ಶಾರ್ಜಾ: ಆಲ್‌ರೌಂಡ್ ಆಟವಾಡಿದ ಅಫ್ಗಾನಿಸ್ತಾನ ತಂಡ ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಮಂಗಳವಾರ ಬಾಂಗ್ಲಾದೇಶಕ್ಕೆ ಆಘಾತ ನೀಡಿತು.
ಶಾರ್ಜಾದಲ್ಲಿ ನಡೆದ ಪಂದ್ಯದಲ್ಲಿ ಅಫ್ಗನ್ ತಂಡ ಏಳು ವಿಕೆಟ್‌ಗಳ ಜಯ ಸಾಧಿಸಿತು. ಮೊದಲ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಮಣಿಸಿದ್ದ ಮೊಹಮ್ಮದ್ ನಬಿ ಬಳಗ ಇದರೊಂದಿಗೆ ‘ಬಿ’ ಗುಂಪಿನಲ್ಲಿ ಅಗ್ರಸ್ಥಾನ ಪಡೆದು ‘ಸೂಪರ್ ಫೋರ್’ ಹಂತ ಪ್ರವೇಶಿಸಿತು.
ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ ತಂಡ ಮುಜೀಬ್ ಉರ್ ರೆಹಮಾನ್ ಮತ್ತು ರಶೀದ್ ಖಾನ್ ಅವರ ಪ್ರಭಾವಿ ಬೌಲಿಂಗ್ ದಾಳಿಗೆ ನಲುಗಿ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 127 ರನ್ ಗಳಿಸಿತು. ಮುಜೀಬ್ ಮತ್ತು ರಶೀದ್ ತಲಾ ಮೂರು ವಿಕೆಟ್ ಪಡೆದರು. ಸಾಧಾರಣ ಗುರಿ ಬೆನ್ನಟ್ಟಿದ ಅಫ್ಗನ್ 18.3 ಓವರ್‌ಗಳಲ್ಲಿ 3 ವಿಕೆಟ್‌ಗೆ 131 ರನ್ ಗಳಿಸಿ ಜಯ ಸಾಧಿಸಿತು. ಇಬ್ರಾಹಿಂ ಜದ್ರಾನ್ (ಔಟಾಗದೆ 42, 41 ಎ., 4X4) ಮತ್ತು ನಜೀಬುಲ್ಲಾ ಜದ್ರಾನ್ (ಔಟಾಗದೆ 43, 17 ಎ., 4X1, 6X6) ಅವರು ತಂಡದ ಗೆಲುವಿನ ಹಾದಿ ಸುಗಮಗೊಳಿಸಿದರು. ಆರು ಸಿಕ್ಸರ್ ಸಿಡಿಸಿದ ನಜೀಬುಲ್ಲಾ, ಬಾಂಗ್ಲಾ ಬೌಲಿಂಗ್‌ನ ದಿಕ್ಕು ತಪ್ಪಿಸಿದರು.
ಪ್ರಭಾವಿ ಬೌಲಿಂಗ್: ಟಾಸ್ ಗೆದ್ದ ಬಾಂಗ್ಲಾ ನಾಯಕ ಶಕೀಬ್ ಅಲ್ ಹಸನ್ ಅವರು ಬ್ಯಾಟ್ ಮಾಡಲು ನಿರ್ಧರಿಸಿದರು. ಮೊಸದ್ದೆಕ್ ಹೊಸೇನ್ (ಅಜೇಯ 48, 31 ಎ., 4X4, 6X1) ಹೊರತುಪಡಿಸಿ ಎಲ್ಲರೂ ವಿಫಲರಾದರು.
ಆರಂಭಿಕ ಆಟಗಾರರಾದ ಮೊಹ ಮ್ಮದ್ ನಯೀಮ್ (6) ಮತ್ತು ಅನಾಮುಲ್ ಹಕ್ (5) ಅವರನ್ನು ಪೆವಿಲಿಯನ್‌ಗಟ್ಟಿದ ಮುಜೀಬ್, ಅಲ್ಪ ಸಮಯದ ಬಳಿಕ ನಾಯಕ ಶಕೀಬ್ (11) ಅವರ ವಿಕೆಟ್ ಕೂಡಾ ಪಡೆದರು.
ಮುಷ್ಫಿಕುರ್ ರಹೀಂ (1) ಮತ್ತು ಅಫೀಫ್ ಹೊಸೇನ್ (12) ಅವರು ರಶೀದ್ ಖಾನ್ ಕೈಚಳಕ್ಕೆ ವಿಕೆಟ್ ಒಪ್ಪಿಸಿದರು. 53 ರನ್ ಗಳಿಸುವಷ್ಟರಲ್ಲಿ ಐದು ವಿಕೆಟ್‌ಗಳು ಬಿದ್ದವು.
ಮೊಸದ್ದೆಕ್ ಅವರು ಮಹ ಮೂದುಲ್ಲಾ (25 ರನ್, 27 ಎಸೆತ) ಜತೆ ಆರನೇ ವಿಕೆಟ್‌ಗೆ 36 ರನ್ ಹಾಗೂ ಮೆಹ್ದಿ ಹಸನ್ ಜತೆ 7ನೇ ವಿಕೆಟ್‌ಗೆ 38 ರನ್ ಕಲೆಹಾಕಿದರು. ಇದರಿಂದ ತಂಡದ ಮೊತ್ತ 100ರ ಗಡಿ ದಾಟಿತು.
ಸಂಕ್ಷಿಪ್ತ ಸ್ಕೋರ್: ಬಾಂಗ್ಲಾದೇಶ: 20 ಓವರ್‌ಗಳಲ್ಲಿ 7ಕ್ಕೆ 127 (ಶಕೀಬ್ ಅಲ್ ಹಸನ್ 11, ಅಫೀಫ್ ಹೊಸೇನ್ 12, ಮಹಮೂದುಲ್ಲಾ 25, ಮೊಸದ್ದೆಕ್ ಹೊಸೇನ್ ಅಜೇಯ 48, ಮೆಹ್ದಿ ಹಸನ್ 14, ಮುಜೀಬ್ ಉರ್ ರೆಹಮಾನ್ 16ಕ್ಕೆ 3, ರಶೀದ್ ಖಾನ್ 22ಕ್ಕೆ 3).
ಅಫ್ಗಾನಿಸ್ತಾನ: 18.3 ಓವರ್‌ಗಳಲ್ಲಿ 3 ವಿಕೆಟ್‌ಗೆ 131 (ಹಜ್ರತುಲ್ಲಾ ಝಝೈ 23, ಇಬ್ರಾಹಿಂ ಜದ್ರಾನ್ ಔಟಾಗದೆ 42, ನಜೀಬುಲ್ಲಾ ಜದ್ರಾನ್ ಔಟಾಗದೆ 43, ಶಕೀಬ್ ಅಲ್ ಹಸನ್ 13ಕ್ಕೆ 1) ಫಲಿತಾಂಶ: ಅಫ್ಗಾನಿಸ್ತಾನಕ್ಕೆ 7 ವಿಕೆಟ್ ಗೆಲುವು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.