ADVERTISEMENT

AUS vs WI | ಲಾಬುಷೇನ್–ಸ್ಮಿತ್ ‘ದ್ವಿಶತಕ’ ಭರಾಟೆ; ಆಸ್ಟ್ರೇಲಿಯಾ ಬೃಹತ್ ಮೊತ್ತ

ವಿಂಡೀಸ್ ಎದುರಿಗೆ ಬೃಹತ್ ಮೊತ್ತ ಪೇರಿಸಿಟ್ಟ ಆಸ್ಟ್ರೇಲಿಯಾ; ಟ್ರಾವಿಸ್ ಹೆಡ್‌ ಮಿಂಚಿನ ಬ್ಯಾಟಿಂಗ್

ಏಜೆನ್ಸೀಸ್
Published 1 ಡಿಸೆಂಬರ್ 2022, 12:34 IST
Last Updated 1 ಡಿಸೆಂಬರ್ 2022, 12:34 IST
ಸ್ಟೀವನ್ ಸ್ಮಿತ್ ಮತ್ತು ಮಾರ್ನಸ್ ಲಾಬುಷೇನ್  –ಎಎಫ್‌ಪಿ ಚಿತ್ರ
ಸ್ಟೀವನ್ ಸ್ಮಿತ್ ಮತ್ತು ಮಾರ್ನಸ್ ಲಾಬುಷೇನ್  –ಎಎಫ್‌ಪಿ ಚಿತ್ರ   

ಪರ್ತ್: ಮಾರ್ನಸ್ ಲಾಬುಷೇನ್ ಮತ್ತು ಸ್ಟೀವ್ ಸ್ಮಿತ್ ಅವರಿಬ್ಬರೂ ಗಳಿಸಿದ ದ್ವಿಶತಕಗಳ ಬಲದಿಂದ ಆಸ್ಟ್ರೇಲಿಯಾ ತಂಡವು ವೆಸ್ಟ್ ಇಂಡೀಸ್ ಎದುರಿನ ಟೆಸ್ಟ್‌ ಕ್ರಿಕೆಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಬೃಹತ್ ಮೊತ್ತ ಗಳಿಸಿತು.

ಪರ್ತ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಎರಡನೇ ದಿನವಾದ ಗುರುವಾರ ಆಸ್ಟ್ರೇಲಿಯಾ ತಂಡವು 152.4 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 598 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಬ್ಯಾಟಿಂಗ್ ಆರಂಭಿಸಿದ ವೆಸ್ಟ್ ಇಂಡೀಸ್ ತಂಡವು ದಿನದಾಟದ ಮುಕ್ತಾಯಕ್ಕೆ 25 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 74 ರನ್‌ ಗಳಿಸಿದೆ. ಪದಾರ್ಪಣೆ ಪಂದ್ಯ ಆಡುತ್ತಿರುವ ತೇಜನಾರಾಯಣ್ ಚಂದ್ರಪಾಲ್ (ಬ್ಯಾಟಿಂಗ್ 47) ಮತ್ತು ಕ್ರೇಗ್ ಬ್ರಾಥ್‌ವೇಟ್ (ಬ್ಯಾಟಿಂಗ್ 18) ಕ್ರೀಸ್‌ನಲ್ಲಿದ್ದಾರೆ.

ಮೊದಲ ದಿನದಾಟದಲ್ಲಿ ಆಸ್ಟ್ರೇಲಿಯಾ ತಂಡವು 90 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 293 ರನ್ ಗಳಿಸಿತ್ತು. ಲಾಬುಷೇನ್ 154 ಹಾಗೂ ಸ್ಮಿತ್ 59 ರನ್ ಗಳಿಸಿ ಕ್ರೀಸ್‌ನಲ್ಲಿದ್ದರು. ಎರಡನೇ ದಿನದಲ್ಲಿ ಇಬ್ಬರ ಜೊತೆಯಾಟ ಮುಂದುವರಿಯಿತು. ಮೂರನೇ ವಿಕೆಟ್‌ಗೆ ಅವರು ಒಟ್ಟು 251 ರನ್‌ಗಳನ್ನು ಸೇರಿಸಿದರು. ಬ್ರೆಥ್‌ವೇಟ್ ಬೌಲಿಂಗ್‌ನಲ್ಲಿ ಲಾಬುಷೇನ್ ಔಟಾದಾಗ ವಿಂಡೀಸ್ ಬಳಗ ಸಂಭ್ರಮಿಸಿತು.

ADVERTISEMENT

ಆದರೆ ಕ್ರೀಸ್‌ಗೆ ಬಂದ ಟ್ರಾವಿಸ್ ಹೆಡ್‌ (99; 95ಎ, 4X11) ಇನಿಂಗ್ಸ್‌ನ ಚಹರೆಯನ್ನೇ ಬದಲಿಸಿಬಿಟ್ಟರು. ಟಿ20 ಮಾದರಿಯಲ್ಲಿ ಬ್ಯಾಟ್ ಬೀಸಿದ ಅವರು ಕೇವಲ ಒಂದು ರನ್ ಅಂತರದಿಂದ ಶತಕ ಕೈತಪ್ಪಿಸಿಕೊಂಡರು. ಅವರು ಮತ್ತು ಸ್ಮಿತ್ ಸೇರಿ ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 196 ರನ್‌ಗಳನ್ನು ಸೇರಿಸಿದರು.

ಸಂಕ್ಷಿಪ್ತ ಸ್ಕೋರು:ಮೊದಲ ಇನಿಂಗ್ಸ್
ಆಸ್ಟ್ರೇಲಿಯಾ:
152.4 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 598 ಡಿಕ್ಲೇರ್ಡ್ (ಉಸ್ಮಾನ್ ಖ್ವಾಜಾ 65, ಮಾರ್ನಸ್ ಲಾಬುಷೇನ್ 204, ಸ್ಟೀವ್ ಸ್ಮಿತ್ ಔಟಾಗದೆ 200, ಟ್ರಾವಿಸ್ ಹೆಡ್ 99, ಕ್ರೇಗ್ ಬ್ರಾಥ್‌ವೇಟ್ 65ಕ್ಕೆ2)

ವೆಸ್ಟ್ ಇಂಡೀಸ್: 25 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೇ 74 (ಕ್ರೇಗ್ ಬ್ರಾಥ್‌ವೇಟ್ ಬ್ಯಾಟಿಂಗ್ 18, ತೇಜನಾರಾಯಣ್ ಚಂದ್ರಪಾಲ್ ಬ್ಯಾಟಿಂಗ್ 47)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.