ADVERTISEMENT

U19 Asia Cup | ಭಾರತಕ್ಕೆ ಸೋಲು, ಫೈನಲ್‌ಗೆ ಬಾಂಗ್ಲಾ

ಏಷ್ಯಾ ಕಪ್ 19 ವರ್ಷದೊಳಗಿನವರ ಕ್ರಿಕೆಟ್‌

ಪಿಟಿಐ
Published 15 ಡಿಸೆಂಬರ್ 2023, 14:44 IST
Last Updated 15 ಡಿಸೆಂಬರ್ 2023, 14:44 IST
<div class="paragraphs"><p>(ಚಿತ್ರ ಕೃಪೆ: X/<a href="https://twitter.com/ACCMedia1">@ACCMedia1</a>)</p></div>

(ಚಿತ್ರ ಕೃಪೆ: X/@ACCMedia1)

   

ದುಬೈ: ಎಡಗೈ ಮಧ್ಯಮ ವೇಗದ ಬೌಲರ್ ಮರೂಫ್ ಮ್ರಿಧಾ ಅವರ ಅಮೋಘ ಬೌಲಿಂಗ್ (41ಕ್ಕೆ4) ಮತ್ತು ಆರಿಫುಲ್ ಇಸ್ಲಾಂ ಅವರ 94 (90 ಎಸೆತ) ರನ್‌ಗಳ ನೆರವಿನಿಂದ ಬಾಂಗ್ಲಾದೇಶ ತಂಡ, ಏಷ್ಯಾ ಕಪ್ 19 ವರ್ಷದೊಳಗಿನವರ ಏಕದಿನ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಭಾರತ ತಂಡವನ್ನು ಶುಕ್ರವಾರ ನಾಲ್ಕು ವಿಕೆಟ್‌ಗಳಿಂದ ಸೋಲಿಸಿತು.

ಬಾಂಗ್ಲಾದೇಶ ಭಾನುವಾರ ನಡೆಯುವ ಫೈನಲ್‌ನಲ್ಲಿ ಆತಿಥೇಯ ಯುಎಇ ತಂಡವನ್ನು ಎದುರಿಸಲಿದೆ. ಯುಎಇ ಮೊದಲ ಸೆಮಿಫೈನಲ್‌ನಲ್ಲಿ 11 ರನ್‌ಗಳಿಂದ ಪಾಕಿಸ್ತಾನಕ್ಕೆ ಆಘಾತ ನೀಡಿತು.

ADVERTISEMENT

ಟಾಸ್ ಸೋತಿದ್ದ ಭಾರತ ತಂಡ ಮರೂಫ್ ಅವರ ದಾಳಿಗೆ ಕುಸಿಯಿತು. ಆರಂಭ ಆಟಗಾರರು, ನಾಯಕ ಉದಯ್ ಸಹಾರಣ್ ಅವರ ವಿಕೆಟ್‌ ಸೇರಿದಂತೆ ನಾಲ್ಕು ವಿಕೆಟ್‌ಗಳನ್ನು ಪಡೆದ ಮರೂಫ್ ಪಂದ್ಯ ಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಭಾರತ 42.4 ಓವರುಗಳಲ್ಲಿ 188 ರನ್‌ಗಳಿಗೆ ಆಲೌಟ್ ಆಯಿತು. ಒಂದು ಹಂತದಲ್ಲಿ ಭಾರತ 61 ರನ್‌ಗಳಾಗುವಷ್ಟರಲ್ಲಿ 6 ವಿಕೆಟ್‌ಗಳನ್ನು ಕಳೆದುಕೊಂಡು ಏದುಸಿರು ಬಿಡುತ್ತಿದ್ದಾಗ, ಮುಷೀರ್ ಖಾನ್ (50, 61ಎ, 4X3) ಮತ್ತು ಮುರುಗನ್ ಅಭಿಷೇಕ್ (62, 74 ಎ, 4x6, 2x6) ಏಳನೇ ವಿಕೆಟ್‌ಗೆ 84 ರನ್ ಸೇರಿಸಿ ತಂಡ ಕುಸಿಯದಂತೆ ನೋಡಿಕೊಂಡರು.

ಬಾಂಗ್ಲಾದೇಶವೂ ಆರಂಭದಲ್ಲಿ ಕುಸಿತ ಕಂಡಿದ್ದು, ಹತ್ತನೇ ಓವರ್‌ನಲ್ಲಿ 34 ರನ್‌ಗಳಾಗುವಷ್ಟರಲ್ಲಿ 3 ವಿಕೆಟ್‌ ಕಳೆದುಕೊಂಡಿತ್ತು. ಆದರೆ ಆರಿಫುಲ್ (4x9, 6x4) ಮತ್ತು ಅರ್ಹಾರ್ ಅಮಿನ್ (44) ನೆರವಿಗೆ ಬಂದು ನಾಲ್ಕನೇ ವಿಕೆಟ್‌ಗೆ ಅಮೂಲ್ಯ 138 ರನ್ ಸೇರಿಸಿ ತಂಡವನ್ನು ಗೆಲುವಿನ ಹಾದಿಯಲ್ಲಿ ಮುನ್ನಡೆಸಿದರು. ಕೊನೆಗಳಿಗೆಯಲ್ಲಿ ತಂಡ ಮತ್ತೆ ಮೂರು ವಿಕೆಟ್‌ಗಳನ್ನು ಕಳೆದುಕೊಂಡರೂ 42.5 ಓವರುಗಳಲ್ಲಿ 6 ವಿಕೆಟ್‌ಗೆ 189 ರನ್ ಹೊಡೆದು ಸಂಭ್ರಮ ಆಚರಿಸಿತು.

ಸ್ಕೋರುಗಳು: ಭಾರತ: 42.4 ಓವರುಗಳಲ್ಲಿ 188 (ಮುಶೀರ್ ಖಾನ್ 50, ಮುರುಗನ್ ಅಭಿಷೇಕ್ 62; ಮರೂಫ್ ಮ್ರಿಧಾ 41ಕ್ಕೆ4, ರೋಹನತ್ ದೌಲಾ 39ಕ್ಕೆ2, ಷೇಕ್ ಪರ್ವೇಜ್ ಜಿಬೊನ್ 29ಕ್ಕೆ2); ಬಾಂಗ್ಲಾದೇಶ: 42.5 ಓವರುಗಳಲ್ಲಿ 6 ವಿಕೆಟ್‌ಗೆ 189 (ಅರಿಫುಲ್ ಇಸ್ಲಾಂ 94, ಅಹ್ರಾರ್ ಅಮಿನ್ 44, ರಾಜ್ ಲಿಂಬಾನಿ 47ಕ್ಕೆ2, ನಮನ್ ತಿವಾರಿ 35ಕ್ಕೆ3). ಬಾಂಗ್ಲಾದೇಶಕ್ಕೆ 4 ವಿಕೆಟ್‌ ಜಯ.

ಯುಎಇ: 47.5 ಓವರುಗಳಲ್ಲಿ 193 (ಅಯಾನ್ ಖಾನ್ 55, ಆರ್ಯಾನ್ಷ್ ಶರ್ಮಾ 46, ಇತನ್ ಡಿಸೋಜ 37; ಉಬೇದ್ ಶಾ 44ಕ್ಕೆ4); ಪಾಕಿಸ್ತಾನ: 49.3 ಓವರುಗಳಲ್ಲಿ 182 (ಸಾದ್ ಬೇಗ್ 50, ಅಝಾನ್ ಅವೈಸ್ 41; ಏಮಾನ್ ಅಹ್ಮದ್ 18ಕ್ಕೆ2, ಹಾರ್ದಿಕ್ ಪೈ 35ಕ್ಕೆ2). ಯುಎಇಗೆ 11 ರನ್‌ ಜಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.