ADVERTISEMENT

T20 WC: ನೇಪಾಳ ವಿರುದ್ಧ ಗೆದ್ದು ಸೂಪರ್‌ ಎಂಟಕ್ಕೆ ಅರ್ಹತೆ ಪಡೆದ ಬಾಂಗ್ಲಾದೇಶ

ಪಿಟಿಐ
Published 17 ಜೂನ್ 2024, 4:59 IST
Last Updated 17 ಜೂನ್ 2024, 4:59 IST
   

ಕಿಂಗ್ಸ್‌ಟೌನ್‌ (ಸೇಂಟ್‌ ವಿನ್ಸೆಂಟ್‌): ಮಧ್ಯಮ ವೇಗಿ ತಂಜಿಮ್ ಹಸನ್ ಸಕಿಬ್ ಅವರ ಜೀವನ ಶ್ರೇಷ್ಠ ಬೌಲಿಂಗ್ (4–2–7–4) ನೆರವಿನಿಂದ ಬಾಂಗ್ಲಾದೇಶ ತಂಡ ಟಿ20 ವಿಶ್ವಕಪ್‌ನ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ನೇಪಾಳ ತಂಡವನ್ನು ಸೋಮವಾರ 21 ರನ್‌ಗಳಿಂದ ಸೋಲಿಸಿ ಸೂಪರ್ ಎಂಟರ ಹಂತ ಪ್ರವೇಶಿಸಿತು.

ಈ ಹಿಂದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡಕ್ಕೆ ಪ್ರಬಲ ಪೈಪೋಟಿ ನೀಡಿದ್ದ ನೇಪಾಳ ಸೋಮವಾರ ನಡೆದ ಈ ಪಂದ್ಯದಲ್ಲೂ ಸುಲಭವಾಗಿ ಮಣಿಯಲಿಲ್ಲ. ಬೌಲರ್‌ಗಳ ಸಾಂಘಿಕ ಪ್ರಯತ್ನದಿಂದ ಬಾಂಗ್ಲಾದೇಶ ತಂಡವನ್ನು 106 ರನ್ನಿಗೆ ಆಲೌಟ್‌ ಮಾಡಿತ್ತು. ಆದರೆ ತಂಜೀಮ್‌,  ಅನುಭವಿ ಶಕಿಬ್ ಅಲ್ ಹಸನ್ (9ಕ್ಕೆ2), ಮುಸ್ತಫಿಝುರ್ ರಹಮಾನ್ (4–1–7–3) ಅವರು ಬಿಗು ಬೌಲಿಂಗ್‌ನಿಂದ ನೇಪಾಳ ನಾಲ್ಕು ಎಸೆತಗಳಿರುವಂತೆ 85 ರನ್ನಿಗೆ ಕುಸಿಯಿತು.

ದಕ್ಷಿಣ ಆಫ್ರಿಕಾ ‘ಡಿ’ ಗುಂಪಿನಲ್ಲಿ ಮೊದಲನೇ ಸ್ಥಾನ ಪಡೆದರೆ, ಬಾಂಗ್ಲಾದೇಶ ಎರಡನೇ ಸ್ಥಾನದಲ್ಲಿ ಲೀಗ್‌ ವ್ಯವಹಾರ ಪೂರೈಸಿತು.

ADVERTISEMENT

ಒಂದು ಹಂತದಲ್ಲಿ ನೇಪಾಳ 5 ವಿಕೆಟ್‌ಗೆ 78 ರನ್ ಗಳಿಸಿ ಗೆಲುವಿನತ್ತ ಸಾಗಿದಂತೆ ಕಂಡರೂ, ಐದು ರನ್‌ ಅಂತರದಲ್ಲಿ ಏಳು ವಿಕೆಟ್‌ ಕಳೆದುಕೊಂಡಿತು. ಬ್ಯಾಟಿಂಗ್‌ನಲ್ಲಿ ನಿರಾಶೆ ಮೂಡಿಸಿದ ಬಾಂಗ್ಲಾ ತನ್ನೆಲ್ಲಾ ಬೌಲಿಂಗ್ ಸಂಪನ್ಮೂಲ ಬಳಸಿ ಹೋರಾಟ ನೀಡಿದ ಎದುರಾಳಿಯನ್ನು ಕಟ್ಟಿಹಾಕಿತು. ಒಂದು ಹಂತದಲ್ಲಿ ನೇಪಾಳವನ್ನು 5 ವಿಕೆಟ್‌ಗೆ 26 ರನ್‌ಗಳಿಗೆ ಸೀಮಿತಗೊಳಿಸಿದ್ದ ಬಾಂಗ್ಲಾದೇಶ ಗೆಲುವಿನತ್ತ ಸಾಗಿತ್ತು. ಆದರೆ ಕುಶಲ್ ಮಲ್ಲ (27) ಮತ್ತು ದೀಪೇಂದ್ರ ಸಿಂಗ್ ಐರಿ (25) ಅವರು ಆರನೇ ವಿಕೆಟ್‌ಗೆ 52 ರನ್ ಸೇರಿಸಿ, ಹೋರಾಟ ಪ್ರದರ್ಶಿಸಿ ಗೆಲುವಿನಾಸೆ ಮೂಡಿಸಿದ್ದರು. ಈ ಹಂತಲ್ಲೇ ನಾಟಕೀಯ ಕುಸಿತ ಆರಂಭವಾಯಿತು. ಇವರಿಬ್ಬರ ವಿಕೆಟ್‌ಗಳನ್ನು ಮುಸ್ತಫಿಜುರ್ ಪಡೆದರು. ಸ್ಲೊ ಆಫ್ ಕಟರ್‌ಗಳನ್ನು ಪರಿಣಾಮಕಾರಿಯಾಗಿ ಪ್ರಯೋಗಿಸಿದರು.

ಇದಕ್ಕೆ ಮೊದಲು ಆಡಿದ ಬಾಂಗ್ಲಾದೇಶದ ಬ್ಯಾಟರ್‌ಗಳಲ್ಲಿ ಒಬ್ಬರೂ 20ರ ಗಡಿ ದಾಟಲಿಲ್ಲ.

‘ಅನನುಭವ ತಂಡಕ್ಕೆ ಹಿನ್ನಡೆ ಉಂಟುಮಾಡಿತು’ ಎಂದು ನೇಪಾಳ ನಾಯಕ ರೋಹಿತ್ ಪೌದೆಲ್‌ ಒಪ್ಪಿಕೊಂಡರು.

ಸ್ಕೋರುಗಳು:

ಬಾಂಗ್ಲಾದೇಶ: 19.3 ಓವರುಗಳಲ್ಲಿ 106 (ಶಕೀಬ್ ಅಲ್ ಹಸನ್ 17, ಮಹಮುದುಲ್ಲಾ 15, ರಿಷದ್ ಹುಸೇನ್ 13; ಸೋಮಪಲ್ ಕಮಿ 10ಕ್ಕೆ2, ದೀಪೇಂದ್ರ ಸಿಂಗ್ ಐರಿ 22ಕ್ಕೆ2, ರೋಹಿತ್ ಪೌದೆಲ್‌ 20ಕ್ಕೆ2, ಸಂದೀಪ್ ಲಾಮಿಚಾನೆ 17ಕ್ಕೆ2);

ನೇಪಾಳ: 19.2 ಓವರುಗಳಲ್ಲಿ 85 (ಕುಶಲ್ ಮಲ್ಲ 27, ದೀಪೇಂದ್ರ ಸಿಂಗ್ ಐರಿ 25; ತಂಜಿಮ್ ಹಸನ್ ಶಕೀಬ್ 7ಕ್ಕೆ4, ಮುಸ್ತಫಿಜುರ್ ರೆಹಮಾನ್ 7ಕ್ಕೆ3, ಶಕೀಬ್ ಅಲ್ ಹಸನ್ 9ಕ್ಕೆ2, ತಸ್ಕಿನ್ ಅಹ್ಮದ್ 29ಕ್ಕೆ1).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.