆಡ್‌ಕ್ರೀಸ್‌ನಲ್ಲಿದ್ದು, ಕ್ರಮವಾಗಿ 31, 11 ರನ್‌ ಗಳಿಸಿ ಆಡುತ್ತಿದ್ದಾರೆ.

ತಲಾ ಎರಡು ವಿಕೆಟ್‌ ಉರುಳಿಸಿರುವಅಶ್ವಿನ್‌ ಹಾಗೂ ಮೊಹಮದ್‌ ಶಮಿ,ಭಾರತ ಪಾಳಯದಲ್ಲಿ ಗೆಲುವಿನ ಆಸೆ ಮೂಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.