ADVERTISEMENT

ಸ್ಟೊಯಿನಿಸ್‌ ಅಬ್ಬರಕ್ಕೆ ಪಾಕ್ ತತ್ತರ: ಟಿ20 ಸರಣಿ ಕ್ಲೀನ್‌ಸ್ವೀಪ್ ಮಾಡಿದ ಆಸೀಸ್

ಪಿಟಿಐ
Published 18 ನವೆಂಬರ್ 2024, 15:19 IST
Last Updated 18 ನವೆಂಬರ್ 2024, 15:19 IST
<div class="paragraphs"><p>ಸ್ಟೊಯಿನಿಸ್ ಹಾಗೂ ಡೇವಿಡ್</p></div>

ಸ್ಟೊಯಿನಿಸ್ ಹಾಗೂ ಡೇವಿಡ್

   

– ಪಿಸಿಬಿ ಚಿತ್ರ

ಹೋಬಾರ್ಟ್‌ (ಆಸ್ಟ್ರೇಲಿಯಾ): ಮಾರ್ಕಸ್ ಸ್ಟೊಯಿನಿಸ್‌ ಅವರು ಮಿಂಚಿನ ಅರ್ಧ ಶತಕದ ನೆರವಿನಿಂದ ಆಸ್ಟ್ರೇಲಿಯಾ ಮೂರನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಸೋಮವಾರ ಏಳು ವಿಕೆಟ್‌ಗಳಿಂದ ಸೋಲಿಸಿತು. ಆ ಮೂಲಕ ಆತಿಥೇಯರು ಸರಣಿಯನ್ನು 3–0ಯಿಂದ ಕ್ಲೀನ್‌ಸ್ವೀಪ್ ಮಾಡಿದರು.

ADVERTISEMENT

ಸ್ಟೊಯಿನಿಸ್‌ 27 ಎಸೆತಗಳಲ್ಲಿ 61 ರನ್ ಸಿಡಿಸಿದರು. ವೇಗದ ಬೌಲರ್‌ ಶಾಹೀನ್ ಶಾ ಅಫ್ರಿದಿ ಅವರ ಒಂದೇ ಓವರ್‌ನಲ್ಲಿ ಮೂರು ಸಿಕ್ಸರ್‌ ಸೇರಿದಂತೆ ಒಟ್ಟು ಐದು ಸಿಕ್ಸರ್‌ ಅವರ ಇನಿಂಗ್ಸ್‌ನಲ್ಲಿದ್ದವು. ಜೊತೆಗೆ ಐದು ಬೌಂಡರಿಗಳನ್ನೂ ಬಾರಿಸಿದರು. ಜೋಸ್‌ ಇಂಗ್ಲಿಷ್‌ ಸಾರಥ್ಯದ ಆಸ್ಟ್ರೇಲಿಯಾ 11.2 ಓವರುಗಳಲ್ಲಿ 3 ವಿಕೆಟ್‌ಗೆ 118 ರನ್ ಬಾರಿಸಿ ಗುರಿ ತಲುಪಿತು. ಇದಕ್ಕೆ ಮೊದಲು ಪ್ರವಾಸಿ ತಂಡ 11 ಎಸೆತಗಳು ಬಾಕಿಯಿರುವಾಗ 117 ರನ್‌ಗಳಿಗೆ ಆಲೌಟ್‌ ಆಗಿತ್ತು. ಅಫ್ರೀದಿ (43ಕ್ಕೆ1) ಮತ್ತು ಹ್ಯಾರಿಸ್ ರವೂಫ್‌ (0/34) ಅವರು ತಮ್ಮೊಳಗಿನ ಆರು ಓವರುಗಳಲ್ಲಿ 77 ರನ್ ತೆತ್ತರು.

ಇದಕ್ಕೆ ಮೊದಲು ಬಾಬರ್ ಆಜಂ (41) ಮತ್ತು ಹೊಸಬ ಹಸೀಬುಲ್ಲಾ ಖಾನ್ (24) ಅವರು ಪಾಕಿಸ್ತಾನ ತಂಡಕ್ಕೆ ಉತ್ತಮ ಆರಂಭ ನೀಡಿದ್ದರು. ಆದರೆ ಕೊನೆಯ 9 ವಿಕೆಟ್‌ಗಳು 51 ರನ್ ಅಂತರದಲ್ಲಿ ಉರುಳಿದವು.

ಹಸಿಬುಲ್ಲಾ ಅವರನ್ನು ಶಾರ್ಟ್‌ಫೈನ್‌ಲೆಗ್‌ನಲ್ಲಿ ಕ್ಯಾಚ್‌ ಕೊಡಿಸುವಂತೆ ಮಾಡುವ ಮೂಲಕ ಲೆಗ್‌ ಸ್ಪಿನ್ನರ್ ಆ್ಯಡಂ ಜಂಪಾ (11ಕ್ಕೆ2), ಪಾಕ್ ಕುಸಿತಕ್ಕೆ ಮುನ್ನುಡಿ ಬರೆದರು. ನಂತರ ಗೂಗ್ಲಿ ಒಂದರಲ್ಲಿ ಬಾಬರ್ ಅವರನ್ನು ಬೌಲ್ಡ್‌ ಮಾಡಿದರು. ನಂತರ ಆರನ್ ಹಾರ್ಡಿ (21ಕ್ಕೆ3) ಕುಸಿತ ತ್ವರಿತಗೊಳಿಸಿದರು.

ಟಿ20 ಕ್ರಿಕೆಟ್‌ನಲ್ಲಿ 126 ಪಂದ್ಯಗಳಿಂದ 4,192 ರನ್ ಗಳಿಸುವ ಮೂಲಕ ಬಾಬರ್ ಅವರು ವಿರಾಟ್ ಕೊಹ್ಲಿ ಅವರನ್ನು (4,188 ರನ್) ಹಿಂದೆಹಾಕಿ ಎರಡನೇ ಸ್ಥಾನಕ್ಕೇರಿದರು. ರೋಹಿತ್ ಶರ್ಮಾ (159 ಪಂದ್ಯಗಳಿಂದ 4,231) ಅಗ್ರಸ್ಥಾನದಲ್ಲಿದ್ದಾರೆ.

ಪಾಕಿಸ್ತಾನ ಏಕದಿನ ಸರಣಿಯನ್ನು 2–1ರಿಂದ ಗೆದ್ದಿತ್ತು.

ಸ್ಕೋರುಗಳು: ಪಾಕಿಸ್ತಾನ: 18.1 ಓವರುಗಳಲ್ಲಿ 117 (ಬಾಬರ್ ಆಜಂ 41, ಹಸೀಬುಲ್ಲಾ ಖಾನ್ 24; ಸ್ಪೆನ್ಸರ್ ಜಾನ್ಸನ್ 24ಕ್ಕೆ2, ಆ್ಯಡಂ ಜಂಪಾ 11ಕ್ಕೆ2, ಆರನ್ ಹಾರ್ಡಿ 21ಕ್ಕೆ3); ಆಸ್ಟ್ರೇಲಿಯಾ: 11.2 ಓವರುಗಳಲ್ಲಿ 3 ವಿಕೆಟ್‌ಗೆ 118 (ಜೋಶ್ ಇಂಗ್ಲಿಸ್ 27, ಮಾರ್ಕಸ್ ಸ್ಟೊಯಿನಿಸ್‌ ಔಟಾಗದೇ 61). ಪಂದ್ಯದ ಆಟಗಾರ: ಮಾರ್ಕಸ್ ಸ್ಟೊಯಿನಿಸ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.