ಕೇಪ್ ಟೌನ್: ಅತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯಕ್ಕೆ ವೇಗದ ಬೌಲರ್ ಆವೇಶ್ ಖಾನ್ ಅವರನ್ನು ಟೀಮ್ ಇಂಡಿಯಾಕ್ಕೆ ಸೇರ್ಪಡೆಗೊಳಿಸಲಾಗಿದೆ.
ಗಾಯದಿಂದಾಗಿ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ಅಲಭ್ಯರಾಗಿರುವ ಮೊಹಮ್ಮದ್ ಶಮಿ ಸ್ಥಾನವನ್ನು ಆವೇಶ್ ಖಾನ್ ತುಂಬಲಿದ್ದಾರೆ.
ಈ ಕುರಿತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ), ಪ್ರಕಟಣೆ ತಿಳಿಸಿದೆ.
ಸೆಂಚುರಿಯನ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಭಾರತ ತಂಡವು ಇನಿಂಗ್ಸ್ ಹಾಗೂ 32 ರನ್ ಅಂತರದ ಹೀನಾಯ ಸೋಲಿಗೆ ಗುರಿಯಾಗಿತ್ತು. ಸರಣಿಯಲ್ಲಿ 1-0 ಅಂತರದ ಹಿನ್ನಡೆಗೊಳಗಾಗಿದೆ.
ಹಾಗಾಗಿ ಅಂತಿಮ ಪಂದ್ಯದಲ್ಲಿ ಬದಲಾವಣೆ ಕಂಡುಬರುವ ಸಾಧ್ಯತೆಯಿದೆ.
ಚೊಚ್ಚಲ ಪಂದ್ಯವನ್ನಾಡಿದ ಕರ್ನಾಟಕದ ಪ್ರಸಿದ್ಧ ಕೃಷ್ಣ ಹಾಗೂ ಶಾರ್ದೂಲ್ ಠಾಕೂರ್ ಪ್ರಭಾವಿ ಎನಿಸಿಕೊಳ್ಳಲಿಲ್ಲ. ಇದರಿಂದಾಗಿ ಭಾರತದ ಬೌಲಿಂಗ್ ಪಡೆ ಮೊನಚು ಕಳೆದುಕೊಂಡಿತ್ತು.
ಸಂಪೂರ್ಣ ಫಿಟ್ ಆದರಷ್ಟೇ ಅಂತಿಮ ಪಂದ್ಯದಲ್ಲಿ ಆಲ್‌ರೌಂಡರ್ ರವೀಂದ್ರ ಜಡೇಜ ಕಣಕ್ಕಿಳಿಯಲಿದ್ದಾರೆ. ಇವರಿಗೆ ಆಫ್ ಸ್ಪಿನ್ನರ್ ಆರ್. ಅಶ್ವಿನ್ ಸ್ಥಾನ ಬಿಟ್ಟುಕೊಡುವ ಸಾಧ್ಯತೆಯಿದೆ.
ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಅಂತಿಮ ಪಂದ್ಯ ಜನವರಿ 3ರಂದು ಆರಂಭವಾಗಲಿದೆ. ಸರಣಿ ಸಮಬಲಗೊಳಿಸಲು ಭಾರತ ಈ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ.
ಭಾರತ ತಂಡ ಇಂತಿದೆ:
ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್ ರಾಹುಲ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಮುಕೇಶ್ ಕುಮಾರ್, ಜಸ್‌ಪ್ರೀತ್ ಬೂಮ್ರಾ (ಉಪನಾಯಕ), ಪ್ರಸಿದ್ಧ ಕೃಷ್ಣ, ಕೆ.ಎಸ್. ಭರತ್ (ವಿಕೆಟ್ ಕೀಪರ್), ಅಭಿಮನ್ಯ ಈಶ್ವರನ್, ಆವೇಶ್ ಖಾನ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.