ಬುಲಾವಯೊ: ಯುವ ಎಡಗೈ ಆಟಗಾರ ಸಯೀಮ್ ಅಯೂಬ್ ಅವರ ಅಜೇಯ ಶತಕದ ನೆರವಿನಿಂದ ಪಾಕಿಸ್ತಾನ ತಂಡ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಜಿಂಬಾಬ್ವೆ ತಂಡವನ್ನು 10 ವಿಕೆಟ್‌ಗಳಿಂದ ಸದೆಬಡಿಯಿತು. ಇನ್ನೊಂದು ಪಂದ್ಯ ಉಳಿದಿರುವಂತೆ ಸರಣಿ 1–1ರಲ್ಲಿ ಸಮಬಲಗೊಂಡಿತು.
ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಮೊದಲು ಆಡಿದ ಜಿಂಬಾಬ್ವೆ 32.3 ಓವರುಗಳಲ್ಲಿ 145 ರನ್‌ಗಳಿಗೆ ಕುಸಿಯಿತು. ಡಿಯಾನ್ ಮೈರ್ಸ್ (33) ಮತ್ತು ಸೀನ್ ವಿಲಿಯಮ್ಸ್ (31) ಬಿಟ್ಟರೆ ಉಳಿದವರು ವಿಫಲರಾದರು. ಪದಾರ್ಪಣೆ ಮಾಡಿದ ಅಬ್ರಾರ್ ಅಹ್ಮದ್ ಮತ್ತು ಸಲ್ಮಾನ್ ಆಘಾ ಕ್ರಮವಾಗಿ 4 ಮತ್ತು 3 ವಿಕೆಟ್ ಪಡೆದರು.
ಪಾಕಿಸ್ತಾನ ಕೇವಲ 18.2 ಓವರುಗಳಲ್ಲಿ ವಿಕೆಟ್ ನಷ್ಟವಿಲ್ಲದೇ 148 ರನ್ ಬಾರಿಸಿತು. ಪಂದ್ಯದ ಆಟಗಾರ ಗೌರವಕ್ಕೆ ಪಾತ್ರರಾದ 22 ವರ್ಷ ವಯಸ್ಸಿನ ಅಯೂಬ್ 62 ಎಸೆತಗಳಲ್ಲಿ 17 ಬೌಂಡರಿ, ಮೂರು ಸಿಕ್ಸರ್‌ಗಳಿದ್ದ 113 ರನ್ ಗಳಿಸಿ ಔಟಾಗದೇ ಉಳಿದರು. ಅಬ್ದುಲ್ಲಾ ಶಫೀಖ್ 48 ಎಸೆತಗಳಲ್ಲಿ 3 ಬೌಂಡರಿಗಳಿದ್ದ ಅಜೇಯ 32 ರನ್ ಗಳಿಸಿದರು.
53 ಎಸೆತಗಳಲ್ಲಿ ಶತಕ ಪೂರೈಸಿದರು. ಇದು ಏಕದಿನ ಪಂದ್ಯಗಳಲ್ಲಿ ಪಾಕ್ ಆಟಗಾರನೊಬ್ಬನ ಎರಡನೇ ವೇಗದ ಶತಕ. ಶಾಹಿದ್ ಅಫ್ರಿದಿ, ಶ್ರೀಲಂಕಾ ವಿರುದ್ಧ 37 ಎಸೆತಗಳಲ್ಲಿ ಶತಕ ಬಾರಿಸಿದ್ದರು.
ಮೊದಲ ಪಂದ್ಯವನ್ನು ಆತಿಥೇಯರು ಡಿಎಲ್‌ಎಸ್ ಆಧಾರದಲ್ಲಿ 80 ರನ್‌ಗಳಿಂದ ಜಯಿಸಿದ್ದರು. ಗುರುವಾರ ಅಂತಿಮ ಹಾಗೂ ನಿರ್ಣಾಯಕ ಪಂದ್ಯ ನಡೆಯಲಿದೆ. ಇದರ ನಂತರ ಉಭಯ ತಂಡಗಳ ನಡುವೆ ಮೂರು ಪಂದ್ಯಗಳ ಟಿ20 ಸರಣಿ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.