ಮೆಲ್ಬರ್ನ್: ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮೆಗ್ ಲ್ಯಾನಿಂಗ್ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ.
13 ವರ್ಷ ಅವರು ಆಸ್ಟ್ರೇಲಿಯಾ ತಂಡದಲ್ಲಿ ಆಡಿದ್ದಾರೆ. ತಂಡವು ಏಳು ಬಾರಿ ವಿಶ್ವಕಪ್ ಜಯಿಸಿದಾಗ ಪ್ರತಿನಿಧಿಸಿದ್ದರು. ಅದರಲ್ಲಿ ಐದು ಬಾರಿ ಅವರ ನಾಯಕತ್ವದಲ್ಲಿಯೇ ತಂಡವು ವಿಶ್ವಕಪ್ ಜಯಿಸಿತ್ತು.
31 ವರ್ಷದ ಮೆಗ್ ಲ್ಯಾನಿಂಗ್ ನಾಯಕತ್ವದ ಆಸ್ಟ್ರೇಲಿಯಾ ಈಚೆಗೆ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿಯೂ ಚಿನ್ನ ಜಯಿಸಿತ್ತು. ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ (ಎಲ್ಲ ಮಾದರಿ ಸೇರಿ) ಅತಿ ಹೆಚ್ಚು ರನ್ (8352) ಗಳಿಸಿದ ಆಸ್ಟ್ರೇಲಿಯಾದ ಆಟಗಾರ್ತಿ ಎಂಬ ಹೆಗ್ಗಳಿಕೆಯೂ ಅವರದ್ದಾಗಿದೆ. ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದು, ಟಿ20 ಲೀಗ್‌ಗಳಲ್ಲಿ ಆಡಲಿದ್ದಾರೆ.
‘ಕ್ರಿಕೆಟ್‌ನಿಂದ ನಿವೃತ್ತಿ ಪಡೆಯುವುದು ನನ್ನ ಅತ್ಯಂತ ಕಠಿಣ ನಿರ್ಧಾರವಾಗಿದೆ. ಆದರೆ ವಿದಾಯ ಹೇಳಲು ಇದು ಸೂಕ್ತ ಸಮಯವಾಗಿದೆ’ ಎಂದು ಲ್ಯಾನಿಂಗ್ ಹೇಳಿದ್ದಾರೆ.
‘13 ವರ್ಷಗಳ ಕಾಲ ಅಂತರರಾಷ್ಟ್ರೀಯ ಕ್ರಿಕೆಟ್ ಆಡಿದ್ದು ನನ್ನ ಅದೃಷ್ಟ. ತಂಡದ ಯಶಸ್ಸಿಗಾಗಿ ಆಡಿದ್ದು ಮತ್ತು ಸಹ ಆಟಗಾರ್ತಿಯರೊಂದಿಗೆ ಯಶಸ್ಸು ಹಂಚಿಕೊಂಡ ಕ್ಷಣಗಳು ಜೀವನದುದ್ದಕ್ಕೂ ನನ್ನೊಂದಿಗೆ ಇರಲಿವೆ’ ಎಂದು ಲ್ಯಾನಿಂಗ್ ಹೇಳಿದ್ದಾರೆ.
2000ರ ಸಂದರ್ಭದಲ್ಲಿ ಆಸ್ಟ್ರೇಲಿಯಾ ಪುರುಷರ ತಂಡವು ಯಶಸ್ಸಿನ ಸುವರ್ಣ ಯುಗ ಕಂಡಿತ್ತು. ಅದೇ ರೀತಿಯಲ್ಲಿ ಆಸ್ಟ್ರೇಲಿಯಾ ಮಹಿಳಾ ತಂಡವು ಲ್ಯಾನಿಂಗ್ ನಾಯಕತ್ವದಲ್ಲಿ ಅಗಾಧ ಸಾಧನೆ ಮಾಡಿದೆ.
ಈಚೆಗೆ ಲ್ಯಾನಿಂಗ್ ಅವರ ಅನುಪಸ್ಥಿತಿಯಲ್ಲಿ ಹಂಗಾಮಿ ನಾಯಕಿಯಾಗಿದ್ದ ಅಲೀಸಾ ಹೀಲಿ ಅವರೇ ಪೂರ್ಣಾವಧಿ ನಾಯಕತ್ವ ವಹಿಸುವ ಸಾಧ್ಯತೆ ಇದೆ.
ಲ್ಯಾನಿಂಗ್ ನಿವೃತ್ತಿ ನಿರ್ಧಾರವು ದಿಢೀರ್ ಆಗಿಲ್ಲ. ಅವರು ಈ ವರ್ಷ ಇಂಗ್ಲೆಂಡ್, ಐರ್ಲೆಂಡ್ ಮತ್ತು ತವರಿನಲ್ಲಿಯೇ ನಡೆದ ವೆಸ್ಟ್ ಇಂಡೀಸ್ ಎದುರಿನ ಸರಣಿಗಳಿಗೆ ಗೈರುಹಾಜರಾಗಿದ್ದರು. ಅವರಿಗೆ ಆನಾರೋಗ್ಯ ಇದೆ ಎಂಬ ಮಾತುಗಳೂ ಕೇಳಿಬಂದಿದ್ದವು. ಆದರೆ ಅಧಿಕೃತವಾಗಿ ಈ ಬಗ್ಗೆ ಮಾಹಿತಿ ಇಲ್ಲ. 2022ರಲ್ಲಿಯೂ ಅವರು ಆರು ತಿಂಗಳೂ ವಿಶ್ರಾಂತಿ ತೆಗೆದುಕೊಂಡಿದ್ದರು. ಆ ಅವಧಿಯಲ್ಲಿ ಅವರು ಮೆಲ್ಬರ್ನ್‌ನಲ್ಲಿರುವ ಬಾರಿಷ್ತಾ ಕೆಫೆಯಲ್ಲಿ ಕೆಲಸ ಮಾಡಿದ್ದರು.
‘ಕಳೆದ 18 ತಿಂಗಳುಗಳಿಂದ ಈ ತೀರ್ಮಾನದ ಬಗ್ಗೆ ಯೋಚಿಸುತ್ತಲೇ ಇದ್ದೆ. ನನ್ನೊಳಗಿನ ಸಾಮರ್ಥ್ಯ ಅಂತಿಮ ಹಂತದತ್ತ ಸಾಗುತ್ತಿದೆ ಎನಿಸುತ್ತಿತ್ತು. ಇದೀಗ ಗಟ್ಟಿ ಧೈರ್ಯ ಮಾಡಿ ನಿರ್ಧಾರ ಕೈಗೊಂಡೆ’ ಎಂದೂ ಮೆಗ್ ಹೇಳಿದ್ದಾರೆ.
ಸಿಂಗಪುರದಲ್ಲಿ ಜನಿಸಿ, ಆಸ್ಟ್ರೇಲಿಯಾದಲ್ಲಿ ಬೆಳೆದವರು ಲ್ಯಾನಿಂಗ್. 2010ರಲ್ಲಿ ಅವರು ನ್ಯೂಜಿಲೆಂಡ್ ವಿರುದ್ಧ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಆಗ ಅವರಿಗೆ 18 ವರ್ಷವಾಗಿತ್ತು. ಶತಕ ಗಳಿಸಿದ ಅತ್ಯಂತ ಕಿರಿಯ ವಯಸ್ಸಿನ ಆಟಗಾರ್ತಿ, ಅತಿ ವೇಗದ ಶತಕ (40 ಎಸೆತದಲ್ಲಿ 100) ಗಳಿಕೆ ಮಾಡಿದ್ದು ಅವರ ದಾಖಲೆಗಳು. 21 ವರ್ಷ ವಯಸ್ಸಿನವರಿದ್ದಾಗಲೇ ಹಂಗಾಮಿ ನಾಯಕಿಯಾಗಿ ತಂಡವನ್ನು ಮುನ್ನಡೆಸಿದರು. 2014ರಲ್ಲಿ ಪೂರ್ಣಾವಧಿ ನಾಯಕಿಯಾದರು.
2017ರಲ್ಲಿ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಭಾರತದ ಎದುರು ಲ್ಯಾನಿಂಗ್ ಬಳಗವು ಸೋತಿತ್ತು.
‘ಆಸ್ಟ್ರೇಲಿಯಾ ಕ್ರಿಕೆಟ್ ಪರವಾಗಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸು ತ್ತೇನೆ. ಅವರ ಅಮೋಘ ವೃತ್ತಿಜೀವನವು ಪ್ರೇರಣಾದಾಯಕ. ನಾಯಕಿಯಾಗಿ ಆಸ್ಟ್ರೇಲಿಯಾ ತಂಡಕ್ಕೆ ನೀಡಿದ ಕಾಣಿಕೆ ಅಪಾರ’ ಎಂದು ಕ್ರಿಕೆಟ್ ಆಸ್ಟ್ರೇಲಿಯಾದ ಸಿಇಒ ನಿಕ್ ಹಾಕ್ಲಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.