ದುಬೈ: ಈ ವರ್ಷ ಆಸ್ಟ್ರೇಲಿಯಾ ಆಟಗಾರರು ಮುಟ್ಟಿದ್ದೆಲ್ಲವೂ ಚಿನ್ನವಾಗಿದೆ. ಬರೋಬ್ಬರಿ ಒಂದು ತಿಂಗಳ ಹಿಂದೆ ಏಕದಿನ ವಿಶ್ವಕಪ್ ಕಿರೀಟ ಧರಿಸಿದ್ದ ಆಸ್ಟ್ರೇಲಿಯಾದ ಆಟಗಾರರು ಮಂಗಳವಾರ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಮಿನಿ ಹರಾಜಿನಲ್ಲಿ ಹಣ ಸೂರೆ ಮಾಡಿದರು.
ಆಸ್ಟ್ರೇಲಿಯಾದ ನಾಲ್ವರು ಆಟಗಾರರು ಸೇರಿ ಒಟ್ಟು ₹ 62 ಕೋಟಿಗೂ ಹೆಚ್ಚು ಹಣವನ್ನು ತಮ್ಮ ಜೇಬಿಗೆ ಇಳಿಸಿಕೊಂಡರು. ಅದರಲ್ಲಿ ತಂಡದ ವೇಗಿ ಮಿಚೆಲ್ ಸ್ಟಾರ್ಕ್ ₹ 24.75 ಕೋಟಿ ಮೌಲ್ಯ ಪಡೆದು ಐಪಿಎಲ್ ಟೂರ್ನಿಯ ಇತಿಹಾಸದಲ್ಲಿಯೇ ಅತಿ ಹೆಚ್ಚು ಮೊತ್ತ ಗಳಿಸಿದ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರರಾದರು. ಅವರನ್ನು ಕೋಲ್ಕತ್ತ ನೈಟ್ ರೈಡರ್ಸ್ ಸೆಳೆದುಕೊಂಡಿತು. ಅವರ ’ಗೆಳೆಯ‘ ಮತ್ತು ತಂಡದ ನಾಯಕ ಪ್ಯಾಟ್ ಕಮಿನ್ಸ್ ಕೂಡ ₹ 20.50 ಕೋಟಿ ಮೌಲ್ಯದೊಂದಿಗೆ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಸೇರಿಕೊಂಡರು.
ವಿಶ್ವಕಪ್ ಫೈನಲ್‌ನಲ್ಲಿ ತಂಡದ ಗೆಲುವಿನ ರೂವಾರಿಯಾಗಿದ್ದ ಟ್ರಾವಿಸ್ ಹೆಡ್ ತಮ್ಮ ನಾಯಕ ಕಮಿನ್ಸ್ ಅವರೊಂದಿಗೆ ಸನ್‌ರೈಸರ್ಸ್ ಸೇರಿಕೊಂಡರು. ಅವರಿಗೆ ₹ 6.80 ಕೋಟಿ ಲಭಿಸಿತು. ಹೆಚ್ಚು ಅನುಭವಿ ಅಲ್ಲದ ಸ್ಪೆನ್ಸರ್ ಜಾನ್ಸನ್ ಗುಜರಾತ್ ಟೈಟನ್ಸ್ ತಂಡದಿಂದ ₹ 10 ಕೋಟಿ ಗಳಿಸಿ ಅಚ್ಚರಿ ಮೂಡಿಸಿದರು.
ಆದರೆ ಇದೇ ತಂಡದ ಅನುಭವಿ ವೇಗಿ ಜೋಷ್ ಹ್ಯಾಜಲ್‌ವುಡ್, ಬ್ಯಾಟರ್ ಸ್ಟೀವ್ ಸ್ಮಿತ್ ಹಾಗೂ ವಿಕೆಟ್‌ಕೀಪರ್ ಜೋಶ್ ಇಂಗ್ಲಿಸ್ ಅವರು ಬಿಕರಿಯಾಗಲಿಲ್ಲ.
ಆರ್‌ಸಿಬಿಯಿಂದ ಬಿಡುಗಡೆಗೊಂಡಿದ್ದ ಹರ್ಷಲ್ ಪಟೇಲ್ ಅವರಿಗೆ ಅದೃಷ್ಟ ಒಲಿಯಿತು. ಹರಿಯಾಣದ ಆಲ್‌ರೌಂಡರ್ ಹರ್ಷಲ್ ಅವರನ್ನು ₹11.75 ಕೋಟಿ ಗೆ ಪಂಜಾಬ್ ಕಿಂಗ್ಸ್ ತಂಡವು ಸೆಳೆದುಕೊಂಡಿತು. ಇದರೊಂದಿಂಗೆ ಈ ಬಿಡ್‌ನಲ್ಲಿ ಅತಿ ಹೆಚ್ಚು ಮೌಲ್ಯಕ್ಕೆ ಮಾರಾಟವಾದ ಭಾರತದ ಆಟಗಾರನಾದರು.
33 ವರ್ಷದ ಹರ್ಷಲ್ ಆರ್‌ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳನ್ನು ಐಪಿಎಲ್‌ನಲ್ಲಿ ಪ್ರತಿನಿಧಿಸಿದ್ದಾರೆ. ಟೂರ್ನಿಯಲ್ಲಿ ಒಟ್ಟು 92 ಪಂದ್ಯಗಳನ್ನು ಆಡಿರುವ ಅವರು 111 ವಿಕೆಟ್ ಗಳಿಸಿದ್ದಾರೆ. ಈಚೆಗೆ ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿಯೂ ತಮ್ಮ ತವರಿನ ತಂಡದ ಜಯದ ರೂವಾರಿಯಾಗಿದ್ದರು.
ಈ ಬಾರಿ ಫ್ರ್ಯಾಂಚೈಸಿಗಳು ಭಾರತದ ಅನಕ್ಯಾಪ್ಡ್ (ರಾಷ್ಟ್ರೀಯ ತಂಡದಲ್ಲಿ ಇನ್ನೂ ಪದಾರ್ಪಣೆ ಮಾಡದವರು) ಆಟಗಾರರ ಖರೀದಿಗೆ ಹೆಚ್ಚು ಒಲವು ತೋರಿದವು.
ಇದರಿಂದಾಗಿ ಉತ್ತರಪ್ರದೇಶದ ಸಮೀರ್ ರಿಜ್ವಿ ₹8.40 ಕೋಟಿ ಬಂಪರ್ ಮೌಲ್ಯದೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ಪಾಲಾದರು.
ಹೋದ ಬಾರಿ ಕಿಂಗ್ಸ್‌ನಲ್ಲಿ ಮಿಂಚಿದ್ದ ಆಲ್ ರೌಂಡರ್ ಶಾರೂಕ್ ಖಾನ್ ಈ ಸಲ ಗುಜರಾತ್ ಟೈಟನ್ಸ್‌ಗೆ ಸೇರ್ಪಡೆಯಾದರು. ಅವರಿಗೆ ₹ 7.40 ಕೋಟಿ ಒಲಿಯಿತು. ವಿದರ್ಭ ತಂಡದ ಶುಭಂ ದುಬೆ (₹ 5.80 ಕೋಟಿ) ಅವರು ರಾಜಸ್ಥಾನ ರಾಯಲ್ಸ್ ತಂಡಕ್ಕೆ ಸೇರಿಕೊಂಡರು.
ಯುವ ಬೌಲರ್ ಶಿವಂ ಮಾವಿ ಅವರನ್ನು ಲಖನೌ ಸೂಪರ್ ಜೈಂಟ್ಸ್ (₹ 6.40 ಕೋಟಿ) ತನ್ನ ತೆಕ್ಕೆಗೆ ಎಳೆದುಕೊಂಡಿತು.
ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್ ಅವರನ್ನು ಖರೀದಿಸಲು ದಕ್ಷಿಣ ಭಾರತದ ಎರಡು ತಂಡಗಳಾದ ಸನ್‌ರೈಸರ್ಸ್ ಹೈದರಾಬಾದ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವೆ ತುರುಸಿನ ಪೈಪೋಟಿ ನಡೆಯಿತು.
ತನ್ನ ಪರ್ಸ್ ಮಿತಿ ₹ 23.25 ಕೋಟಿ ಇದ್ದರೂ ಬೆಂಗಳೂರು ತಂಡವು ₹ 20 ಕೋಟಿಯವರೆಗೂ ಬಿಡ್ ಮಾಡಿ ಅಚ್ಚರಿ ಮೂಡಿಸಿತು. ಆದರೆ ಪಟ್ಟುಬಿಡದ ಸನ್‌ರೈಸರ್ಸ್ ₹20.50 ಕೋಟಿಗೆ ಕಮಿನ್ಸ್ ಅವರನ್ನು ತನ್ನದಾಗಿಸಿಕೊಂಡಿತು. ಆರ್‌ಸಿಬಿಗೆ ವೇಗದ ಬೌಲರ್ ಅವಶ್ಯಕತೆ ಇರುವುದರಿಂದ ಆಸ್ಟ್ರೇಲಿಯಾ ತಂಡದ ನಾಯಕ ಕಮಿನ್ಸ್ ಅವರನ್ನು ತೆಕ್ಕೆಗೆ ಎಳೆದುಕೊಳ್ಳಲು ಶತಪ್ರಯತ್ನ ನಡೆಸಿತು. ಆದರೆ ಉದ್ದೇಶ ಈಡೇರಲಿಲ್ಲ. ಈ ಪೈಪೋಟಿಯಲ್ಲಿ ಕಮಿನ್ಸ್ ಅವರಿಗೆ ನಿರೀಕ್ಷೆಗೂ ಮೀರಿದ ಮೌಲ್ಯ ದೊರೆಯಿತು. ‘ಕಮಿನ್ಸ್ ಅವರಿಗೆ ಉತ್ತಮ ಮೌಲ್ಯ ದೊರೆಯುವ ನಿರೀಕ್ಷೆ ಇತ್ತು. ಆದರೆ ₹ 20 ಕೋಟಿಗಿಂತಲೂ ಹೆಚ್ಚಿನ ಮೊತ್ತ ಲಭಿಸಿದ್ದು ಅನಿರೀಕ್ಷಿತ. ಇದೊಂದು ದಾಖಲೆ’ ಎಂದು ಜಿಯೊ ಸಿನೆಮಾ ಆ್ಯಪ್ ವಿಶ್ಲೇಷಣೆಯಲ್ಲಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಅಭಿಪ್ರಾಯಪಟ್ಟಿದ್ದಾರೆ.
ಆರ್‌ಸಿಬಿಯು ವೆಸ್ಟ್ ಇಂಡೀಸ್ ತಂಡದ ವೇಗಿ ಅಲ್ಜರಿ ಜೋಸೆಫ್ ಅವರಿಗೆ ₹ 11.50 ಕೋಟಿ ನೀಡಿ ಖರೀದಿಸಿತು. 27 ವರ್ಷದ ಬಲಗೈ ವೇಗಿ ಜೋಸೆಫ್, ಐಪಿಎಲ್‌ನಲ್ಲಿ ಈ ಹಿಂದೆ ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಟೈಟನ್ಸ್ ತಂಡಗಳಲ್ಲಿ ಆಡಿದ್ದಾರೆ. ಒಟ್ಟು 19 ಪಂದ್ಯಗಳಿಂದ 20 ವಿಕೆಟ್ ಗಳಿಸಿದ್ದಾರೆ.
ದೇಶಿ ಕ್ರಿಕೆಟ್‌ನಲ್ಲಿ ಆಡುವ ಉತ್ತರಪ್ರದೇಶದ ಮಧ್ಯಮವೇಗಿ ಯಶ್ ದಯಾಳ್ ಅವರನ್ನು ಆರ್‌ಸಿಬಿಯು ಐದು ಕೋಟಿ ರೂಪಾಯಿ ಮೌಲ್ಯಕ್ಕೆ ಸೇರ್ಪಡೆ ಮಾಡಿಕೊಂಡಿತು.
ಐಪಿಎಲ್ ಇತಿಹಾಸದಲ್ಲಿ ಶತಕ ಬಾರಿಸಿದ ಮೊಟ್ಟಮೊದಲ ಭಾರತೀಯ ಆಟಗಾರ ಮನೀಷ್ ಪಾಂಡೆ ಅವರಿಗೆ ಈ ಹರಾಜಿನಲ್ಲಿ ಮೂಲಬೆಲೆ ₹ 50 ಲಕ್ಷ ಮಾತ್ರ ಲಭಿಸಿತು.
ಹರಾಜು ಪ್ರಕ್ರಿಯೆಯ ಮೊದಲ ಸುತ್ತಿನಲ್ಲಿ ಅವರು ಖರೀದಿಯಾಗಿರಲಿಲ್ಲ. ಎರಡನೇ ಸುತ್ತಿನಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ಫ್ರ್ಯಾಂಚೈಸಿಯು ಬ್ಯಾಟರ್ ಪಾಂಡೆಗೆ ಮಣೆ ಹಾಕಿತು. ಕರ್ನಾಟಕದ ಸ್ಪಿನ್–ಆಲ್‌ರೌಂಡರ್ ಶ್ರೇಯಸ್ ಗೋಪಾಲ್ ಅವರೂ ತಮ್ಮ ಮೂಲಬೆಲೆ ₹ 20 ಲಕ್ಷ ಪಡೆದು ಮುಂಬೈ ಇಂಡಿಯನ್ಸ್‌ಗೆ ಸೇರ್ಪಡೆಯಾದರು.
ಆದರೆ, ಕರುಣ್ ನಾಯರ್ ಅವರಿಗೆ ಯಾವ ತಂಡದಲ್ಲಿಯೂ ಸ್ಥಾನ ಲಭಿಸಲಿಲ್ಲ. ಅವರಿಗೆ ₹ 50 ಲಕ್ಷ ಮೂಲಬೆಲೆ ನಿಗದಿಪಡಿಸಲಾಗಿತ್ತು. ರಾಜ್ಯದ ಒಟ್ಟು 11 ಆಟಗಾರರು ಸ್ಪರ್ಧೆಯಲ್ಲಿದ್ದರು.
ದಕ್ಷಿಣ ಆಫ್ರಿಕಾದ ಬಿರುಸಿನ ಬ್ಯಾಟರ್ ರಸಿ ವ್ಯಾನ್ ಡೆರ್ ಡಸೆ,, ನ್ಯೂಜಿಲೆಂಡ್ ಆಲ್‌ರೌಂಡರ್ ಜಿಮ್ಮಿ ನಿಶಾಮ್, ಬೌಲರ್ ಕೈಲ್ ಜೆಮಿಸನ್, ಇಂಗ್ಲೆಂಡ್‌ನ ವಿಕೆಟ್‌ಕೀಪರ್ ಬ್ಯಾಟರ್ ಫಿಲಿಪ್ ಸಾಲ್ಟ್ ಮತ್ತು ಭಾರತದ ಸರ್ಫರಾಜ್ ಖಾನ್ ಸೇರಿ ಹಲವು ಖ್ಯಾತ ಆಟಗಾರರು ಮಾರಾಟವಾಗದೇ ಉಳಿದರು.
ಹೋದ ವರ್ಷದ ಐಪಿಎಲ್‌ನಲ್ಲಿ ವಿಜೇತರ ತಂಡಕ್ಕೆ ₹ 20 ಕೋಟಿ ನೀಡಲಾಗಿತ್ತು. ಆದರೆ ಈ ಮೊತ್ತಕ್ಕಿಂತಲೂ ಹೆಚ್ಚಿನ ಮೌಲ್ಯವನ್ನು ಈ ಹರಾಜಿನಲ್ಲಿ ಇಬ್ಬರು ಪಡೆದಿದ್ದು ವಿಶೇಷ. ಪ್ಯಾಟ್ ಕಮಿನ್ಸ್ ಮತ್ತು ಸ್ಠಾರ್ಕ್ ಅವರು ತಲಾ ₹ 20 ಕೋಟಿಗಿಂತ ಹೆಚ್ಚಿನ ಮೌಲ್ಯವನ್ನು ಗಳಿಸಿ ಅಚ್ಚರಿ ಮೂಡಿಸಿದರು. ಈ ವಿಷಯವು ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ಚರ್ಚೆಗೆ ಗ್ರಾಸವಾಗಿದೆ. ಮುಂದಿನ ಬಾರಿ ಐಪಿಎಲ್ ಪ್ರಶಸ್ತಿ ಮೊತ್ತವನ್ನು ಹೆಚ್ಚಳ ಮಾಡಬಹುದೇ ಎಂಬ ಪ್ರಶ್ನೆಗಳನ್ನೂ ಕೆಲವು ಕೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.