ಚೆನ್ನೈ: ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ (ಐಪಿಎಲ್) ಆಡಿರುವ ನಾಲ್ಕು ಪಂದ್ಯಗಳನ್ನು ಸೋತು ಕಂಗೆಟ್ಟಿರುವ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡಕ್ಕೆ ಈಗ ಮತ್ತೊಂದು ಆಘಾತ ಎದುರಾಗಿದೆ. ಆಲ್‌ರೌಂಡರ್ ದೀಪಕ್ ಚಾಹರ್ ಬೆನ್ನು ನೋವಿನ ಕಾರಣ ಇಡೀ ಟೂರ್ನಿಗೆ ಅಲಭ್ಯರಾಗಿದ್ದಾರೆ.
ಹರಾಜು ಪ್ರಕ್ರಿಯೆಯಲ್ಲಿ ₹14 ಕೋಟಿ ಮೊತ್ತಕ್ಕೆ ದೀಪಕ್ ಚಾಹರ್ ಅವರನ್ನು ಖರೀದಿಸಿದ್ದ ಸಿಎಸ್‌ಕೆ ತಂಡವು ಅವರು ಏಪ್ರಿಲ್ ಎರಡನೇ ವಾರದ ವೇಳೆ ಗುಣಮುಖರಾಗಬಹುದು ಎಂಬ ನಿರೀಕ್ಷೆಯಲ್ಲಿತ್ತು. ಆದರೆ, ಇಡೀ ಟೂರ್ನಿಗೆ ಲಭ್ಯರಾಗುವುದಿಲ್ಲ ಎಂಬುದು ತಿಳಿದು ಆಘಾತಕ್ಕೀಡಾಗಿದೆ.
ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್‌ಸಿಎ) ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಂಡಿದ್ದ ದೀಪಕ್ ಚಾಹರ್ ಬೆನ್ನಿನ ಗಾಯಕ್ಕೆ ಒಳಗಾಗಿದ್ದಾರೆ ಎಂದು ಮೂಲಗಳು ಹೇಳಿವೆ.
ಫೆಬ್ರುವರಿಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಅಂತರರಾಷ್ಟ್ರೀಯ ಟ್ವೆಂಟಿ–20 ಸರಣಿಯ ಪಂದ್ಯದಲ್ಲಿ ಸ್ನಾಯುರಜ್ಜು ನೋವಿಗೆ ಒಳಗಾಗಿದ್ದ ದೀಪಕ್ ಚಾಹರ್ ಒಂದು ತಿಂಗಳಿಗೂ ಹೆಚ್ಚು ಕಾಲದಿಂದ ಎನ್‌ಸಿಎಯಲ್ಲಿ ಇದ್ದಾರೆ.
ಉತ್ತಮ ಬ್ಯಾಟಿಂಗ್, ಬೌಲಿಂಗ್‌ನಿಂದ ಗುರುತಿಸಿಕೊಂಡಿರುವ ದೀಪಕ್ ಚಾಹರ್, ಕಳೆದ ಋತುವಿನ ಐಪಿಎಲ್‌ನಲ್ಲಿ ಚೆನ್ನೈ ತಂಡವು ಚಾಂಪಿಯನ್ ಆಗಿ ಹೊರಹೊಮ್ಮುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.