ADVERTISEMENT

ದಿಟ್ಟ ಆಟಗಾರ ‘ಮಾರ್ನಸ್‌ ಲಾಬುಶೇನ್‌‘

ಬಸವರಾಜ ದಳವಾಯಿ
Published 1 ಡಿಸೆಂಬರ್ 2019, 19:30 IST
Last Updated 1 ಡಿಸೆಂಬರ್ 2019, 19:30 IST
ಚೆಂಡನ್ನು ಬೌಂಡರಿಯತ್ತ ಸಾಗಿಸಿದ ಮಾರ್ನಸ್‌ ಲಾಬುಶೇನ್‌–ಎಎಫ್‌ಪಿ ಚಿತ್ರ
ಚೆಂಡನ್ನು ಬೌಂಡರಿಯತ್ತ ಸಾಗಿಸಿದ ಮಾರ್ನಸ್‌ ಲಾಬುಶೇನ್‌–ಎಎಫ್‌ಪಿ ಚಿತ್ರ   

ಅದು ಪ್ರತಿಷ್ಠಿತ ಆ್ಯಷಸ್‌ ಸರಣಿಯ ಎರಡನೇ ಟೆಸ್ಟ್‌ ಪಂದ್ಯದ ನಾಲ್ಕನೇ ದಿನದ ಆಟ. ಇಂಗ್ಲೆಂಡ್‌ನ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಹಣಾಹಣಿ. ಆಸ್ಟ್ರೇಲಿಯಾ ತಂಡಕ್ಕೆ ಇಂಗ್ಲೆಂಡ್‌ 267 ರನ್‌ಗಳ ಗೆಲುವಿನ ಗುರಿ ನೀಡಿತ್ತು. ಅದಾಗಲೇ19 ರನ್‌ಗಳಿಗೆ ಎರಡು ವಿಕೆಟ್‌ ಕಳೆದುಕೊಂಡಿದ್ದ ಕಾಂಗರೂ ಪಡೆಗೆ ಗಾಯದ ಮೇಲೆ ಬರೆ ಎಂಬಂತೆ ‘ಕಂಕಷನ್‌’ಗೆ (ಗಾಯಗೊಂಡವರ ಬದಲಿಗೆ ಆಟಗಾರ ಕಣಕ್ಕೆ ಇಳಿಯುವ ನಿಯಮ) ಒಳಗಾಗಿದ್ದ ಪ್ರಮುಖ ಬ್ಯಾಟ್ಸ್‌ಮನ್‌ ಸ್ಟೀವ್‌ ಸ್ಮಿತ್‌ ಕ್ರೀಸ್‌ಗೆ ಬರಲಿಲ್ಲ.ಇಂಗ್ಲೆಂಡ್‌ ವೇಗಿ ಜೊಫ್ರಾ ಆರ್ಚರ್‌ ಎಸೆತವೊಂದು ಸ್ಮಿತ್‌ ಕುತ್ತಿಗೆಗೆ ಬಲವಾಗಿ ಬಡಿದಿತ್ತು. ಈ ವೇಳೆ ಸಬ್‌ಸ್ಟಿಟ್ಯೂಟ್‌ ಆಗಿ ಕಣಕ್ಕಿಳಿದವರೇ 25 ವರ್ಷದ ಮಾರ್ನಸ್‌ ಲಾಬುಶೇನ್‌... ಟೆಸ್ಟ್‌ ಕ್ರಿಕೆಟ್‌ನ 142 ವರ್ಷಗಳ ಇತಿಹಾಸದಲ್ಲಿ ಕಂಕಷನ್‌ ಕಾರಣದಿಂದ ಆದ ಮೊದಲ ಸಬ್‌ಸ್ಟಿಟ್ಯೂಟ್‌ ಇದು.

ಜೊಫ್ರಾ ಆರ್ಚರ್‌ರ ಬೆಂಕಿಯುಗುಳುವ, ಜಾಕ್‌ ಲೀಚ್‌ ಅವರ ಸ್ಪಿನ್‌ ಕೈಚಳಕಗಳಿಗೆ ತಕ್ಕ ಉತ್ತರ ನೀಡತೊಡಗಿದರು ಈ ಯುವ ಆಟಗಾರ. ಲಾಬುಶೇನ್‌ ಅವರನ್ನೂ ಜೊಫ್ರಾ ಎಸೆತವೊಂದರ ಮೂಲಕ ‘ಕಂಕಷನ್‌’ನ ಅಪಾಯಕ್ಕೆ ದೂಡಿದ್ದರು. ಆದರೆ ಎದೆಗುಂದದ ಅವರು ಅರ್ಧಶತಕವನ್ನು ಗಳಿಸಿಆಸ್ಟ್ರೇಲಿಯಾದ ಇನಿಂಗ್ಸ್‌ಗೆ ಜೀವ ತುಂಬಿದರು. ಅಂತಿಮವಾಗಿ 59 ರನ್‌ ಗಳಿಸಿ ಔಟಾದರೂ ಪಂದ್ಯವನ್ನು ಡ್ರಾದತ್ತ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಆರು ವಿಕೆಟ್‌ ಕಳೆದುಕೊಂಡ ಆಸ್ಟ್ರೇಲಿಯಾ 154 ರನ್‌ ಗಳಿಸಿ ದಿನದಾಟ ಮತ್ತು ಪಂದ್ಯಕ್ಕೆ ಅಂತ್ಯ ಹಾಡಿತ್ತು. ಆ ಇನಿಂಗ್ಸ್‌ನಲ್ಲಿ ತಂಡದ ಪರ ಗರಿಷ್ಠ ರನ್‌ ಕಲೆಹಾಕಿದ ಲಾಬುಶೇನ್‌ ಇಂಗ್ಲೆಂಡ್‌ ಸುಲಭವಾಗಿ ಗೆಲ್ಲಬಹುದಾಗಿದ್ದ ಪಂದ್ಯಕ್ಕೆ ಮಹತ್ವದ ತಿರುವು ನೀಡಿದ್ದರು. ಸರಣಿಯ ಮೊದಲ ಪಂದ್ಯವನ್ನು ಆಸ್ಟ್ರೇಲಿಯಾ ಗೆದ್ದಿತ್ತು. ಎರಡನೇ ಪಂದ್ಯ ಗೆದ್ದು ಸಮಬಲ ಸಾಧಿಸುವ ಜೊ ರೂಟ್‌ ಪಡೆಯ ಕನಸು ಕಮರಿತ್ತು.

ಸರಣಿಯ ನಾಲ್ಕನೇ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ 67 ರನ್‌ ದಾಖಲಿಸುವ ಮೂಲಕಲಾಬುಶೇನ್‌, ಆ್ಯಷಸ್‌ ಟೆಸ್ಟ್‌ ಸರಣಿಯಲ್ಲಿ ತಾನಾಡಿದ ನಾಲ್ಕು ಇನಿಂಗ್ಸ್‌ಗಳಲ್ಲಿ ಸತತ ನಾಲ್ಕು ಅರ್ಧಶತಕಗಳನ್ನು ಹೊಡೆದ ನಾಲ್ಕನೇ ಆಟಗಾರ ಎನಿಸಿಕೊಂಡರು. ಈ ರೀತಿ ‘ಕಂಕಷನ್‌’ನಿಂದ ಸಿಕ್ಕ ಅವಕಾಶವನ್ನು ಸೂಕ್ತವಾಗಿ ಬಳಸಿಕೊಂಡರು.

ADVERTISEMENT

1994 ಜೂನ್‌ 22ರಂದು ದಕ್ಷಿಣ ಆಫ್ರಿಕಾದಲ್ಲಿ ಜನಿಸಿದ ಲಾಬುಶೇನ್‌ ಅವರ ಕುಟುಂಬ 2004ರಲ್ಲಿ ಆಸ್ಟ್ರೇಲಿಯಾಕ್ಕೆ ವಲಸೆ ಬಂದಿತ್ತು. 2014–15ರ ಸಾಲಿನಲ್ಲಿ ಶೆಫೀಲ್ಡ್ ಶೀಲ್ಡ್ ಟೂರ್ನಿಯಲ್ಲಿ ಕ್ವೀನ್ಸ್‌ಲ್ಯಾಂಡ್‌ ಪರ ಆರಂಭಿಕನಾಗಿ ಕಣಕ್ಕಿಳಿದ ಅವರು 83 ರನ್‌ ಗಳಿಸಿ ತಾನಾಡಿದ ಮೊದಲ ಪ್ರಥಮ ದರ್ಜೆ ಪಂದ್ಯವನ್ನು ಸ್ಮರಣೀಯವಾಗಿರಿಸಿದ್ದರು.

2018ರ ಅಕ್ಟೋಬರ್‌ 7ರಂದುಪಾಕಿಸ್ತಾನ ಎದುರಿನ ಟೆಸ್ಟ್‌ ಸರಣಿಯಲ್ಲಿ ಆಸ್ಟ್ರೇಲಿಯಾ ರಾಷ್ಟ್ರೀಯ ತಂಡಕ್ಕೆ ಪದಾರ್ಪಣೆ ಮಾಡಿದರು. ಈ ಪಂದ್ಯದಲ್ಲಿ ಬ್ಯಾಟಿಂಗ್‌ನಲ್ಲಿ ಸೊನ್ನೆ ಸುತ್ತಿದರೂ ಸರಣಿಯಲ್ಲಿ ಏಳು ವಿಕೆಟ್‌ ಕಿತ್ತು ತಮ್ಮ ಆಲ್‌ರೌಂಡ್‌ ಸಾಮರ್ಥ್ಯ ಪ್ರಚುರಪಡಿಸಿದ್ದರು. ಬಲಗೈ ಲೆಗ್‌ ಬ್ರೇಕ್‌ ಅವರ ಬೌಲಿಂಗ್‌ ಶೈಲಿ.

ಈ ವರ್ಷದ ಎಪ್ರಿಲ್‌ನಲ್ಲಿ ಗ್ಲಾಮರ್ಗನ್‌ ಕಂಟ್ರಿ ಕ್ಲಬ್‌ ಪರ ಸಹಿ ಹಾಕಿದ ಲಾಬುಶೇನ್‌ ತಾನಾಡಿದ ಪ್ರಥಮದರ್ಜೆಯ ಮೊದಲ ನಾಲ್ಕು ಪಂದ್ಯಗಳ ಪೈಕಿ ಮೂರರಲ್ಲಿ ಶತಕ ಹೊಡೆದಿದ್ದರು. ಜುಲೈ 2ಕ್ಕೆ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಒಂದು ಸಾವಿರ ರನ್‌ ಪೂರೈಸಿದ ಅವರು 2019ರ ಋತುವಿನಲ್ಲಿ ಆ ಸಾಧನೆ ಮಾಡಿದ ಆಸ್ಟ್ರೇಲಿಯಾದ ಮೊದಲ ಆಟಗಾರ ಎನಿಸಿಕೊಂಡರು.

ಇದೇ ನವೆಂಬರ್‌ 23ರಂದು ಪಾಕಿಸ್ತಾನ ವಿರುದ್ಧದ ಟೆಸ್ಟ್‌ ಸರಣಿಯ ಮೊದಲ ಪಂದ್ಯದಲ್ಲಿ 185 ರನ್‌ ಗಳಿಸಿರುವ ಲಾಬುಶೇನ್‌ ಟೆಸ್ಟ್‌ನಲ್ಲಿ ಚೊಚ್ಚಲ ಶತಕದ ಸಂಭ್ರಮ ಆಚರಿಸಿಕೊಂಡರು. ಬ್ರಿಸ್ಬೇನ್‌ನ ಗಾಬಾದಲ್ಲಿ ನಡೆದ ಈ ಪಂದ್ಯದಲ್ಲಿ ಅವರ ಆಡಿದ ರೀತಿಯನ್ನು ಇಂಗ್ಲೆಂಡ್‌ನ ಹಿರಿಯ ಕ್ರಿಕೆಟಿಗ ಮೈಕೆಲ್‌ ವಾನ್‌ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ‘ವಿಶ್ವ ಕ್ರಿಕೆಟ್‌ನ ಯುವ ಪೀಳಿಗೆಯ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಲಾಬುಶೇನ್‌ ಕೂಡ ಒಬ್ಬರು’ ಎಂದಿದ್ದಾರೆ ಅವರು.ಲಾಬುಶೇನ್‌ ಇದೇ ಲಯವನ್ನು ಕಾಯ್ದುಕೊಂಡು ಮುನ್ನುಗ್ಗಿದರೆ ವಿಶ್ವ ಕ್ರಿಕೆಟ್‌ನಲ್ಲಿ ದಿಗ್ಗಜರ ಹಾದಿಯಲ್ಲಿ ಸಾಗುವ ಅವಕಾಶವಂತೂ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.