ADVERTISEMENT

ಐಪಿಎಲ್‌ ಟೂರ್ನಿ ಪ್ರಸಾರ ಹಕ್ಕು ಮಾರಾಟ: ಬಿಸಿಸಿಐಗೆ ₹ 45 ಸಾವಿರ ಕೋಟಿ ನಿರೀಕ್ಷೆ

ಹರಾಜು ಪ್ರಕ್ರಿಯೆ ನಾಳೆಯಿಂದ

ಪಿಟಿಐ
Published 10 ಜೂನ್ 2022, 19:32 IST
Last Updated 10 ಜೂನ್ 2022, 19:32 IST
ಐಪಿಎಲ್‌ ಪಂದ್ಯವೊಂದರಲ್ಲಿ ಅಭಿಮಾನಿಗಳ ಉತ್ಸಾಹ
ಐಪಿಎಲ್‌ ಪಂದ್ಯವೊಂದರಲ್ಲಿ ಅಭಿಮಾನಿಗಳ ಉತ್ಸಾಹ   

ನವದೆಹಲಿ: ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್‌ ಲೀಗ್ ಎನಿಸಿಕೊಂಡಿರುವ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐ‍ಪಿಎಲ್‌) ಟ್ವೆಂಟಿ–20 ಟೂರ್ನಿಯ ಮುಂದಿನ ಐದು ವರ್ಷಗಳ ಪ್ರಸಾರ ಹಕ್ಕು ಮಾರಾಟದ ಹರಾಜು ಪ್ರಕ್ರಿಯೆ ಜೂನ್‌ 12 ಮತ್ತು 13ರಂದು ನಡೆಯಲಿದೆ.

ಇ–ಹರಾಜು ಮೂಲಕ ಪ್ರಸಾರ ಹಕ್ಕುಗಳ ಮಾರಾಟಕ್ಕೆ ಸಿದ್ಧತೆ ನಡೆದಿದ್ದು, ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಸುಮಾರು ₹ 45 ಸಾವಿರ ಕೋಟಿ ಗಳಿಸುವ ನಿರೀಕ್ಷೆಯಿದೆ.

ಇ–ಕಾಮರ್ಸ್‌ ದೈತ್ಯ ಅಮೆಜಾನ್‌ ಕಂಪನಿ ಹರಾಜು ಪ್ರಕ್ರಿಯೆಯಿಂದ ಹಿಂದೆ ಸರಿದಿದೆ. ರಿಲಯನ್ಸ್‌ ಇಂಡಸ್ಟ್ರೀಸ್‌ ಒಡೆತನದ ‘ವಯಾಕಾಮ್‌ 18’ ಟಿ.ವಿ ಪ್ರಸಾರ ಮತ್ತು ಡಿಜಿಟಲ್ ಸೇರಿದಂತೆ ಎರಡೂ ಹಕ್ಕುಗಳನ್ನು ತನ್ನದಾಗಿಸಿಕೊಳ್ಳುವ ಮುಂಚೂಣಿಯಲ್ಲಿರುವ ಕಂಪನಿ ಎನಿಸಿಕೊಂಡಿದೆ.

ADVERTISEMENT

ನಾಲ್ಕು ಪ್ಯಾಕೇಜ್‌: ಈ ಬಾರಿ ಪ್ರಸಾರ ಹಕ್ಕುಗಳ ಮಾರಾಟ ನಾಲ್ಕು ಪ್ಯಾಕೇಜ್‌ಗಳಲ್ಲಿ ನಡೆಯಲಿದೆ. ಭಾರತ ಉಪಭೂಖಂಡದಲ್ಲಿ ಟಿ.ವಿ ಪ್ರಸಾರ ಹಕ್ಕು, ಭಾರತ ಉಪಭೂಖಂಡದಲ್ಲಿ ಡಿಜಿಟಲ್‌ ಪ್ರಸಾರ ಹಕ್ಕು, ಪ್ರತಿ ಋತುವಿನಲ್ಲಿ ಪ್ಲೇಆಫ್‌ ಒಳಗೊಂಡಂತೆ ಆಯ್ದ 18 ಪಂದ್ಯಗಳ ಪ್ರಸಾರ ಹಕ್ಕು ಹಾಗೂ ವಿದೇಶಗಳಲ್ಲಿ ನೇರ ಪ್ರಸಾರ ಹಕ್ಕು– ಈ ರೀತಿ ನಾಲ್ಕು ವಿಭಾಗಗಳಲ್ಲಿ ಹರಾಜು ಆಯೋಜಿಸಲಾಗಿದೆ.

‘ಅಮೆಜಾನ್‌ ಸ್ಪರ್ಧೆಯಿಂದ ಹಿಂದೆ ಸರಿದಿರುವುದು ನಿಜ. ಶುಕ್ರವಾರ ನಡೆದ ತಾಂತ್ರಿಕ ಬಿಡ್‌ ಪ್ರಕ್ರಿಯೆಯಲ್ಲಿ ಅವರು ಪಾಲ್ಗೊಳ್ಳಲಿಲ್ಲ. ಗೂಗಲ್‌ (ಯೂಟ್ಯೂಬ್) ಕಂಪನಿ ಹರಾಜು ಪ್ರಕ್ರಿಯೆಯ ಅರ್ಜಿ ಪಡೆದುಕೊಂಡಿದ್ದರೂ, ಸಲ್ಲಿಸಿಲ್ಲ. ಟಿ.ವಿ ಪ್ರಸಾರ ಮತ್ತು ಡಿಜಿಟಲ್‌ ಹಕ್ಕುಗಳನ್ನು ಪಡೆದುಕೊಳ್ಳಲು 10 ಕಂಪನಿಗಳು ಸ್ಪರ್ಧೆಯಲ್ಲಿವೆ’ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

‘ರಿಲಯನ್ಸ್‌ ಮಾಲೀಕತ್ವದ ವಯಾಕಾಂ 18, ಹಾಲಿ ಪ್ರಸಾರದ ಹಕ್ಕು ಹೊಂದಿರುವ ವಾಲ್ಟ್‌ ಡಿಸ್ನಿ (ಸ್ಟಾರ್‌), ಝೀ ಹಾಗೂ ಸೋನಿ ಕಂಪನಿಗಳು ಕಣದಲ್ಲಿರುವ ಪ್ರಮುಖ ಕಂಪನಿಗಳಾಗಿವೆ’ ಎಂದು ಅವರು ಮಾಹಿತಿ ನೀಡಿದರು.

‘ಈ ಕಂಪನಿಗಳು ಮಾತ್ರವಲ್ಲದೆ, ಡಿಜಿಟಲ್‌ ಪ್ರಸಾರ ಹಕ್ಕುಗಳಿಗಾಗಿ ಟೈಮ್ಸ್‌ ಇಂಟರ್‌ನೆಟ್, ಫ್ಯಾನ್‌ ಕೋಡ್, ಫನ್‌ಏಷ್ಯಾ ಮತ್ತು ಡ್ರೀಮ್ ಇಲೆವೆನ್‌ ಹಾಗೂ ವಿದೇಶಗಳಲ್ಲಿ ಟಿ.ವಿ ಪ್ರಸಾರ, ಡಿಜಿಟಲ್‌ ಪ್ರಸಾರದ ಹಕ್ಕುಗಳನ್ನು ಪಡೆಯಲು ಸೂಪರ್‌ಸ್ಪೋರ್ಟ್ಸ್‌ (ದಕ್ಷಿಣ ಆಫ್ರಿಕಾ) ಮತ್ತು ಸ್ಕೈಸ್ಪೋರ್ಟ್ಸ್‌ (ಯುಕೆ) ಪೈಪೋಟಿಯಲ್ಲಿವೆ’ ಎಂದು
ಹೇಳಿದರು.

₹ 32 ಸಾವಿರ ಕೋಟಿ ಮೂಲಬೆಲೆ
ಐಪಿಎಲ್‌ ಪ್ರಸಾರ ಹಕ್ಕು ಹರಾಜಿನ ಮೂಲಬೆಲೆ ₹ 32 ಸಾವಿರ ಕೋಟಿ ನಿಗದಿಪಡಿಸಲಾಗಿದೆ. ಹರಾಜಿನಲ್ಲಿ ಪಾಲ್ಗೊಳ್ಳುವವರು ನಾಲ್ಕು ಪ್ಯಾಕೇ‌ಜ್‌ಗಳಿಗೆ ಪ್ರತ್ಯೇಕವಾಗಿ ಬಿಡ್‌ ಸಲ್ಲಿಸಬೇಕಾಗುತ್ತದೆ. 2018 ರಿಂದ 2022ರ ವರೆಗಿನ ಐದು ವರ್ಷಗಳ ಪ್ರಸಾರದ ಹಕ್ಕನ್ನು ಸ್ಟಾರ್‌ ಇಂಡಿಯಾ ₹ 16,347 ಕೋಟಿಗೆ ತನ್ನದಾಗಿಸಿಕೊಂಡಿತ್ತು.

‘ಐಪಿಎಲ್‌ ತಂಡಗಳ ಸಂಖ್ಯೆ ಹೆಚ್ಚಾಗಿರುವುರಿಂದ ಪಂದ್ಯಗಳ ಸಂಖ್ಯೆ ಹೆಚ್ಚಿದೆ. ಆದ್ದರಿಂದ ಬಿಸಿಸಿಐ, ಪ್ರಸಾರ ಹಕ್ಕು ಮಾರಾಟದಿಂದ ಕಳೆದ ಬಾರಿಗಿಂತ ಮೂರು ಪಟ್ಟು ಅಧಿಕ ಹಣ ಗಳಿಸಬಹುದು. ₹ 45 ಸಾವಿರ ಕೋಟಿಯಷ್ಟು ಹಣ ಗಳಿಸುವ ನಿರೀಕ್ಷೆಯಿದೆ’ ಎಂದು ಮಾರುಕಟ್ಟೆ ತಜ್ಞರೊಬ್ಬರು ಹೇಳಿದ್ದಾರೆ.

ಅಂಬಾನಿ– ಬೆಜೊಸ್‌ ‘ಪೈಪೋಟಿ’ ಇಲ್ಲ
ಐಪಿಎಲ್‌ ಪ್ರಸಾರ ಹಕ್ಕು ಪಡೆಯುವ ಪೈಪೋಟಿಯಿಂದ ಅಮೆಜಾನ್‌ ಹಿಂದೆ ಸರಿದಿರುವುದರಿಂದ ಕಂಪನಿಯ ಸಂಸ್ಥಾಪಕ ಜೆಫ್‌ ಬೆಜೊಸ್‌ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ ಅಧ್ಯಕ್ಷ ಮುಕೇಶ್ ಅಂಬಾನಿ ನಡುವಿನ ‘ಪೈಪೋಟಿ’ ಇಲ್ಲವಾಗಿದೆ. ಐಪಿಎಲ್‌ ಪ್ರಸಾರ ಹಕ್ಕು ಪಡೆಯಲು ರಿಲಯನ್ಸ್‌ ಮತ್ತು ಅಮೆಜಾನ್‌ ನಡುವೆ ಸ್ಪರ್ಧೆ ನಿರೀಕ್ಷಿಸಲಾಗಿತ್ತು.

‘ಐಪಿಎಲ್‌ ಪ್ರಸಾರ ಹಕ್ಕು ಪಡೆಯುವುದು ಭಾರತದಲ್ಲಿ ಕಂಪನಿಯ ಬೆಳವಣಿಗೆಯ ನಿಟ್ಟಿನಲ್ಲಿ ಕಾರ್ಯಸಾಧ್ಯವಾದ ಆಯ್ಕೆಯಲ್ಲ ಎಂಬುದನ್ನು ಮನಗಂಡು ಬಿಡ್ಡಿಂಗ್‌ನಲ್ಲಿ ಪಾಲ್ಗೊಳ್ಳದಿರಲು ನಿರ್ಧರಿಸಿದೆ’ ಎಂದು ಕಂಪನಿಯ ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.