ನವದೆಹಲಿ: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಮತ್ತು ಕ್ರಿಕೆಟ್ ಆಡಳಿತ ಸಮಿತಿ (ಸಿಒಎ) ಸದಸ್ಯರ ನಡುವಣ ಭಿನ್ನಾಭಿಪ್ರಾಯವು ಬಹಿರಂಗವಾಗಿರುವುದರ ಬಗ್ಗೆ ಸುಪ್ರೀಂ ಕೋರ್ಟ್ ನ ನ್ಯಾಯಪೀಠವು ಅಸಮಾಧಾನ ವ್ಯಕ್ತಪಡಿಸಿದೆ.
ಸಿಒಎ ಮುಖ್ಯಸ್ಥ ವಿನೋದ್ ರಾಯ್ ಮತ್ತು ಸದಸ್ಯೆ ಡಯಾನಾ ಎಡುಲ್ಜಿ ಅವರಲ್ಲಿ ಈಚೆಗೆ ಕೆಲವು ವಿಷಯಗಳಲ್ಲಿ ಭಿನ್ನಾಭಿಪ್ರಾಯ ತಲೆದೋರಿದ್ದು ದೊಡ್ಡ ಸುದ್ದಿಯಾಗಿದ್ದವು.
‘ಸುದ್ದಿಪತ್ರಿಕೆಗಳ ವರದಿಗಳ ಮೂಲಕ ಸಿಒಎ ಸದಸ್ಯರ ಒಳಜಗಳಗಳ ಬಗ್ಗೆ ನಮಗೆ ತಿಳಿದಿದೆ. ಇದು ಸರಿಯೇ ಎಂದು ನಾವು ತಿಳಿಯಲು ಬಯಸುತ್ತೇವೆ’ ಎಂದು ನ್ಯಾಯಮೂರ್ತಿ ಎಸ್.ಎ. ಬೊಬ್ಡೆ ಮತ್ತು ಎ.ಎಂ. ಸಪ್ರೆ ಅವರ ನ್ಯಾಯಪೀಠವು ವಿವರಣೆ ಕೇಳಿತು. ಈ ಸಂದರ್ಭದಲ್ಲಿ ಹಾಜರಿದ್ದ ಸಿಒಎ ಪರ ವಕೀಲ ಪರಾಗ್ ತ್ರಿಪಾಠಿ, ‘ಯಾವುದೇ ಮಹತ್ವದ ವಿಷಯಗಳ ಕುರಿತು ಭಿನ್ನಾಭಿಪ್ರಾಯವಿಲ್ಲ’ ಎಂದು ಸ್ಪಷ್ಟಪಡಿಸಿದರು.
‘ಯಾವುದೇ ರೀತಿಯ ಭಿನ್ನಾಭಿಪ್ರಾಯವಿದ್ದರೂ ಅದನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬಾರದು ಎಂದು ಸಮಿತಿಯ ಸದಸ್ಯರಿಗೆ ಅಮಿಕಸ್ ಕ್ಯೂರಿ ತಿಳಿಸಬೇಕು’ ಎಂದು ನ್ಯಾಯಪೀಠ ಹೇಳಿತು.
ಬಿಸಿಸಿಐ ಆಡಳಿತದಲ್ಲಿ ಸುಧಾರಣೆಗಳನ್ನು ತರಲು 2017ರಲ್ಲಿ ಸುಪ್ರೀ ಕೋರ್ಟ್ ನಾಲ್ವರು ಸದಸ್ಯರ ಸಿಒಎ ಸಮಿತಿಯನ್ನು ನೇಮಕ ಮಾಡಿತ್ತು. ವಿನೋದ್ ರಾಯ್ ಮುಖ್ಯಸ್ಥರಾಗಿದ್ದರು.
ವಿಕ್ರಂ, ಮಹಿಳಾ ಕ್ರಿಕೆಟ್ ಆಟಗಾರ್ತಿ ಡಯಾನಾ ಎಡುಲ್ಜಿ, ಇತಿಹಾಸಕಾರ ರಾಮಚಂದ್ರ ಗುಹಾ ಮತ್ತು ಆರ್ಥಿಕ ತಜ್ಞ ವಿಕ್ರಂ ಲಿಮಯೆ ಅವರು ಸಮಿತಿಯಲ್ಲಿದ್ದರು. ರಾಮಚಂದ್ರ ಗುಹಾ ಮತ್ತು ವಿಕ್ರಂ ಲಿಮಯೆ ನಂತರದಲ್ಲಿ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದರು. ಅದರ ನಂತರ ರಾಯ್ ಮತ್ತು ಎಡುಲ್ಜಿ ಮಾತ್ರ ಸಮಿತಿಯನ್ನು ನಿರ್ವಹಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.