ವಿಶಾಖಪಟ್ಟಣ: ಟೂರ್ನಿಯಲ್ಲಿ ಆಡಿದ ಎರಡೂ ಪಂದ್ಯಗಳನ್ನು ಗೆದ್ದಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಇನ್ನೂ ಜಯದ ಖಾತೆ ತೆರೆಯದ ಡೆಲ್ಲಿ ಕ್ಯಾಪಿಟಲ್ಸ್ ಭಾನುವಾರ ಎದುರಿಸಲಿದೆ.
‘ಕೂಲ್ ಕ್ಯಾಪ್ಟನ್’ ಮಹೇಂದ್ರಸಿಂಗ್ ಧೋನಿ ಮಾರ್ಗದರ್ಶನದಲ್ಲಿ ಯುವನಾಯಕ ಋತುರಾಜ್ ಸಿಂಗ್ ಅವರು ಚೆನ್ನೈ ತಂಡವನ್ನು ತಮ್ಮ ತವರಿನಂಗಳದಲ್ಲಿ ನಡೆದ ಪಂದ್ಯಗಳಲ್ಲಿ ಗೆಲುವಿನತ್ತ ಮುನ್ನಡೆಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಆವೃತ್ತಿಯಲ್ಲಿ ಇದೇ ಮೊದಲ ಬಾರಿಗೆ ತವರಿನಿಂದ ಹೊರಗಿನ ತಾಣದಲ್ಲಿ ಚೆನ್ನೈ ಪಂದ್ಯವಾಡಲಿದೆ.
ವಿಶಾಖಪಟ್ಟಣದ ವಿಸಿಎ ಕ್ರೀಡಾಂಗಣವು ಡೆಲ್ಲಿ ಕ್ಯಾಪಿಟಲ್ಸ್‌ಗೆ ‘ತವರು‘ ತಾಣವಾಗಿದೆ. ಕಾರು ಅಪಘಾತದಲ್ಲಿ ಗಾಯಗೊಂಡಿದ್ದ ರಿಷಭ್ ಪಂತ್ 15 ತಿಂಗಳುಗಳ ನಂತರ ಕ್ರಿಕೆಟ್‌ಗೆ ಮರಳಿರುವ ಟೂರ್ನಿ ಇದಾಗಿದೆ. ಮುಖ್ಯ ಕೋಚ್ ರಿಕಿ ಪಾಂಟಿಂಗ್ ಹಾಗೂ ನಿರ್ದೇಶಕ ಸೌರವ್ ಗಂಗೂಲಿ ಅವರ ಮಾರ್ಗದರ್ಶನದಲ್ಲಿ ಪಂತ್ ನಾಯಕತ್ವವನ್ನು ನಿಭಾಯಿಸುತ್ತಿದ್ದಾರೆ. ವಿಕೆಟ್‌ಕೀಪಿಂಗ್‌ನಲ್ಲಿಯೂ ತಕ್ಕಮಟ್ಟಿಗೆ ಉತ್ತಮವಾಗಿಯೇ ಇದ್ದಾರೆ. ಆದರೆ ಬ್ಯಾಟಿಂಗ್‌ನಲ್ಲಿ ತಮ್ಮ ಹಿಂದಿನ ಲಯಕ್ಕೆ ಮರಳಬೇಕಿದೆ.
ಕಳೆದ ಪಂದ್ಯದಲ್ಲಿ ಡೆಲ್ಲಿ ತಂಡವು ರಾಜಸ್ಥಾನ ರಾಯಲ್ಸ್ ಎದುರು ಸೋತಿತ್ತು. ಅದರಲ್ಲಿ ಡೇವಿಡ್ ವಾರ್ನರ್ ಮತ್ತು ಮಿಚೆಲ್ ಮಾರ್ಷ್ ಉತ್ತಮ ಆರಂಭ ನೀಡಿದ್ದರು. ಕೊನೆಯ ಹಂತದಲ್ಲಿ ಟ್ರಿಸ್ಟನ್ ಸ್ಟಬ್ಸ್ ಕೂಡ ಮಿಂಚಿದ್ದರು. ಆದರೂ ಡೆಲ್ಲಿ ತಂಡಕ್ಕೆ ಗೆಲುವಿನ ಗುರಿ ಮುಟ್ಟಲು ಸಾಧ್ಯವಾಗಿರಲಿಲ್ಲ. ಸ್ಪಿನ್ ಬೌಲಿಂಗ್ ಎದುರು ಬ್ಯಾಟರ್‌ಗಳು ಸ್ವಲ್ಪ ದುರ್ಬಲವಾಗಿದ್ದರು.
ಚೆನ್ನೈ ತಂಡದ ಎದುರು ಈ ಡೆಲ್ಲಿ ತಂಡವು ಈ ಹಿಂದೆ ಮುಖಾಮುಖಿಯಾದ ಮೂರು ಪಂದ್ಯಗಳಲ್ಲಿ ಕ್ರಮವಾಗಿ 91, 27 ಹಾಗೂ 77 ರನ್‌ಗಳ ಅಂತರದಿಂದ ಪರಾಭವಗೊಂಡಿತ್ತು. ಈ ಬಾರಿಯೂ ಸಮತೋಲನದಿಂದ ಕೂಡಿರುವ ಚೆನ್ನೈ ತಂಡವನ್ನು ಸೋಲಿಸಲು ವಿಭಿನ್ನ ತಂತ್ರಗಾರಿಕೆಯೊಂದಿಗೆ ಕಣಕ್ಕಿಳಿಯುವ ಸವಾಲು ಡೆಲ್ಲಿ ಮುಂದಿದೆ.
ತನ್ನ ಅನುಭವಿ ಆಟಗಾರರ ಜೊತೆಗೆ, ಯುವಪ್ರತಿಭೆಗಳನ್ನು ಕಣಕ್ಕಿಳಿಸುವ ಪ್ರಯೋಗದಲ್ಲಿಯೂ ಚೆನ್ನೈ ಯಶಸ್ವಿಯಾಗಿದೆ. ತಂಡದ ಆಲ್‌ರೌಂಡರ್‌ಗಳಾದ ರಚಿನ್ ರವೀಂದ್ರ, ಶಿವಂ ದುಬೆ ಹಾಗೂ ಹೊಸಪ್ರತಿಭೆ ಸಮೀರ್ ರಿಜ್ವಿ ಅಮೋಘ ಲಯದಲ್ಲಿದ್ದಾರೆ.
ಡೆರಿಲ್ ಮಿಚೆಲ್, ರವೀಂದ್ರ ಜಡೇಜ ಮತ್ತು ಅಜಿಂಕ್ಯ ರಹಾನೆ ತಮ್ಮ ಹೊಣೆಯನ್ನು ಸಮರ್ಥವಾಗಿ ನಿಭಾಯಿಸಬಲ್ಲ ಆಟಗಾರರು. ಬೌಲಿಂಗ್‌ನಲ್ಲಿಯೂ ದೀಪಕ್ ಚಾಹರ್, ಮುಸ್ತಫಿಜುರ್ ರೆಹಮಾನ್, ಮತೀಶ ಪಥಿರಾಣ ಅವರು ವಿಕೆಟ್ ಬೇಟೆಯಾಡುತ್ತಿದ್ದಾರೆ. ಈ ಬೌಲರ್‌ಗಳ ಮುಂದೆ ದಿಟ್ಟವಾಗಿ ಆಡುವ ಸವಾಲು ಡೆಲ್ಲಿ ಬ್ಯಾಟರ್‌ಗಳ ಮುಂದಿದೆ.
ಪಂದ್ಯ ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೊ ಸಿನಿಮಾ ಆ್ಯಪ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.