ADVERTISEMENT

ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್‌ ಟೂರ್ನಿ: ಗೆಲುವಿನ ಹೊಸ್ತಿಲಲ್ಲಿ ಬರೋಡಾ

ಕ್ಯಾಪ್ಟನ್‌ ಕೆ. ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್‌ ಟೂರ್ನಿ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2024, 14:44 IST
Last Updated 25 ಸೆಪ್ಟೆಂಬರ್ 2024, 14:44 IST
ಕೃಣಾಲ್‌ ಪಾಂಡ್ಯ –ಎಕ್ಸ್‌ ಚಿತ್ರ
ಕೃಣಾಲ್‌ ಪಾಂಡ್ಯ –ಎಕ್ಸ್‌ ಚಿತ್ರ   

ಬೆಂಗಳೂರು:ಕೃಣಾಲ್‌ ಪಾಂಡ್ಯ (114;141ಎ) ಅವರ ಅಮೋಘ ಶತಕದ ಬಲದಿಂದ ಬರೋಡಾ ತಂಡವು ಕ್ಯಾಪ್ಟನ್‌ ಕೆ. ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್‌ ಟೂರ್ನಿಯ ಫೈನಲ್‌ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಮಹಾರಾಷ್ಟ್ರ ವಿರುದ್ಧ ಬೃಹತ್‌ ಮುನ್ನಡೆ ಪಡೆದು, ಗೆಲುವಿನ ಹೊಸ್ತಿಲಲ್ಲಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಎರಡನೇ ದಿನವಾದ ಬುಧವಾರ ಬ್ಯಾಟಿಂಗ್‌ ಮುಂದುವರಿಸಿದ ಬರೋಡಾ 74.2 ಓವರ್‌ಗಳಲ್ಲಿ 398 ರನ್‌ ಕಲೆ ಹಾಕಿ ಮೊದಲ ಇನಿಂಗ್ಸ್‌ನಲ್ಲಿ 271 ರನ್‌ಗಳ ಮುನ್ನಡೆ ಪಡೆದಿದೆ.

ಮಂಗಳವಾರ ಔಟಾಗದೇ 24 ರನ್‌ ಗಳಿಸಿದ್ದ ಕೃನಾಲ್ ಶತಕ ಪೂರೈಸಿದರು. ಅದರಲ್ಲಿ 14 ಬೌಂಡರಿ ಮತ್ತು ಮೂರು ಸಿಕ್ಸರ್‌ಗಳು ಸೇರಿದ್ದವು. ರಾಜ್ ಲಿಂಬಾನಿ 49, ಭಾರ್ಗವ್ ಭಟ್ 37 ಉಪಯುಕ್ತ ಕಾಣಿಕೆ ನೀಡಿದರು. ರಾಮಕೃಷ್ಣ ಘೋಷ್ ಮತ್ತು ರಾಜವರ್ಧನ್ ಹಂಗರಗೆಕರ್‌ ತಲಾ ನಾಲ್ಕು ವಿಕೆಟ್‌ ಪಡೆದರು.

ADVERTISEMENT

ಮೊದಲ ಇನಿಂಗ್ಸ್‌ನಲ್ಲಿ 33.5 ಓವರ್‌ಗಳಲ್ಲಿ 127 ರನ್‌ಗೆ ಕುಸಿದಿದ್ದ ಮಹಾರಾಷ್ಟ್ರ ತಂಡವು ಎರಡನೇ ಇನಿಂಗ್ಸ್‌ನಲ್ಲೂ ಸಂಕಷ್ಟಕ್ಕೆ ಸಿಲುಕಿದ್ದು, ಇನಿಂಗ್ಸ್ ಸೋಲಿನ ಆತಂಕದಲ್ಲಿದೆ. ದಿನದಾಟದ ಅಂತ್ಯಕ್ಕೆ 34 ಓವರ್‌ಗಳಲ್ಲಿ 5 ವಿಕೆಟ್‌ಗೆ 121 ರನ್‌ ಗಳಿಸಿದ್ದು, ಇನಿಂಗ್ಸ್‌ ಸೋಲು ತಪ್ಪಿಸಲು ಇನ್ನೂ 150 ರನ್‌ ಸೇರಿಸಬೇಕಿದೆ.

ಮಹಾರಾಷ್ಟ್ರ ಪರ ಅಂಕೀತ್ ಬವಾನೆ (ಔಟಾಗದೇ 31) ಮತ್ತು ಅಜೀಂ ಕಾಜಿ (33) ಕೊಂಚ ಹೋರಾಟ ತೋರಿದರು. ಮೊದಲ ಇನಿಂಗ್ಸ್‌ನಲ್ಲಿ ತಲಾ ನಾಲ್ಕು ವಿಕೆಟ್‌ ಪಡೆದಿದ್ದ ಬರೋಡಾದ ಬಾಬಾಸಫಿ ಪಠಾಣ್ (51ಕ್ಕೆ 2) ಮತ್ತು ಲುಕ್ಮಾನ್ ಮೇರಿವಾಲಾ (33ಕ್ಕೆ 3) ಎರಡನೇ ಇನಿಂಗ್ಸ್‌ನಲ್ಲೂ ಎದುರಾಳಿ ತಂಡಕ್ಕೆ ಆಘಾತ ನೀಡಿದರು.

ಸಂಕ್ಷಿಪ್ತ ಸ್ಕೋರ್‌: ಮೊದಲ ಇನಿಂಗ್ಸ್‌: ಮಹಾರಾಷ್ಟ್ರ: 33.5 ಓವರ್‌ಗಳಲ್ಲಿ 127. ಬರೋಡಾ: 74.2 ಓವರ್‌ಗಳಲ್ಲಿ 398 (ಮಿತೇಶ್‌ ಪಟೇಲ್‌ 77, ಕೃಣಾಲ್‌ ಪಾಂಡ್ಯ 114, ರಾಜ್ ಲಿಂಬಾನಿ 49, ಭಾರ್ಗವ್ ಭಟ್; ರಾಮಕೃಷ್ಣ ಘೋಷ್ 86ಕ್ಕೆ 4 ಮತ್ತು ರಾಜವರ್ಧನ್ ಹಂಗರಗೆಕರ್‌ 91ಕ್ಕೆ 4). ಎರಡನೇ ಇನಿಂಗ್ಸ್‌: ಮಹಾರಾಷ್ಟ್ರ: 34 ಓವರ್‌ಗಳಲ್ಲಿ 5 ವಿಕೆಟ್‌ಗೆ 121 (ಅಕೀತ್‌ ಬವಾನೆ ಔಟಾಗದೇ 31, ಅಜೀಂ ಕಾಜಿ 33; ಲುಕ್ಮಾನ್ ಮೇರಿವಾಲಾ 33ಕ್ಕೆ 3, ಬಾಬಾಸಫಿ ಪಠಾಣ್ 51ಕ್ಕೆ 2).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.