ಲಾಹೋರ್: ಇತ್ತೀಚೆಗಿನ ಸರಣಿಗಳಲ್ಲಿ ತಂಡದ ಹೀನಾಯ ಪ್ರದರ್ಶನದ ಹಿನ್ನೆಲೆಯಲ್ಲಿ ಪಾಕಿಸ್ತಾನದ ಟೆಸ್ಟ್ ಕ್ರಿಕೆಟ್ ತಂಡದಿಂದ ಮಾಜಿ ನಾಯಕ ಬಾಬರ್ ಆಜಂ, ವೇಗದ ಬೌಲರ್‌ಗಳಾದ ಶಾಹೀನ್ ಅಫ್ರಿದಿ ಮತ್ತು ನಸೀಮ್ ಶಾ ಅವರನ್ನು ಕೈಬಿಡಲಾಗಿದೆ.
ಇಂಗ್ಲೆಂಡ್ ವಿರುದ್ಧದ ಅಂತಿಮದ ಎರಡು ಟೆಸ್ಟ್ ಪಂದ್ಯಗಳಿಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಇಂದು (ಭಾನುವಾರ) ತಂಡವನ್ನು ಪ್ರಕಟಿಸಿದೆ.
ಬಾಬರ್ ಆಜಂ, ಶಾಹೀನ್ ಅಫ್ರಿದಿ ಮತ್ತು ನಸೀಮ್ ಶಾ ಅವರಿಗೆ ವಿಶ್ರಾಂತಿ ನೀಡಲು ಪಿಸಿಬಿ ನಿರ್ಧರಿಸಿದೆ. ಈ ಪೈಕಿ ಗಾಯದ ಸಮಸ್ಯೆಯಿಂದಾಗಿ ಶಾಹೀನ್ ಹಾಗೂ ನಸೀಮ್ ಸರಣಿಯಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ ಎಂದು ತಂಡದ ಮೂಲಗಳು ತಿಳಿಸಿವೆ.
54 ಟೆಸ್ಟ್ ಪಂದ್ಯಗಳ ವೃತ್ತಿ ಜೀವನದಲ್ಲಿ ಇದೇ ಮೊದಲ ಸಲ ಬಾಬರ್ ಆಜಂ ಅವರನ್ನು ತಂಡದಿಂದ ಹೊರಗಟ್ಟಲಾಗಿದೆ. ಆಟಗಾರರ ಈಗಿನ ನಿರ್ವಹಣೆ, ಫಿಟ್ನೆಸ್ ಹಾಗೂ ಭವಿಷ್ಯದ 2024-25ನೇ ಸಾಲಿನ ಸರಣಿಗಳನ್ನು ಪರಿಗಣಿಸಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ.
ಡೆಂಗಿ ಜ್ವರದಿಂದ ಚೇತರಿಸಿಕೊಳ್ಳುತ್ತಿರುವ ಅಬ್ರಾರ್ ಅಹ್ಮದ್ ಅವರನ್ನೂ ಆಯ್ಕೆಗೆ ಪರಿಗಣಿಸಿಲ್ಲ.
2023ರ ನಂತರ ಟೆಸ್ಟ್ ಕ್ರಿಕೆಟ್‌ನಲ್ಲಿ ಲಯ ಕಂಡುಕೊಳ್ಳಲು ಪರದಾಡುತ್ತಿರುವ ಬಾಬರ್, ಕಳೆದ 18 ಇನಿಂಗ್ಸ್‌ಗಳಲ್ಲಿ ಒಂದೇ ಒಂದು ಅರ್ಧಶತಕ ಗಳಿಸಲು ಸಾಧ್ಯವಾಗಿರಲಿಲ್ಲ. ಈ ಅವಧಿಯಲ್ಲಿ ಆಡಿರುವ 9 ಪಂದ್ಯಗಳಲ್ಲಿ ಕೇವಲ 21ರ ಸರಾಸರಿ ಹೊಂದಿದ್ದಾರೆ.
ಬಾಬರ್ ಅವರನ್ನು ತಂಡದಿಂದ ಕೈಬಿಟ್ಟಿರುವುದಕ್ಕೆ ಪರ ಹಾಗೂ ವಿರೋಧ ಅಭಿಪ್ರಾಯಗಳು ಕೇಳಿಬರುತ್ತಿವೆ.
ಇಂಗ್ಲೆಂಡ್ ವಿರುದ್ಧ ಮುಲ್ತಾನ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಮೊದಲ ಇನಿಂಗ್ಸ್‌ನಲ್ಲಿ 556 ರನ್ ಗಳಿಸಿದ್ದರೂ ಪಾಕಿಸ್ತಾನ ಸೋಲಿಗೆ ಶರಣಾಗಿತ್ತು. ಆ ಮೂಲಕ ತವರಿನಲ್ಲಿ ಭಾರಿ ಮುಖಭಂಗಕ್ಕೆ ಒಳಗಾಗಿತ್ತು. ಇಂಗ್ಲೆಂಡ್ ಮೊದಲ ಇನಿಂಗ್ಸ್‌ನಲ್ಲಿ ಏಳು ವಿಕೆಟ್ ನಷ್ಟಕ್ಕೆ 823 ರನ್ ಪೇರಿಸಿ ಡಿಕ್ಲೇರ್ ಘೋಷಿಸಿತ್ತು. ಆಂಗ್ಲರ ಪರ ಹ್ಯಾರಿ ಬ್ರೂಕ್ ತ್ರಿಶತಕ ಹಾಗೂ ಜೋ ರೂಟ್ ದ್ವಿಶತಕ ಸಾಧನೆ ಮಾಡಿದ್ದರು.
ದ್ವಿತೀಯ ಟೆಸ್ಟ್ ಪಂದ್ಯ ಮುಲ್ತಾನ್‌ನಲ್ಲಿ ಅಕ್ಟೋಬರ್ 15ರಿಂದ ಆರಂಭವಾಗಲಿದೆ. ಅಂತಿಮ ಟೆಸ್ಟ್ ಪಂದ್ಯ ರಾವಲ್ಪಿಂಡಿಯಲ್ಲಿ ಅಕ್ಟೋಬರ್ 24ರಂದು ನಡೆಯಲಿದೆ.
ಇಂಗ್ಲೆಂಡ್ ವಿರುದ್ಧದ ಅಂತಿಮ ಎರಡು ಪಂದ್ಯಗಳಿಗೆ ಪಾಕಿಸ್ತಾನ ತಂಡ ಇಂತಿದೆ:
ಶಾನ್ ಮಸೂದ್ (ನಾಯಕ), ಸೌದ್ ಶಕೀಲ್, ಆಮೇರ್ ಜಮಾಲ್, ಅಬ್ದುಲ್ಲಾ ಶಫೀಕ್, ಹಸೀಬುಲ್ಲಾ (ವಿಕೆಟ್ ಕೀಪರ್), ಕಮ್ರಾನ್ ಗುಲಾಂ, ಮೆಹ್ರಾನ್ ಮುಮ್ತಾಜ್, ಮಿರ್ ಹಂಜಾ, ಮೊಹಮ್ಮದ್ ಅಲಿ, ಮೊಹಮ್ಮದ್ ಹುರೈರಾ, ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ನೊಮನ್ ಅಲಿ, ಸೈಮ್ ಅಯುಬ್, ಸಜೀದ್ ಖಾನ್, ಸಲ್ಮಾನ್ ಅಲಿ ಅಘಾ ಮತ್ತು ಜಹೀದ್ ಮೆಹಮೂದ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.