ನವದೆಹಲಿ: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಕೇಂದ್ರ ಗುತ್ತಿಗೆಯಿಂದ ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ ಅವರನ್ನು ಕೈಬಿಡಲಾಗಿದೆ.
ರಾಷ್ಟ್ರೀಯ ತಂಡದಲ್ಲಿ ಇಲ್ಲದಿರುವಾಗ ರಣಜಿ ಟೂರ್ನಿಯಲ್ಲಿ ತಮ್ಮ ತವರು ರಾಜ್ಯದ ತಂಡದಲ್ಲಿ ಆಡಲು ಇಶಾನ್ ಮತ್ತು ಶ್ರೇಯಸ್ ಅವರಿಗೆ ಸೂಚಿಸಲಾಗಿತ್ತು. ಅದರೆ ಅವರಿಬ್ಬರೂ ಅದನ್ನು ಪಾಲಿಸದ ಕಾರಣ ಬಿಸಿಸಿಐ ಈ ಕ್ರಮ ಕೈಗೊಂಡಿದೆ.
ಭಾರತ ತಂಡದ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ವೇಗಿ ಜಸ್‌ಪ್ರೀತ್ ಬೂಮ್ರಾ ಮತ್ತು ಆಲ್‌ರೌಂಡರ್ ರವೀಂದ್ರ ಜಡೇಜ ಅವರನ್ನು ಎ ಪ್ಲಸ್ ವಿಭಾಗಕ್ಕೆ ಸೇರ್ಪಡೆ ಮಾಡಲಾಗಿದೆ.
ಆರ್. ಅಶ್ವಿನ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಕೆ.ಎಲ್. ರಾಹುಲ್, ಶುಭಮನ್ ಗಿಲ್ ಮತ್ತು ಹಾರ್ದಿಕ್ ಪಾಂಡ್ಯ ಅವರು ಎ ಕೆಟಗರಿಯಲ್ಲಿದ್ದಾರೆ.
ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಕುಲದೀಪ್ ಯಾದವ್, ಅಕ್ಷರ್ ಪಟೇಲ್ ಮತ್ತು ಯಶಸ್ವಿ ಜೈಸ್ವಾಲ್ ಬಿ ಕೆಟಗರಿಯಲ್ಲಿ ಸ್ಥಾನ ಗಳಿಸಿದ್ದಾರೆ.
15 ಆಟಗಾರರು ಸಿ ಗುಂಪಿನಲ್ಲಿ ಸ್ಥಾನ ಗಳಿಸಿದ್ದಾರೆ. ರಿಂಕು ಸಿಂಗ್, ತಿಲಕ್ ವರ್ಮಾ, ಋತುರಾಜ್ ಗಾಯಕವಾಡ್, ಶಾರ್ದೂಲ್ ಠಾಕೂರ್, ಶಿವಂ ದುಬೆ, ರವಿ ಬಿಷ್ಣೋಯಿ, ಜಿತೇಶ್ ಶರ್ಮಾ, ವಾಷಿಂಗ್ಟನ್ ಸುಂದರ್, ಮುಕೇಶ್ ಕುಮಾರ್, ಸಂಜು ಸ್ಯಾಮ್ಸನ್, ಆರ್ಷದೀಪ್ ಸಿಂಗ್, ಕೆ.ಎಸ್. ಭರತ್, ಪ್ರಸಿದ್ಧ ಕೃಷ್ಣ, ಆವೇಶ್ ಖಾನ್ ಮತ್ತು ರಜತ್ ಪಾಟೀದಾರ್ ಅದರಲ್ಲಿದ್ದಾರೆ.
‘ವಾರ್ಷಿಕ ಗುತ್ತಿಗೆಗೆ ಶ್ರೇಯಸ್ ಅಯ್ಯರ್ ಮತ್ತು ಇಶಾನ್ ಕಿಶನ್ ಅವರನ್ನು ಪರಿಗಣಿಸಲಾಗಿಲ್ಲ. ಬಂದಿರುವ ಶಿಫಾರಸುಗಳಲ್ಲಿ ಅವರನ್ನು ತೆಗೆದುಕೊಂಡಿಲ್ಲ’ ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿದೆ.
ರಾಷ್ಟ್ರೀಯ ಆಯ್ಕೆ ಸಮಿತಿಯು ವೇಗದ ಬೌಲಿಂಗ್ ಗುತ್ತಿಗೆ ನೀಡುವಂತೆ ಆಕಾಶ್ ದೀಪ್, ವೈಶಾಖ ವಿಜಯಕುಮಾರ್, ಉಮ್ರಾನ್ ಮಲಿಕ್, ಯಶ್ ದಯಾಳ್ ಮತ್ತು ವಿದ್ವತ್ ಕಾವೇರಪ್ಪ ಅವರ ಹೆಸರುಗಳನ್ನೂ ಶಿಫಾರಸು ಮಾಡಿತ್ತು.
‘ಎಲ್ಲ ಆಟಗಾರರೂ ದೇಶಿ ಕ್ರಿಕೆಟ್ ಟೂರ್ನಿಗಳಲ್ಲಿ ಆಡುವುದಕ್ಕೆ ಆದ್ಯತೆ ಕೊಡಬೇಕು. ಅವರು ರಾಷ್ಟ್ರೀಯ ತಂಡದಲ್ಲಿ ಇರದ ಸಮಯದಲ್ಲಿ ಇದು ಕಡ್ಡಾಯ’ ಎಂದು ಬಿಸಿಸಿಐ ಹೇಳಿದೆ.
ಈ ಬಾರಿಯ ಪಟ್ಟಿಯಲ್ಲಿ ಸ್ಥಾನ ಪಡೆದವರಿಗೆ ನೀಡಲಾಗುವ ವೇತನದ ಕುರಿತು ಉಲ್ಲೇಖ ಮಾಡಲಾಗಿಲ್ಲ.
ಈ ಮೊದಲು ವಾರ್ಷಿಕವಾಗಿ ಎ ಪ್ಲಸ್‌ಗೆ ₹7 ಕೋಟಿ, ಎ ವಿಭಾಗಕ್ಕೆ ₹5 ಕೋಟಿ, ಬಿ ವಿಭಾಗಕ್ಕೆ ₹3 ಕೋಟಿ, ಸಿ ವಿಭಾಗಕ್ಕೆ ₹1 ಕೋಟಿ ಮತ್ತು ಪಂದ್ಯದ ಸಂಭಾವನೆ ನೀಡಲಾಗುತ್ತಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.