ADVERTISEMENT

ಶಕೀಬ್‌ ಸವಾಲು ಎದುರಿಸಲು ಆಸ್ಟ್ರೇಲಿಯಾ ಸಜ್ಜು

ಆಸ್ಟ್ರೇಲಿಯಾ–ಬಾಂಗ್ಲಾದೇಶ ಹಣಾಹಣಿ ಇಂದು: ಉತ್ತಮ ಲಯದಲ್ಲಿ ಫಿಂಚ್‌, ವಾರ್ನರ್‌

ಏಜೆನ್ಸೀಸ್
Published 19 ಜೂನ್ 2019, 19:45 IST
Last Updated 19 ಜೂನ್ 2019, 19:45 IST
   

ನಾಟಿಂಗಂ: ಗುರುವಾರ ಇಲ್ಲಿ ನಡೆಯಲಿರುವ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಎದುರಿಸಲು ಬಾಂಗ್ಲಾದೇಶ ತಂಡವು ಆತ್ಮವಿಶ್ವಾಸದಿಂದ ಸಜ್ಜಾಗಿದೆ. ಅದಕ್ಕೆ ಕಾರಣ ಆ ತಂಡದ ಆಲ್‌ರೌಂಡರ್‌ ಶಕೀಬ್ ಅಲ್ ಹಸನ್.

ಅನುಭವಿ ಆಟಗಾರರು ಇರುವ ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್‌ ಇಂಡೀಸ್ ತಂಡಗಳ ಎದುರು ಬಾಂಗ್ಲಾ ತಂಡವು ಗೆದ್ದು ಬೀಗಲು ಶಕೀಬ್ ಆಟವೇ ಕಾರಣವಾಗಿತ್ತು. ಟೂರ್ನಿಯಲ್ಲಿ ಎರಡು ಶತಕ ಮತ್ತು ಎರಡು ಅರ್ಧಶತಕ ಗಳಿಸಿರುವ ಹಸನ್ ಒಟ್ಟು 384 ರನ್‌ ಗಳಿಸಿದ್ಧಾರೆ. ಬ್ಯಾಟ್ಸ್‌ಮನ್‌ಗಳ ಪಟ್ಟಿಯ ಅಗ್ರಸ್ಥಾನದಲ್ಲಿದ್ದಾರೆ. ವಿಂಡೀಸ್ ಎದುರಿನ ಪಂದ್ಯದಲ್ಲಿ ಅವರೊಂದಿಗೆ ಬ್ಯಾಟ್ಸ್‌ಮನ್ ಲಿಟನ್ ದಾಸ್ ಕೂಡ ಮಿಂಚಿದ್ದರು. ಅದೇ ಲಯವನ್ನು ಆ್ಯರನ್ ಫಿಂಚ್ ಬಳಗದ ಎದುರು ಮುಂದುವರಿಸುವ ಛಲದಲ್ಲಿ ತಂಡವಿದೆ.

ಆದರೆ ಕಾಂಗರೂ ನಾಡಿನ ಪಡೆಯನ್ನು ಎದುರಿಸುವುದು ಸುಲಭವಲ್ಲ.

ADVERTISEMENT

ತಂಡವು ಆಡಿರುವ ಐದು ಪಂದ್ಯಗಳಲ್ಲಿ ಭಾರತದ ಎದುರು ಮಾತ್ರ ಸೋತಿತ್ತು. ಉಳಿದದ್ದರಲ್ಲಿ ಅಧಿಕಾರಯುತ ಜಯ ಸಾಧಿಸಿದೆ.ಟೂರ್ನಿಯ ಆರಂಭದಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ನಾಯಕ ಫಿಂಚ್ ಈಗ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಹೋದ ಪಂದ್ಯದಲ್ಲಿ ಒಂದು ಶತಕ ಬಾರಿಸಿದ್ದರು. ಅವರೊಂದಿಗೆ ಡೇವಿಡ್ ವಾರ್ನರ್, ಸ್ಟೀವನ್ ಸ್ಮಿತ್, ಗ್ಲೆನ್ ಮ್ಯಾಕ್ಸ್‌ವೆಲ್ ಕೂಡ ಒಳ್ಳೆಯ ಲಯದಲ್ಲಿದ್ದಾರೆ. ಕೆಳಕ್ರಮಾಂಕದಲ್ಲಿ ಅಲೆಕ್ಸ್‌ ಕ್ಯಾರಿ ಮತ್ತು ನೇಥನ್ ಕಾಲ್ಟರ್‌ನೈಲ್ ಅವರೂ ತಂಡಕ್ಕೆ ರನ್‌ಗಳ ಕಾಣಿಕೆ ನೀಡುವ ಸಮರ್ಥರು.

ಈ ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಕಟ್ಟಿಹಾಕಲು ಬಾಂಗ್ಲಾ ತಂಡದ ನಾಯಕ ಮತ್ತು ಮಧ್ಯಮವೇಗಿ ಮಷ್ರಫೆ ಮೊರ್ತಜಾ, ಮುಸ್ತಫಿಜರ್ ರೆಹಮಾನ್ ಮತ್ತು ಸ್ಪಿನ್ನರ್ ಶಕೀಬ್ ಅವರು ಬಹಳ ಶಿಸ್ತಿನ ಬೌಲಿಂಗ್ ಮಾಡುವುದು ಅನಿವಾರ್ಯ. ಫೀಲ್ಡಿಂಗ್‌ನಲ್ಲಿ ಲೋಪಗಳಾದರೆ ಪಂದ್ಯವನ್ನೇ ಕೈಬಿಟ್ಟಂತೆ ಲೆಕ್ಕ. ಏಕೆಂದರೆ, ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್‌ಗಳು ತಮಗೆ ಲಭಿಸಿದ ‘ಜೀವದಾನ’ವನ್ನು ವ್ಯರ್ಥಗೊಳಿಸುವುದು ಕಡಿಮೆ! ಫಿಂಚ್ ಬಳಗದ ಬೌಲರ್‌ಗಳಾದ ಪ್ಯಾಟ್ ಕಮಿನ್ಸ್‌, ಮಾರ್ಕಸ್ ಸ್ಟೋಯಿನಿಸ್, ನೇಥನ್ ಕಾಲ್ಟರ್‌ನೈಲ್ ಇದುವರೆಗೆ ಉತ್ತಮವಾಗಿ ಬೌಲಿಂಗ್ ಮಾಡಿದ್ದಾರೆ.

ಬಾಂಗ್ಲಾದ ಆರಂಭಿಕ ಜೋಡಿ ತಮೀಮ್ ಇಕ್ಬಾಲ್ ಮತ್ತು ಸೌಮ್ಯ ಸರ್ಕಾರ್ ಒಳ್ಳೆಯ ಆರಂಭ ನೀಡಿದರೆ, ದೊಡ್ಡ ಮೊತ್ತ ಗಳಿಸುವುದು ಅಥವಾ ಬೆನ್ನತ್ತುವುದು ಸುಲಭವಾಗುತ್ತದೆ. ಮಧ್ಯಮ ಕ್ರಮಾಂಕದಲ್ಲಿ ಶಕೀಬ್ ಮತ್ತು ಲಿಟನ್ ದಾಸ್ ತಮ್ಮ ಆಟವನ್ನು ಮುಂದುವರಿಸಿದರೆ ಆಸ್ಟ್ರೇಲಿಯಾ ಬೌಲರ್‌ಗಳು ಪರದಾಡಬೇಕಾಗಬಹುದು.

ತಂಡಗಳು
ಆಸ್ಟ್ರೇಲಿಯಾ: ಆ್ಯರನ್ ಫಿಂಚ್ (ನಾಯಕ), ಅಲೆಕ್ಸ್‌ ಕ್ಯಾರಿ (ವಿಕೆಟ್‌ಕೀಪರ್), ಜೇಸನ್ ಬೆಹ್ರನ್‌ಡಾರ್ಫ್, ನೇಥನ್ ಕೌಲ್ಟರ್‌ನೈಲ್, ಪ್ಯಾಟ್ ಕಮಿನ್ಸ್‌, ಉಸ್ಮಾನ್ ಖ್ವಾಜಾ,ಶಾನ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಕೇನ್ ರಿಚರ್ಡ್ಸನ್, ಸ್ಟೀವ್ ಸ್ಮಿತ್, ಮಿಷೆಲ್ ಸ್ಟಾರ್ಕ್, ಡೇವಿಡ್ ವಾರ್ನರ್,
ಅ್ಯಡಂ ಜಂಪಾ.

ಬಾಂಗ್ಲಾದೇಶ: ಮಷ್ರಫೆ ಮೊರ್ತಜಾ (ನಾಯಕ), ಶಕೀಬ್ ಅಲ್ ಹಸನ್, ಲಿಟನ್ ದಾಸ್, ಮೆಹದಿ ಹಸನ್, ಮೊಸಾದಿಕ್ ಹೊಸೇನ್, ರುಬೇಲ್ ಹೊಸೆನ್, ತಮೀಮ್ ಇಕ್ಬಾಲ್, ಅಬು ಜಯೇದ್, ಮೆಹಮುದುಲ್ಲಾ, ಮೊಹಮ್ಮದ್ ಮಿಥುನ್, ಮುಷ್ಫಿಕರ್ ರೆಹಮಾನ್, ಶಬ್ಬೀರ್ ರೆಹಮಾನ್, ಮೊಹಮ್ಮದ್ ಸೈಫುದ್ದೀನ್, ಸೌಮ್ಯ ಸರ್ಕಾರ್, ಮುಷ್ಫೀಕರ್ ರಹೀಮ್, ಮುಸ್ತಫಿಜುರ್ ರೆಹಮಾನ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.