ಚಾಮರಾಜನಗರ: ‘ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ಗೆ ಭಾರತ ತಂಡದ ಆಯ್ಕೆಯಲ್ಲಿ ಸಣ್ಣ ತಪ್ಪಾಗಿತ್ತು’ ಎಂದು ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಶುಕ್ರವಾರ ಹೇಳಿದರು.
ಪಂದ್ಯದ ಸೋಲಿನ ಬಗ್ಗೆ ನಗರದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ‘ಭಿನ್ನ ಪರಿಸ್ಥಿತಿಗಳಲ್ಲಿ ಕ್ರಿಕೆಟ್ ಆಡುವಾಗ ಪಿಚ್ ಅನ್ನು ಅರ್ಥ ಮಾಡಿಕೊಳ್ಳಲು ಕಷ್ಟವಾಗುತ್ತದೆ. ಟೆಸ್ಟ್ ಫೈನಲ್‌ನಲ್ಲಿ ತಂಡದ ಆಯ್ಕೆಯ ವೇಳೆ ಸಣ್ಣ ತಪ್ಪೂ ನಡೆದಿದೆ. ಅಂತಹದ್ದು ನಡೆಯುತ್ತಿರುತ್ತದೆ. ಆರಂಭದಿಂದಲೇ ನಾವು ಉತ್ತಮ ಆಟವಾಡಿದ್ದರೆ ಗೆಲ್ಲಬಹುದಿತ್ತು. ಮೊದಲ ದಿನ ನಮ್ಮ ಆಟ ಚೆನ್ನಾಗಿರಲಿಲ್ಲ’ ಎಂದರು.
ಫೈನಲ್ ಪಂದ್ಯಕ್ಕೂ ಮೊದಲು ಅಭ್ಯಾಸ ನಡೆಸಲು ಆಟಗಾರರಿಗೆ ಸಾಕಷ್ಟು ಸಮಯ ಸಿಗದಿರುವ ಪ್ರಶ್ನೆಗೆ, 'ಆಟಗಾರರು ಈಗ ಇಡೀ ವರ್ಷ ಕ್ರಿಕೆಟ್ ಆಡುತ್ತಾರೆ. ಆಟವಾಡಲು, ಅಭ್ಯಾಸ ನಡೆಸಲು ಸಮಯ ಸಿಗುತ್ತದೆ' ಎಂದು ಉತ್ತರಿಸಿದರು.
‘ಟಿ20, ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್‌ಗಳಿಗೆ ಸಾಕಷ್ಟು ವ್ಯತ್ಯಾಸವಿದೆ. ಟೆಸ್ಟ್ ಕ್ರಿಕೆಟ್ ಅನ್ನು ಯಾವುದೇ ಕಾರಣಕ್ಕೂ ಮರೆಯಬಾರದು. ಕ್ರಿಕೆಟ್ ಆಟದ ಭವಿಷ್ಯ ಟೆಸ್ಟ್ ಕ್ರಿಕೆಟ್. ಜನರ ಮನರಂಜನೆಗಾಗಿ ಐಪಿಎಲ್, ಟಿ–ಟ್ವೆಂಟಿ ಪಂದ್ಯಗಳು ನಡೆಯುತ್ತವೆ' ಎಂದರು.
'ಉತ್ತಮ ಕ್ರಿಕೆಟ್ ಆಟಗಾರರಾಗಲು ಟಿ- ಟ್ವೆಂಟಿ, ಏಕದಿನ ಮತ್ತು ಟೆಸ್ಟ್ ಮೂರೂ ಮಾದರಿಗೂ ಹೊಂದಿಕೊಳ್ಳಬೇಕು' ಎಂದರು.
ಕೃಷಿಗಾಗಿ ಟ್ರ್ಯಾಕ್ಟರ್ ಖರೀದಿ
ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಮೇಲುಕಾಮನಹಳ್ಳಿಯಲ್ಲಿ 36 ಎಕರೆ ಜಮೀನು ಹೊಂದಿರುವ ರೋಜರ್ ಬಿನ್ನಿ ನಗರದಲ್ಲಿ ಟ್ರ್ಯಾಕ್ಟರ್ ಖರೀದಿಸಿದರು. ನಂಜನಗೂಡು ರಸ್ತೆಯಲ್ಲಿರುವ ಈಶ್ವರಿ ಟ್ರ್ಯಾಕ್ಟರ್ಸ್ ಶೋರೂಂ ಗೆ ಭೇಟಿ ನೀಡಿದ ಅವರನ್ನು ಶೋ ರೂಂ ಮಾಲೀಕರಾದ ಅಶೋಕ್ ಮತ್ತು ಪ್ರಶಾಂತ್ ಸನ್ಮಾನಿಸಿ ಗೌರವಿಸಿದರು.
ನಂತರ ಹೊಸ ಟ್ರ್ಯಾಕ್ಟರ್ ಕೀಯನ್ನು ಹಸ್ತಾಂತರಿಸಿದರು. ಇದೇ ಸಂದರ್ಭದಲ್ಲಿ ಟ್ರ್ಯಾಕ್ಟರ್ ಖರೀದಿಸಿದ ಇತರೆ ಗ್ರಾಹಕರಿಗೆ ಬಿನ್ನಿಯವರು ಕೀಗಳನ್ನು ಹಸ್ತಾಂತರಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿ ‘ನಮ್ಮ ಪೂರ್ವಿಕರು ಕೃಷಿಕರಲ್ಲ. ಆದರೆ ನನಗೆ ಕೃಷಿ ಬಗ್ಗೆ ವಿಶೇಷ ಆಸಕ್ತಿ.
25 ವರ್ಷಗಳಿಂದ ಕೃಷಿ ಮಾಡುತ್ತಿದ್ದೇನೆ. ಸ್ಥಳೀಯ ಡೀಲರ್ ಬಳಿಯಲ್ಲೇ ಟ್ರ್ಯಾಕ್ಟರ್ ಖರೀದಿಸಬೇಕಾಗಿರುವುದರಿಂದ ಇಲ್ಲಿಗೆ ಬಂದಿದ್ದೇನೆ’ ಎಂದರು. ಅವರು ಬಂದ ಸುದ್ದಿ ತಿಳಿದು ಕ್ರಿಕೆಟ್ ಪ್ರೇಮಿಗಳು ಶೋರೂಂ ಮುಂದೆ ನೆರೆದಿದ್ದರು. ಹಲವರು ಹಸ್ತಾಕ್ಷರ ಪಡೆದರು. ಫೋಟೊ ತೆಗೆಸಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.