ಮ್ಯಾಕೆ (ಆಸ್ಟ್ರೇಲಿಯಾ): ಚೆಂಡು ಬದಲಾವಣೆ ಪ್ರಕರಣದ ಬಿಸಿಚರ್ಚೆಯ ನಡುವೆ, ಆಸ್ಟ್ರೇಲಿಯಾ ‘ಎ’ ತಂಡ, ನಾಲ್ಕು ದಿನಗಳ ‘ಟೆಸ್ಟ್’ ಪಂದ್ಯದ ಕೊನೆಯ ದಿನವಾದ ಭಾನುವಾರ ಏಳು ವಿಕೆಟ್‌ಗಳಿಂದ ಭಾರತ ‘ಎ’ ತಂಡವನ್ನು ಸೋಲಿಸಿತು.
ಗೆಲ್ಲಲು 225 ರನ್ ಗಳಿಸುವ ಗುರಿಯೊಡನೆ 3 ವಿಕೆಟ್‌ಗೆ 130 ರನ್ ಗಳಿಸಿದ್ದ ಆಸ್ಟ್ರೇಲಿಯಾ ‘ಎ’ ತಂಡ ಭಾನುವಾರ ಇನ್ನಷ್ಟು ವಿಕೆಟ್ ಕಳೆದುಕೊಳ್ಳದೇ ಗುರಿ ತಲುಪಿತು. 75 ಓವರುಗಳಲ್ಲಿ 3 ವಿಕೆಟ್‌ಗೆ 226 ರನ್ ಹೊಡೆಯಿತು.
ನಾಯಕ ನಥಾನ್ ಮೆಕ್‌ಸ್ವೀನಿ (ಔಟಾಗದೇ 88, 178 ಎಸೆತ) ಮತ್ತು ಬ್ಯೂ ವೆಬ್‌ಸ್ಟರ್ (ಔಟಾಗದೇ 61, 117 ಎಸೆತ) ಮುರಿಯದ ನಾಲ್ಕನೇ ವಿಕೆಟ್‌ಗೆ 141 ರನ್ ಸೇರಿಸಿದರು. ಮೆಕ್‌ಸ್ಟೀನಿ ಆಟದಲ್ಲಿ ಒಂಬತ್ತು ಬೌಂಡರಿಗಳಿದ್ದವು. ವೆಬ್‌ಸ್ಟರ್ ಆಟದಲ್ಲಿ ನಾಲ್ಕು ಬೌಂಡರಿಗಳಿದ್ದವು.
ಸರಣಿಯ ಎರಡನೇ ಪಂದ್ಯ ಗುರುವಾರ ಮೆಲ್ಬರ್ನ್‌ನಲ್ಲಿ ಆರಂಭವಾಗಲಿದೆ.
ಸ್ಕೋರುಗಳು: ಭಾರತ ಎ: 107 ಮತ್ತು 100 ಓವರುಗಳಲ್ಲಿ 312 (ಸಾಯಿ ಸುದರ್ಶನ್ 103, ದೇವದತ್ತ ಪಡಿಕ್ಕಲ್ 88, ಇಶಾನ್ ಕಿಶನ್ 32; ಫೆರ್ಗಸ್ ಓನೀಲ್ 55ಕ್ಕೆ4, ಟಾಡ್ ಮರ್ಫಿ 77ಕ್ಕೆ3); ಆಸ್ಟ್ರೇಲಿಯಾ ಎ: 195 ಮತ್ತು 75 ಓವರುಗಳಲ್ಲಿ 3 ವಿಕೆಟ್‌ಗೆ 226 (ಮಾರ್ಕಸ್ ಹ್ಯಾರಿಸ್ 36, ನಥಾನ್ ಮ್ಯಾಕ್‌ಸ್ವೀನಿ ಔಟಾಗದೇ 88, ಬ್ಯೂ ವೆಬ್‌ಸ್ಟರ್ ಔಟಾಗದೇ 61).
ಅಶಿಸ್ತು ಆರೋಪದಿಂದ ಇಶಾನ್ ಪಾರು
ಬೆಳಿಗ್ಗೆ ಆಟ ಆರಂಭವಾಗುವಾಗ ಚೆಂಡು ಬದಲಾವಣೆ ಮಾಡಿದ್ದಕ್ಕೆ ಸಂಬಂಧಿಸಿ ಮೈದಾನದಲ್ಲಿ ಅಂಪೈರ್ ಶಾನ್ ಕ್ರೆಗ್ ಜೊತೆ ವಾದಿಸಿದ್ದ ಭಾರತ ತಂಡದ ವಿಕೆಟ್ ಕೀಪರ್ ಇಶಾನ್ ಕಿಶನ್ ಅಶಿಸ್ತು ಆರೋಪದಿಂದ ಪಾರಾಗಿದ್ದಾರೆ.
ನಾಲ್ಕನೇ ದಿನ ಬೆಳಿಗ್ಗೆ ಚೆಂಡು ಬದಲಾಯಿಸಲಾಗಿತ್ತು. 225 ರನ್ ಗುರಿ ಎದುರಿಸಿದ್ದ ಆಸ್ಟ್ರೇಲಿಯಾ 3 ವಿಕೆಟ್‌ಗೆ 139 ರನ್ ಗಳಿಸಿ ಆಟ ಮುಂದುವರಿಸಬೇಕಿತ್ತು. ಚೆಂಡು ಬದಲಾಯಿಸಿದ್ದಕ್ಕೆ ಭಾರತ ‘ಎ’ ತಂಡದ ಆಟಗಾರರು ಅಸಮಾಧಾನ ವ್ಯಕ್ತಪಡಿಸಿದರು. ಚೆಂಡಿನ ಮೇಲೆ ತಿದ್ದಿದ ಗುರುತುಗಳಿವೆ ಎಂದು ಕ್ರೆಗ್ ಹೇಳಿದರು. ‘ನೀವು ಗೀರಿದ್ದೀರಿ. ನಾವು ಚೆಂಡು ಬದಲಾಯಿಸುತ್ತಿದ್ದೇವೆ. ಚರ್ಚೆ ಸಾಕು. ನಡೀರಿ, ಆಡೋಣ‘ ಎಂದು ಅಂಪೈರ್ ಹೇಳಿದ್ದು ಸ್ಟಂಪ್ ಮೈಕ್ರೊಫೋನ್‌ನಲ್ಲಿ ಕೇಳಿಸಿದೆ.
ಈ ಬಿಸಿಚರ್ಚೆ ಚೆಂಡು ವಿರೂಪಗಳಿಸಿದ ಪ್ರಕರಣದ ತಿರುವು ಪಡೆಯುವ ಲಕ್ಷಣಗಳು ಕಾಣಿಸಿದವು.
‘ಹಾಗಾದರೆ, ಈ ಚೆಂಡಿನೊಡನೆ ಆಡಬೇಕಾ?. ಇದು ಮೂರ್ಖತನದ ನಿರ್ಧಾರ’ ಎಂದು ಇಶಾನ್ ತಿರುಗಿಬಿದ್ದರು. ವಾಗ್ವಾದದಿಂದ ಸಿಟ್ಟಿಗೆದ್ದ ಕ್ರೆಗ್, ‘ಎಕ್ಸ್‌ಕ್ಯೂಸ್ ಮಿ. ನಿಮ್ಮ ವಿರುದ್ಧ ಅಶಿಸ್ತು ತೋರಿದ ವರದಿ ಸಲ್ಲಿಸಬೇಕಾಗುತ್ತದೆ. ಇದು ಅನುಚಿತ ನಡವಳಿಕೆ. ನಿಮ್ಮ ವರ್ತನೆಯಿಂದ ನಾವು ಚೆಂಡು ಬದಲಾಯಿಸಿದ್ದೇವೆ’ ಎಂದಿದ್ದಾರೆ.
ಆದರೆ ಚೆಂಡು ಬದಲಾಯಿಸಿದ್ದು, ಅದು ಆಡಲು ಯೋಗ್ಯವಾಗಿಲ್ಲದ ಕಾರಣ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಪಂದ್ಯ ಮುಗಿದು ಮೂರು ಗಂಟೆಗಳ ನಂತರ ನೀಡಿದ ಹೇಳಿಕೆಯಲ್ಲಿ ಸ್ಪಷ್ಟಪಡಿಸಿ ವಿವಾದಕ್ಕೆ ತೆರೆಯೆಳೆದಿದೆ. ಕಿಶನ್ ವಿರುದ್ಧ ಅಶಿಸ್ತಿನ ಆರೋಪ ಹೊರಿಸುವುದಿಲ್ಲ ಎಂದೂ ತಿಳಿಸಿದೆ. ಹೀಗಾಗಿ ಪ್ರಕರಣ ತಿಳಿಗೊಂಡಿತು.
ದಿನದಾಟ ಆರಂಭವಾಗುವ ಮೊದಲು ಉಭಯ ತಂಡದ ನಾಯಕರಿಗೆ ಮತ್ತು ಮ್ಯಾನೇಜರ್‌ಗಳಿಗೆ ಈ (ಚೆಂಡು ಬದಲಾವಣೆ) ನಿರ್ಧಾರದ ಬಗ್ಗೆ ತಿಳಿಸಲಾಗಿದೆ. ಹೀಗಾಗಿ ಮುಂದಿನ ಕ್ರಮ ಕೈಗೊಳ್ಳುವುದಿಲ್ಲ ಎಂದೂ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.