ಢಾಕಾ: ಷೇರ್ ಎ ಬಾಂಗ್ಲಾ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸಲು ಅನುಮತಿ ನೀಡುವಂತೆ ಹಿರಿಯ ಆಟಗಾರ ಮುಷ್ಫಿಕುರ್ ರಹೀಮ್ ಮಾಡಿದ್ದ ಮನವಿಯನ್ನು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ತಿರಸ್ಕರಿಸಿದೆ.
‘ಮೀರ್‌ಪುರದಷೇರ್ ಎ ಬಾಂಗ್ಲಾ ಮೈದಾನದಲ್ಲಿ ತಾಲೀಮು ನಡೆಸಲು ಅವಕಾಶ ಮಾಡಿಕೊಡುವಂತೆ ಮುಷ್ಫಿಕುರ್ ಕೇಳಿಕೊಂಡಿದ್ದರು. ಹೊರಾಂಗಣ ಅಭ್ಯಾಸ ನಡೆಸಲು ಇದು ಸೂಕ್ತ ಸಮಯವಲ್ಲ ಎಂಬುದನ್ನು ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಅಭ್ಯಾಸಕ್ಕಿಂತಲೂಆಟಗಾರರ ಸುರಕ್ಷತೆಯೇ ನಮ್ಮ ಆದ್ಯತೆಯಾಗಿದೆ. ಹೀಗಾಗಿ ಸದ್ಯದ ಮಟ್ಟಿಗೆ ಮನೆಯಲ್ಲೇ ಅಭ್ಯಾಸ ಮಾಡುವಂತೆ ಸಲಹೆ ನೀಡಿದ್ದೇವೆ’ ಎಂದು ಬಿಸಿಬಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ನಿಜಾಮುದ್ದೀನ್ ಚೌಧರಿ ತಿಳಿಸಿದ್ದಾರೆ.
‘ಇನ್ನೂ ಕೆಲ ಹಿರಿಯ ಆಟಗಾರರೂ ವೈಯಕ್ತಿಕ ತಾಲೀಮಿಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದರು. ಅವರಿಗೂ ಮನೆಯಲ್ಲೇ ಇರುವಂತೆ ತಿಳಿಸಿದ್ದೇವೆ. ಷೇರ್ ಎ ಬಾಂಗ್ಲಾ ಮೈದಾನದ ಒಳ ಹಾಗೂ ಹೊರ ಭಾಗಗಳಲ್ಲಿ ಸೋಂಕು ನಿವಾರಕಗಳನ್ನು ಸಿಂಪಡಿಸುವ ಕಾರ್ಯ ನಡೆಯುತ್ತಿದೆ. ಹೀಗಾಗಿ ಅವಸರವಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಹೋಗುವುದಿಲ್ಲ’ ಎಂದಿದ್ದಾರೆ.
‘ಬೇರೆ ರಾಷ್ಟ್ರಗಳಲ್ಲಿ ಈಗಾಗಲೇ ಕ್ರಿಕೆಟ್ ಚಟುವಟಿಕೆಗಳು ಗರಿಗೆದರಿವೆ. ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್‌ನ (ಐಸಿಸಿ) ಮಾರ್ಗಸೂಚಿಗಳನ್ನು ಗಮನದಲ್ಲಿಟ್ಟುಕೊಂಡು ನಾವು ಕೂಡ ಹಂತ ಹಂತವಾಗಿ ತರಬೇತಿ ಶಿಬಿರ ಪುನರಾರಂಭಿಸಲಿದ್ದೇವೆ. ಈ ಕುರಿತು ಎಲ್ಲರೊಂದಿಗೂ ಚರ್ಚಿಸುತ್ತೇವೆ. ಒಟ್ಟಾರೆ ಪರಿಸ್ಥಿತಿಯನ್ನು ಅವಲೋಕಿಸಿ ಮುಂದಿನ ಹೆಜ್ಜೆ ಇಡುತ್ತೇವೆ’ ಎಂದೂ ನುಡಿದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.