ಲಂಡನ್: ಆಸ್ಟ್ರೇಲಿಯಾ ತಂಡದ ಸ್ಪಿನ್ನರ್ ಆ್ಯಡಂ ಜಂಪಾ ಅವರ ಸುತ್ತ ಈಗ ಸಂಶಯದ ಹುತ್ತ ಬೆಳೆದಿದೆ. ಭಾನುವಾರ ಭಾರತ ಎದುರಿನ ಪಂದ್ಯದಲ್ಲಿ ಅವರು ಚೆಂಡು ವಿರೂಪಗೊಳಿಸಿದ ಅನುಮಾನ ವ್ಯಕ್ತವಾಗಿದೆ.
ಭಾರತದ ಶಿಖರ್ ಧವನ್ ಮತ್ತು ವಿರಾಟ್ ಕೊಹ್ಲಿಬ್ಯಾಟಿಂಗ್ ಮಾಡುವ ಸಂದರ್ಭದಲ್ಲಿ ಜಂಪಾ ಬೌಲಿಂಗ್ ಮಾಡುತ್ತಿದ್ದರು. ಆದರೆ ಪದೇ ಪದೇ ತಮ್ಮ ಪ್ಯಾಂಟ್ ಜೇಬಿನಲ್ಲಿ ಕೈಹಾಕಿ ತೆಗೆದು ಚೆಂಡನ್ನು ರಬ್ ಮಾಡುತ್ತಿದ್ದರು. ಈ ನಡೆಯನ್ನು ಟಿವಿಯಲ್ಲಿ ತೋರಿಸಿದ್ದನ್ನು ಗುರುತಿಸಿದ ಹಲವುಕ್ರಿಕೆಟ್ ಪ್ರಿಯರು ಟ್ವಿಟರ್‌ಗೆ ಲಗ್ಗೆ ಇಟ್ಟರು.
‘ಆ್ಯಂಡಂ ಜಂಪಾ ಪದೇಪದೇ ಜೀಬಿಗೆ ಏಕೆ ಕೈಹಾಕುತ್ತಿದ್ದಾರೆ? ಚೆಂಡನ್ನೂ ಕೂಡ ಒಮ್ಮೆ ಜೀಬಿಗೆ ಹಾಕಿಕೊಂಡಿದ್ದುಏಕೆ? ಅವರು ಏನು ಮಾಡಿದ್ದಾರೆ ಎಂಬುದರ ಬಗ್ಗೆ ಸೂಕ್ತ ತನಿಖೆ ನಡೆಸುವುದರಲ್ಲಿ ತಪ್ಪಿಲ್ಲ’ ಎಂದು ಬಹಳಷ್ಟು ಜನರು ಟ್ವೀಟ್ ಮಾಡಿದ್ದಾರೆ.
‘ಅವರು ತಮ್ಮ ಪ್ಯಾಂಟಿನ ಬಲಬದಿಯ ಜೇಬಿನಲ್ಲಿ ಏನೋ ಇಟ್ಟುಕೊಂಡಿದ್ದಾರೆ. ಪ್ರತಿಯೊಂದು ಎಸೆತ ಹಾಕುವಾಗಲೂ ಅವರು ಜೀಬಿಗೆ ಕೈಹಾಕಿ ನಂತರ ಚೆಂಡನ್ನು ತಿಕ್ಕಿ ಹಾಕುತ್ತಿದ್ದಾರೆ’ ಎಂದು ಕೆಲವರು ಟ್ವೀಟ್ ಮಾಡಿದ್ದಾರೆ.
ಹೋದ ವರ್ಷ ದಕ್ಷಿಣ ಆಫ್ರಿಕಾದಲ್ಲಿ ನಡೆದಿದ್ದ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡದ ಡೇವಿಡ್ ವಾರ್ನರ್, ಸ್ಟೀವನ್ ಸ್ಮಿತ್ ಮತ್ತು ಬ್ಯಾಂಕ್ರಾಫ್ಟ್ ಅವರು ಚೆಂಡು ವಿರೂಪಗೊಳಿಸಿ ಸಿಕ್ಕಿಬಿದ್ದಿದ್ದರು. ‘ಸ್ಯಾಂಡ್‌ಪೇಪರ್ ಗೇಟ್’ ಪ್ರಕರಣವೆಂದೇ ಕುಖ್ಯಾತವಾಗಿತ್ತು. ಅದರಲ್ಲಿ ಒಂದು ವರ್ಷ ನಿಷೇಧ ಶಿಕ್ಷೆ ಅನುಭವಿಸಿದ್ದ ಸ್ಮಿತ್ ಮತ್ತು ವಾರ್ನರ್ ಈ ವಿಶ್ವಕಪ್ ಟೂರ್ನಿಯಲ್ಲಿ ತಮ್ಮ ತಂಡಕ್ಕೆ ಮರಳಿದ್ದಾರೆ.
ಇದನ್ನೂ ಓದಿ:‘ಗಬ್ಬರ್’ ಅಬ್ಬರ; ರನ್ಗಳ ‘ಶಿಖರ’
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.