ಮೀರಪುರ್: ಭಾರತ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಸಂಘಟಿತ ಹೋರಾಟ ನಡೆಸಿದ ಬಾಂಗ್ಲಾದೇಶ, 5 ರನ್ ಅಂತರದಿಂದ ಗೆಲುವು ಸಾಧಿಸಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾ ಮೆಹದಿ ಹಸನ್ ಮಿರಾಜ್ ಶತಕ ಹಾಗೂ ಮೆಹಮೂದ್ ಉಲ್ಲಾಹ ಅರ್ಧಶತಕ ಬಲದಿಂದ 50 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 271 ರನ್ ಗಳಿಸಿತ್ತು.
ಈ ಗುರಿ ಬೆನ್ನತ್ತಿದ ಭಾರತ ಬ್ಯಾಟಿಂಗ್ ವೈಫಲ್ಯ ಎದುರಿಸಿತು. ಆರಂಭಿಕ ಆಟಗಾರರಾದ ಶಿಖರ್ ಧವನ್ 8, ವಿರಾಟ್ ಕೊಹ್ಲಿ 5 ರನ್ ಗಳಿಸಿ ಬೇಗ ಔಟಾದರು. ಬಳಿಕ ಕ್ರೀಸ್‌ಗೆ ಬಂದ ವಾಷಿಂಗ್ಟನ್ ಸುಂದರ್ 11, ಕೆ.ಎಲ್.ರಾಹುಲ್ 14 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ಶ್ರೇಯಸ್ ಐಯ್ಯರ್ 82, ಅಕ್ಷರ್ ಪಟೇಲ್ 56, ರೋಹಿತ್ ಶರ್ಮಾ ಔಟಾಗದೆ 51 ರನ್ ಗಳಿಸಿ ಉತ್ತಮ ಆಟವಾಡಿದರಾದರೂ ತಂಡಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಭಾರತ 50 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 266 ರನ್ ಗಳಿಸಿ ಸೋಲು ಕಂಡಿತು.
ಬಾಂಗ್ಲಾ ಪರ ಇಬಾದತ್ ಹುಸೇನ್ ಚೌಧರಿ 3, ಮೆಹದಿ ಹಸನ್ ಮಿರಾಜ್, ಶಕೀಬ್ ಅಲ್ ಹಸನ್ ತಲಾ ಎರಡು ವಿಕೆಟ್ ಪಡೆದರೆ, ಮುಸ್ತಫಿಜುರ್ ರೆಹಮಾನ್ ಹಾಗೂ ಮೆಹಮೂದ್ ಉಲ್ಲಾಹ ತಲಾ ಒಂದೊಂದು ವಿಕೆಟ್ ಕಬಳಿಸಿದರು.
ಇದರೊಂದಿಗೆ ಮೂರು ಪಂದ್ಯಗಳ ಏಕದಿನ ಸರಣಿಯನ್ನು 2–0ರಲ್ಲಿ ಬಾಂಗ್ಲಾದೇಶ ಕೈವಶ ಮಾಡಿಕೊಂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.