ADVERTISEMENT

ನವೆಂಬರ್‌ನಲ್ಲಿ ದೇಶಿ ಕ್ರಿಕೆಟ್ ಆರಂಭಕ್ಕೆ ಚಿಂತನೆ

ಪಿಟಿಐ
Published 10 ಆಗಸ್ಟ್ 2020, 4:03 IST
Last Updated 10 ಆಗಸ್ಟ್ 2020, 4:03 IST
ಕಳೆದ ಬಾರಿಯ ರಣಜಿ ಪಂದ್ಯವೊಂದರಲ್ಲಿ ಕರ್ನಾಟಕದ ಆಟಗಾರರು ಸಂಭ್ರಮಿಸಿದ ಕ್ಷಣ –ಪ್ರಜಾವಾಣಿ ಚಿತ್ರ
ಕಳೆದ ಬಾರಿಯ ರಣಜಿ ಪಂದ್ಯವೊಂದರಲ್ಲಿ ಕರ್ನಾಟಕದ ಆಟಗಾರರು ಸಂಭ್ರಮಿಸಿದ ಕ್ಷಣ –ಪ್ರಜಾವಾಣಿ ಚಿತ್ರ   

ನವದೆಹಲಿ: ಸೈಯದ್ ಮುಷ್ತಾಕ್ ಅಲಿ ಟ್ರೋಫಿಯೊಂದಿಗೆ ನವೆಂಬರ್ 19ರಂದು ದೇಶಿ ಕ್ರಿಕೆಟ್ ಋತುವನ್ನು ಆರಂಭಿಸಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಯೋಜನೆ ಹಾಕಿಕೊಂಡಿದೆ. ಆದರೆ ಐಪಿಎಲ್‌ನ ವಿವಿಧ ತಂಡಗಳಲ್ಲಿ ಆಡುವ ಭಾರತದ ಆಟಗಾರರಿಗೆ ಟೂರ್ನಿಯ ಆರಂಭದ ಕೆಲವು ಸುತ್ತಿನ ಪಂದ್ಯಗಳಲ್ಲಿ ಆಡಲು ಸಾಧ್ಯವಿಲ್ಲ ಎಂದು ಅಂದಾಜಿಸಲಾಗಿದೆ.

ಕೋವಿಡ್‌–19ರಿಂದಾಗಿ ದೇಶಿ ಋತು ತಡವಾಗಿ ಆರಂಭವಾಗುವ ಕಾರಣ ಮುಷ್ತಾಕ್ ಅಲಿ ಟ್ರೋಫಿ ಮತ್ತು ರಣಜಿ ಟ್ರೋಫಿ ಟೂರ್ನಿ ಮಾತ್ರ ಆಯೋಜಿಸಲು ಸಾಧ್ಯ. ರಣಜಿ ಪಂದ್ಯಗಳು ಡಿಸೆಂಬರ್‌ 13ರಿಂದ ಮಾರ್ಚ್ 10ರ ವರೆಗೆ ನಡೆಯಲಿವೆ. ಎರಡೂ ಟೂರ್ನಿಗಳಲ್ಲಿ ಒಟ್ಟು 245 ಪಂದ್ಯಗಳು ಇರಲಿವೆ. ವಿಜಯ್ ಹಜಾರೆ, ದುಲೀಪ್ ಟ್ರೋಫಿ, ಚಾಲೆಂಜರ್ ಸೀರಿಸ್ ಮತ್ತು ಇರಾನಿ ಕಪ್ ಪಂದ್ಯವನ್ನು ಕೈಬಿಡಲು ನಿರ್ಧರಿಸಲಾಗಿದೆ.

‘ಇದು ತಾತ್ಕಾಲಿಕ ಪಟ್ಟಿ ಮಾತ್ರವಾಗಿದ್ದು ಒಪ್ಪಿಗೆಗಾಗಿ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಕಾರ್ಯದರ್ಶಿ ಜಯ್ ಶಾ ಅವರ ಬಳಿಗೆ ಕಳುಹಿಸಲಾಗಿದೆ’ ಎಂದು ಬಿಸಿಸಿಐ ಪದಾಧಿಕಾರಿಯೊಬ್ಬರು ತಿಳಿಸಿದರು.

ADVERTISEMENT

ಯುಎಇಯಲ್ಲಿ ನಡೆಯಲಿರುವ ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಳ್ಳುವ ಭಾರತದ ಆಟಗಾರರು 14 ದಿನಗಳ ಕ್ವಾರಂಟೈನ್‌ನಲ್ಲಿ ಇರಬೇಕು. ಹೀಗಾಗಿ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯಲ್ಲಿ ಆಡುವುದಾದರೂ ಹೇಗೆ ಎಂಬ ಪ್ರಶ್ನೆಗೆ ಉತ್ತರಿಸಿದ ಬಿಸಿಸಿಐ ಪದಾಧಿಕಾರಿ ಈ ಸಮಸ್ಯೆಗೆ ಸಾಂದರ್ಭಿಕವಾಗಿ ಪರಿಹಾರ ಕಂಡುಕೊಳ್ಳಬೇಕಾಗಿದೆ ಎಂದರು.

ಮುಂದಿನ ಐಪಿಎಲ್ ಟೂರ್ನಿಯನ್ನು ಮಾರ್ಚ್ ಕೊನೆಯ ಅಥವಾ ಏಪ್ರಿಲ್ ಆರಂಭದಲ್ಲಿ ಭಾರತದಲ್ಲೇ ನಡೆಸಲು ಬಿಸಿಸಿಐ ಉದ್ದೇಶಿಸಿದ್ದು ರಣಜಿ ಟೂರ್ನಿಯ ನಂತರ ಆಟಗಾರರಿಗೆ ಸಾಕಷ್ಟು ವಿಶ್ರಾಂತಿ ಸಿಗುವಂತೆ ಇದರ ವೇಳಾಪಟ್ಟಿಯನ್ನು ನಿಗದಿ ಮಾಡುವ ಸಾಧ್ಯತೆ ಇದೆ. ರಣಜಿ ಟ್ರೋಫಿ ಟೂರ್ನಿಯನ್ನು ವಲಯವಾರು ಮಾದರಿಯಲ್ಲಿ ನಡೆಸುವ ಚಿಂತನೆ ಇಲ್ಲ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.