ADVERTISEMENT

ಕೋವಿಡ್‌: ಭಾರತಕ್ಕಾಗಿ ಆಸ್ಟ್ರೇಲಿಯಾ ಆಟಗಾರರ ‘ಗೇಮ್‌’

ಪಿಟಿಐ
Published 2 ಜೂನ್ 2021, 13:53 IST
Last Updated 2 ಜೂನ್ 2021, 13:53 IST
ನೇಥನ್ ಲಯನ್ ಮತ್ತು ಪ್ಯಾಟ್ ಕಮಿನ್ಸ್ –ಎಎಫ್‌ಪಿ ಚಿತ್ರ
ನೇಥನ್ ಲಯನ್ ಮತ್ತು ಪ್ಯಾಟ್ ಕಮಿನ್ಸ್ –ಎಎಫ್‌ಪಿ ಚಿತ್ರ   

ಸಿಡ್ನಿ: ಭಾರತದಲ್ಲಿ ಕೋವಿಡ್‌–19ರಿಂದ ತೊಂದರೆಗೆ ಒಳಗಾಗಿರುವವರಿಗಾಗಿ ಯುನಿಸೆಫ್‌ನ ನಿಧಿ ಸಂಗ್ರಹ ಯೋಜನೆಗಾಗಿ ಆಸ್ಟ್ರೇಲಿಯಾ ಆಟಗಾರರು ಗುರುವಾರ 12 ತಾಸುಗಳ ‘ಗೇಮ್‌’ ಆಡಲಿದ್ದಾರೆ. ನೇರ ಪ್ರಸಾರದಲ್ಲಿ ನಡೆಯುವ ಗೇಮ್‌ನಲ್ಲಿ ವೇಗದ ಬೌಲರ್ ಪ್ಯಾಟ್ ಕಮಿನ್ಸ್ ಸೇರಿದಂತೆ ಪ್ರಮುಖರು ಪಾಲ್ಗೊಳ್ಳಲಿದ್ದಾರೆ.

ಜೋಶುವಾ ಲಹೋರ್ ಅವರ ಕನಸಿನ ಕೂಸಾದ ಈ ಯೋಜನೆಯಲ್ಲಿ ಕಮಿನ್ಸ್‌, ಸ್ಪಿನ್ನರ್‌ ನೇಥನ್ ಲಯನ್, ವೇಗಿಗಳಾದ ಮಿಚೆಲ್ ಸ್ಟಾರ್ಕ್‌, ಜೋಶ್ ಹ್ಯಾಜಲ್‌ವುಡ್, ಆಲ್‌ರೌಂಡರ್‌ ಮೊಯಿಸಸ್ ಹೆನ್ರಿಕ್ಸ್‌, ಮಹಿಳಾ ಕ್ರಿಕೆಟರ್‌ಗಳಾದ ಅಲಿಸಾ ಹೀಲಿ ಮತ್ತು ದಕ್ಷಿಣ ಆಫ್ರಿಕಾದ ರಿಲೀ ರೊಸ್ಸೊ ಮುಂತಾದವರು ಸಂವಾದ ನಡೆಸುವರು. ಜೊತೆಗೆ, ತಮ್ಮ ಆಟದ ಸಾಮರ್ಥ್ಯವನ್ನೂ ತೋರಿಸುವರು.

ಕಾರ್ಯಕ್ರಮ ಭಾರತೀಯ ಕಾಲಮಾನ ಮಧ್ಯಾಹ್ನ 1.30ಕ್ಕೆ ಆರಂಭಗೊಳ್ಳಲಿದೆ. ಕ್ರಿಕೆಟ್ ಆಸ್ಟ್ರೇಲಿಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಿಕ್ ಹೂಕ್ಲಿ ಮತ್ತು ಆಸ್ಟ್ರೇಲಿಯಾ ಕ್ರಿಕೆಟಿಗರ ಸಂಘದ ಮುಖ್ಯ ಕಾರ್ವಹಣಾಧಿಕಾರಿ ಡೊಡ್ ಗ್ರೀನ್‌ಬರ್ಗ್ ಸ್ವಲ್ಪ ಹೊತ್ತು ಕಾಣಿಸಿಕೊಳ್ಳಲಿದ್ದಾರೆ. ಲಹೋರ್ ಅವರ ಟ್ವಿಟರ್ ಖಾತೆಯಲ್ಲಿ ನೇರ ಪ್ರಸಾರ ಇರುತ್ತದೆ.

ADVERTISEMENT

‘ಆಸ್ಟ್ರೇಲಿಯಾದ ಕ್ರಿಕೆಟರ್‌ಗಳಿಗೆ ಭಾರತದ ಜನರೊಂದಿಗೆ ಉತ್ತಮ ಬಾಂಧವ್ಯ ಇದೆ. ವಿಶ್ವದ ಅತಿಸುಂದರ ಪ್ರದೇಶಗಳಿರುವ ದೇಶ ಭಾರತ. ಅಲ್ಲಿನ ಜನರು ಕ್ರಿಕೆಟ್ ಪ್ರಿಯರು. ಆದ್ದರಿಂದ ಇಂಥ ಯೋಜನೆಗೆ ಮುಂದಾಗಿದ್ದೇವೆ’ ಎಂದು ಕ್ರಿಕೆಟ್ ಡಾಟ್‌ ಕಾಮ್ ಡಾಟ್ ಎ‌ಯುಗೆ ನೀಡಿರುವ ಸಂದರ್ಶನದಲ್ಲಿ ಲಹೋರ್‌ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.