ADVERTISEMENT

ಮಹಿಳೆಯರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ: ಪಾಂಡ್ಯ, ರಾಹುಲ್‌ ಮೇಲೆ ನಿಷೇಧದ ತೂಗುಗತ್ತಿ

ಕಾನೂನು ಘಟಕದ ಮೊರೆ

ಪಿಟಿಐ
Published 10 ಜನವರಿ 2019, 11:58 IST
Last Updated 10 ಜನವರಿ 2019, 11:58 IST
ಕಾಫಿ ವಿಥ್ ಕರಣ್ ಕಾರ್ಯಕ್ರಮದಲ್ಲಿ ಹಾರ್ದಿಕ್ ಪಾಂಡ್ಯ (ಎಡ), ಕೆ.ಎಲ್‌.ರಾಹುಲ್‌ (ಬಲ) ಮತ್ತು ಕರಣ್‌. –ಟ್ವಿಟರ್ ಚಿತ್ರ
ಕಾಫಿ ವಿಥ್ ಕರಣ್ ಕಾರ್ಯಕ್ರಮದಲ್ಲಿ ಹಾರ್ದಿಕ್ ಪಾಂಡ್ಯ (ಎಡ), ಕೆ.ಎಲ್‌.ರಾಹುಲ್‌ (ಬಲ) ಮತ್ತು ಕರಣ್‌. –ಟ್ವಿಟರ್ ಚಿತ್ರ   

ನವದೆಹಲಿ: ಮಹಿಳೆಯರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿರುವ ಭಾರತ ಕ್ರಿಕೆಟ್ ತಂಡದ ಆಲ್‌ರೌಂಡರ್ ಹಾರ್ದಿಕ್ ‍ಪಾಂಡ್ಯ ಮತ್ತು ಆರಂಭಿಕ ಬ್ಯಾಟ್ಸ್‌ಮನ್ ಕೆ.ಎಲ್‌.ರಾಹುಲ್ ಅವರ ಮೇಲೆ ನಿಷೇಧ ಹೇರಬೇಕು ಎಂದು ಬಿಸಿಸಿಐ ಆಡಳಿತಾಧಿಕಾರಿಗಳ ಸಮಿತಿ ಮುಖ್ಯಸ್ಥ ವಿನೋದ್ ರಾಯ್‌ ಶಿಫಾರಸು ಮಾಡಿದ್ದಾರೆ.

ಬಾಲಿವುಡ್ ನಿರ್ದೇಶಕ ಕರಣ್ ಜೋಹರ್ ನಡೆಸಿಕೊಡುವ ‘ಕಾಫಿ ವಿದ್‌ ಕರಣ್‌’ ಸೆಲೆಬ್ರಿಟಿ ಚಾಟ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಈ ಇಬ್ಬರು ಆಟಗಾರರು ತಾವನುಭವಿಸಿದ ಲೈಂಗಿಕತೆಯ ಕುರಿತು ಮಾತನಾಡಿದ್ದರು. ಇದು ವಿವಾದದ ರೂಪ ಪಡೆದುಕೊಳ್ಳುತ್ತಿದ್ದಂತೆ ಕ್ಷಮೆ ಕೋರಿದ್ದರು. ಆದರೆ ನೋಟಿಸ್ ಜಾರಿಗೊಳಿಸಿದ್ದ ಬಿಸಿಸಿಐ 24 ತಾಸು ಒಳಗೆ ಉತ್ತರ ನೀಡುವಂತೆ ತಾಕೀತು ಮಾಡಿತ್ತು.

ಗುರುವಾರ ಈ ಕುರಿತು ಹೇಳಿಕೆ ನೀಡಿರುವ ವಿನೋದ್ ರಾಯ್ ಅವರು ಇಬ್ಬರೂ ಆಟಗಾರರ ಮೇಲೆ ಎರಡು ಏಕದಿನ ಪಂದ್ಯಗಳ ನಿಷೇಧ ಹೇರಬೇಕು ಎಂದಿದ್ದಾರೆ. ಇದೇ ವೇಳೆ, ಆಡಳಿತಾಧಿಕಾರಿಗಳ ಸಮಿತಿಯ ಸದಸ್ಯೆ ಡಯಾನ ಎಡುಲ್ಜಿ ಪ್ರಕರಣವನ್ನು ಬಿಸಿಸಿಐ ಕಾನೂನು ಘಟಕಕ್ಕೆ ವರ್ಗಾಯಿಸಿದ್ದಾರೆ.

ADVERTISEMENT

ವಿನೋದ್ ರಾಯ್ ಮಾತಿಗೆ ಮನ್ನಣೆ ನೀಡಿ ನಿಷೇಧ ಜಾರಿಯಾದರೆ ಆಸ್ಟ್ರೇಲಿಯಾ ಎದುರು ಇದೇ ಶನಿವಾರ ಆರಂಭವಾಗಲಿರುವ ಏಕದಿನ ಸರಣಿಯ ಮೊದಲ ಎರಡು ಪಂದ್ಯಗಳಿಂದ ಪಾಂಡ್ಯ ಮತ್ತು ರಾಹುಲ್ ಹೊರಗುಳಿಯಲಿದ್ದಾರೆ.

‘ಹಾರ್ದಿಕ್ ನೀಡಿದ ವಿವರಣೆ ನನಗೆ ತೃಪ್ತಿ ತಂದಿಲ್ಲ. ಆದ್ದರಿಂದ ನಿಷೇಧಕ್ಕೆ ಶಿಫಾರಸು ಮಾಡಿದ್ದೇನೆ. ಆದರೆ ಅಂತಿಮ ನಿರ್ಧಾರ ಕೈಗೊಳ್ಳುವ ಮುನ್ನ ಡಯಾನ ಎಡುಲ್ಜಿ ಅವರ ಅಭಿಪ್ರಾಯ ಕೂಡ ಕೇಳಲಾಗುವುದು’ ಎಂದು ವಿನೋದ್ ಹೇಳಿದರು.

ಎಡುಲ್ಜಿ ಅವರು ಬಿಸಿಸಿಐ ಹಂಗಾಮಿ ಅಧ್ಯಕ್ಷ ಸಿ.ಕೆ.ಖನ್ನಾ, ಹಂಗಾಮಿ ಕಾರ್ಯದರ್ಶಿ ಅಮಿತಾಬ್‌ ಚೌಧರಿ ಮತ್ತು ಖಜಾಂಚಿ ಅನಿರುದ್ಧ ಚೌಧರಿ ಅವರ ಅಭಿಪ್ರಾಯವನ್ನು ಕೂಡ ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಚೌಧರಿ ಇಬ್ಬರನ್ನೂ ಅಮಾನತುಗೊಳಿಸುವಂತೆಯೂ ಲಿಂಗ ಸೂಕ್ಷ್ಮತೆಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ರೂಪಿಸುವಂತೆಯೂ ಹೇಳಿದ್ದಾರೆ.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿಯ ಭ್ರಷ್ಟಾಚಾರ ನಿಗ್ರಹ ಘಟಕದ ಅಧಿಕಾರಿಗಳು, ಇಂಥ ಸ್ವಭಾವಗಳು ಇವೆ ಎಂದು ಗೊತ್ತಾದರೆ ಆಟಗಾರರನ್ನು ಹನಿಟ್ರ್ಯಾಪ್‌ಗೆ ಬೀಳಿಸುವ ಪ್ರಯತ್ನಗಳು ನಡೆಯಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

‘ಅನೇಕ ಮಹಿಳೆಯರ ಜೊತೆ ಲೈಂಗಿಕ ಸುಖ ಅನುಭವಿಸಿದ್ದೇನೆ. ಮೊದಲ ಲೈಂಗಿಕ ಅನುಭವವನ್ನು ಮನೆಯಲ್ಲಿ ಹೇಳಿದಾಗ ಪಾಲಕರು ಉದಾರವಾಗಿ ನಡೆದುಕೊಂಡಿದ್ದರು’ ಎಂದು ಹಾರ್ದಿಕ್ ಪಾಂಡ್ಯ ಕಾರ್ಯಕ್ರಮದಲ್ಲಿ ಹೇಳಿದ್ದರು. ರಾಹುಲ್‌, ‘ನಾನು 18 ವರ್ಷದವನಿದ್ದಾಗ ಜೇಬಿನಲ್ಲಿ ಕಾಂಡೋಮ್ ಪ್ಯಾಕೆಟ್ ಇರಿಸಿಕೊಂಡು ಮನೆಯಲ್ಲಿ ಸಿಕ್ಕಿಬಿದ್ದಿದ್ದೆ’ ಎಂದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.