ADVERTISEMENT

ಅಥ್ಲೀಟ್‌ಗಳ ಮೇಲ್ವಿಚಾರಣೆ ವ್ಯವಸ್ಥೆ ರಾಜ್ಯ ಸಂಸ್ಥೆಗಳಿಗೆ ವಿಸ್ತರಣೆ

ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಮಹತ್ವದ ಹಜ್ಜೆ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2024, 16:07 IST
Last Updated 1 ಅಕ್ಟೋಬರ್ 2024, 16:07 IST
ಜಯ್ ಶಾ
ಜಯ್ ಶಾ   

ಬೆಂಗಳೂರು: ಕ್ರಿಕೆಟಿಗರ ತರಬೇತಿ, ಸಾಧನೆ ಮತ್ತು ಫಿಟ್‌ನೆಸ್  ಕುರಿತ ದತ್ತಾಂಶ ಸಂಗ್ರಹಿಸುವ ಅಥ್ಲೀಟ್ ಮೇಲ್ವಿಚಾರಣಾ ವ್ಯವಸ್ಥೆಯನ್ನು (ಎಎಂಎಸ್) ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗೂ ವಿಸ್ತರಿಸುವುದಾಗಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಪ್ರಕಟಿಸಿದೆ. 

ಈಚೆಗೆ ಬೆಂಗಳೂರಿನಲ್ಲಿ ಉದ್ಘಾಟನೆಯಾದ ಬಿಸಿಸಿಐ ಶ್ರೇಷ್ಠತಾ ಕೇಂದ್ರ (ಸಿಒಇ)ದಲ್ಲಿ ನಡೆದಿದ್ದ ಸುದ್ದಿಗೋಷ್ಠಿಯಲ್ಲಿ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಎಎಂಎಸ್‌ ಬಗ್ಗೆ ಮಾತನಾಡಿದ್ದರು.  ಇದೀಗ ರಾಜ್ಯ ಸಂಸ್ಥೆಗಳಿಗೆ ವಿಸ್ತರಿಸಿರುವುದಾಗಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಬಿಸಿಸಿಐ ಮಾನ್ಯತೆ ಪಡೆದ ರಾಜ್ಯ ಕ್ರಿಕೆಟ್ ಸಂಸ್ಥೆಗಳು ಎಎಂಎಸ್‌ ಲಾಭ ಪಡೆಯಬಹುದಾಗಿದೆ. ಇದರಿಂದಾಗಿ ತನ್ನ ಆಟಗಾರರ ನಿರ್ವಹಣೆಯನ್ನು ಉತ್ತಮವಾಗಿ ಮಾಡಬಹುದಾಗಿದೆ’ ಎಂದು ಶಾ ತಿಳಿಸಿದ್ದಾರೆ.

ADVERTISEMENT

ಏನಿದು ಎಎಂಎಸ್‌?

ಆಧುನಿಕ ತಂತ್ರಜ್ಞಾನ ಮತ್ತು ತಂತ್ರಾಂಶಗಳ ಮೂಲಕ ಬಿಸಿಸಿಐ ಸಿದ್ಧಪಡಿಸಿರುವ ಸಿಸ್ಟಮ್ ಇದಾಗಿದೆ. ಇದರ ಮೂಲಕ ಆಟಗಾರರ ಫಿಟ್‌ನೆಸ್‌, ಸಾಧನೆಗಳು, ಗಾಯದ ಚಿಕಿತ್ಸೆ–ನಿರ್ವಹಣೆ, ತಾಲೀಮು,  ಕೋಚ್‌ಗಳ ಕಾರ್ಯಶೈಲಿ ಮತ್ತು ಆಡಳಿತದ ವಿಶ್ಲೇಷಣೆಗಳ ದತ್ತಾಂಶಗಳನ್ನು ಸಂಗ್ರಹಿಸಲಾಗುತ್ತದೆ. ಮೊಬೈಲ್ ಅಪ್ಲಿಕೇಷನ್ (ಆ್ಯಪ್) ಮೂಲಕ ಈ ದತ್ತಾಂಶ ಪಡೆಯಲಾಗುತ್ತದೆ. ಈ ಆ್ಯಪ್ ಮೂಲಕವೇ ಆಟಗಾರರಿಗೆ ಅಲರ್ಟ್‌ಗಳನ್ನು ನೀಡಲಾಗುತ್ತದೆ. ಇದರಿಂದ ಪ್ರತಿಯೊಬ್ಬ ಆಟಗಾರನ ಕುರಿತ ಸಮಗ್ರ ಮಾಹಿತಿಯನ್ನು ಕಾಲಕಾಲಕ್ಕೆ ಉತ್ಕೃಷ್ಠಗೊಳಿಸಲಾಗುತ್ತದೆ. 

‘ರಾಜ್ಯ ಸಂಸ್ಥೆಗಳಿಗೆ ಈ ವ್ಯವಸ್ಥೆ ಲಭ್ಯವಾದರೆ ಕನಿಷ್ಠ 50 ಆಟಗಾರರು (25 ಪುರುಷರು, 25 ಮಹಿಳೆಯರು) ಇದರ ಲಾಭ ಪಡೆಯಲು ಸಾಧ್ಯವಿದೆ. ಎಎಂಎಸ್ ಕ್ರಿಕೆಟ್‌ ಅಭಿವೃದ್ಧಿಗೆ ಪೂರಕವಾಗಿರುವಂತೆ ಸಿದ್ಧಪಡಿಸಲಾಗಿದೆ. ಎನ್‌ಸಿಎ (ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ) ಮತ್ತು ಜೆಡ್‌ಸಿಎ (ವಲಯ ಕ್ರಿಕೆಟ್ ಅಕಾಡೆಮಿ)ಗಳಿಗೆ ಬರುವ ಪ್ರತಿಯೊಬ್ಬ ಆಟಗಾರನ ದತ್ತಾಂಶ ಸಂಗ್ರಹಿಸಿರಬೇಕು. ಆ ಆಟಗಾರ ಇಲ್ಲಿಂದ ಮರಳಿ ಹೋದ ನಂತರ ಐದು ಅಥವಾ ಹತ್ತು ವರ್ಷಗಳ ಮೇಲೆ ಮತ್ತೆ ಬಂದರೂ ಪೂರ್ವಾಪರ ಏನೆಂಬುದರ ಮಾಹಿತಿ ಲಭ್ಯವಿರಬೇಕು ಎಂಬುದೇ ಇದರ ಹಿಂದಿರುವ ಉದ್ದೇಶ. ಇದರಿಂದ ಆಟಗಾರರ ಸಾಮರ್ಥ್ಯ ವೃದ್ದಿಗೆ ಅನುಕೂಲವಾಗುತ್ತದೆ’ ಎಂದು ವಿವಿಎಸ್ ಲಕ್ಷ್ಮಣ್ ಈಚೆಗೆ ಮಾಹಿತಿ ನೀಡಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.