ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ 2023 ರಿಂದ 2027ರ ಆವೃತ್ತಿಗಳ ಪ್ರಸಾರ ಹಕ್ಕುಗಳಿಂದ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ₹ 50 ಸಾವಿರ ಕೋಟಿ ಆದಾಯ ಹರಿದುಬರುವ ನಿರೀಕ್ಷೆ ಇದೆ.
ಪ್ರಸಾರ ಹಕ್ಕುಗಳನ್ನು ನೀಡಲು ಇದೇ ಮೊದಲ ಬಾರಿಗೆ ಬಿಸಿಸಿಐ ಇ ಹರಾಜು ಪ್ರಕ್ರಿಯೆ ನಡೆಸಲಿದೆ. ಜೂನ್ 12ರಿಂದ ಈ ಪ್ರಕ್ರಿಯೆ ಆರಂಭಗೊಳ್ಳಲಿದೆ.
‘ಎರಡು ಹೊಸ ತಂಡಗಳು, ಹೆಚ್ಚು ಪಂದ್ಯಗಳು, ಪ್ರೇಕ್ಷಕರ ಸಂಖ್ಯೆಯಲ್ಲಿ ಹೆಚ್ಚಳ ಮತ್ತು ಪಂದ್ಯ ನಡೆಯುವ ಸ್ಥಳಗಳ ಆಕರ್ಷಣೆ ಹೆಚ್ಚಲಿದೆ. ಟಾಟಾ ಐಪಿಎಲ್ ಟೂರ್ನಿಯನ್ನು ಮತ್ತೊಂದು ಹಂತದ ಎತ್ತರಕ್ಕೇರಿಸುವ ಗುರಿ ನಮ್ಮದು’ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಟ್ವೀಟ್ ಮಾಡಿದ್ದಾರೆ.
‘ಆದಾಯ ಹೆಚ್ಚಳ ಮಾತ್ರ ನಮ್ಮ ಉದ್ದೇಶವಲ್ಲ. ಗುಣಮಟ್ಟ ಮತ್ತು ಮೌಲ್ಯಗಳ ಹೆಚ್ಚಳಕ್ಕೂ ಆದ್ಯತೆ ನೀಡುತ್ತೇವೆ’ ಎಂದು ಶಾ ತಿಳಿಸಿದ್ದಾರೆ
ಈ ಬಾರಿಯ ಬಿಡ್‌ನಲ್ಲಿ ಝೀ–ಸೋನಿ ಮತ್ತು ರಿಲಯನ್ಸ್ ವೈಕಾಮ್ 18 ಸಂಸ್ಥೆಗಳು ಪೈಪೋಟಿಗಿಳಿಯುವ ನಿರೀಕ್ಷೆ ಇದೆ. ಡಿಜಿಟಲ್ ಸ್ಟ್ರೀಮಿಂಗ್‌ಗಾಗಿ ಅಮೆಜಾನ್ ಪ್ರೈಮ್, ಮೆಟಾ ಮತ್ತು ಯೂಟ್ಯೂಬ್‌ಗಳೂ ಬಿಡ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ.
ಟೆಂಡರ್ ಆಹ್ವಾನದಲ್ಲಿ (ಐಟಿಟಿ) ಬಿಡ್‌ಗೆ ಸಂಬಂಧಿಸಿದ ಎಲ್ಲ ಮಾಹಿತಿಗಳನ್ನೂ ಉಲ್ಲೇಖಿಸಲಾಗಿದೆ. ಬಿಡ್ ಸಲ್ಲಿಸಬಯಸುವ ಆಸಕ್ತರು ₹ 25 ಲಕ್ಷ ಶುಲ್ಕವನ್ನು ಪಾವತಿಸಿ ಐಟಿಟಿ ಪಡೆಯಬಹುದಾಗಿದೆ. ಈ ಶುಲ್ಕವನ್ನು ಮರಳಿಸಲಾಗುವುದಿಲ್ಲ. ಮೇ 10ರವರೆಗೆ ಐಟಿಟಿ ಲಭ್ಯವಾಗಲಿವೆ. ಇಮೇಲ್ (iplmediarights2022@bcci.tv) ಮಾಡಿ ಮಾಹಿತಿ ಪಡೆಯಬಹುದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.