ಸೌತಾಂಪ್ಟನ್: ನ್ಯೂಜಿಲೆಂಡ್ ವಿರುದ್ಧ ಜೂನ್ 18ರಂದು ಆರಂಭಗೊಳ್ಳಲಿರುವ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯಕ್ಕೆ ಟೀಂ ಇಂಡಿಯಾ ಭರ್ಜರಿ ಅಭ್ಯಾಸ ನಡೆಸಿದೆ. ಆಟಗಾರರ ತರಬೇತಿ ಬಗ್ಗೆ ಬಿಸಿಸಿಐ ವಿಡಿಯೊವನ್ನು ಬಿಡುಗಡೆ ಮಾಡಿದ್ದು, ಕ್ರಿಕೆಟ್ ಅಭಿಮಾನಿಗಳಿಗೆ ಥ್ರಿಲ್ ಮೂಡಿಸಿದೆ.
ಫೈನಲ್ ಪಂದ್ಯವು ಸೌತಾಂಪ್ಟನ್‌ನಲ್ಲಿ ನಡೆಯಲಿದೆ. ಕ್ರಿಕೆಟ್ ತಾರೆಯರು ಅಭ್ಯಾಸದ ವೇಳೆಯ ಫೋಟೊ ಮತ್ತು ವಿಡಿಯೊಗಳನ್ನು ಸಾಮಾಜಿಕ ತಾಣಗಳಲ್ಲಿ ಪೋಸ್ಟ್ ಮಾಡಿ ಖುಷಿ ವ್ಯಕ್ತ ಪಡಿಸಿದ್ದಾರೆ. ಆಲ್‌ರೌಂಡರ್ ರವೀಂದ್ರ ಜಡೇಜ ನೆಟ್‌ನಲ್ಲಿ ಬೌಲಿಂಗ್ ಅಭ್ಯಾಸದ ಫೋಟೊ ಪೋಸ್ಟ್ ಮಾಡಿದ್ದಾರೆ. ಕಳೆದ ಆಸ್ಟ್ರೇಲಿಯಾ ಪ್ರವಾಸದಲ್ಲಿ ಅಂತರರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿರುವ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ವಿಡಿಯೊ ಹಂಚಿಕೊಂಡಿದ್ದು, ಚೆಂಡನ್ನು ರಸಭರಿತ ಹಣ್ಣಿಗೆ ಹೋಲಿಸಿ ಸಂಭ್ರಮಿಸಿದ್ದಾರೆ. ಬಿಸಿಸಿಐ ಟೀಂ ಇಂಡಿಯಾದ ಅಭ್ಯಸದ ವಿಡಿಯೊವನ್ನು ಅಪ್‌ಲೋಡ್ ಮಾಡಿದೆ.
ಅಭ್ಯಾಸ ಮಾಡಲು ಹೆಚ್ಚು ದಿನಗಳ ಕಾಲಾವಕಾಶ ಸಿಗದಿರುವುದಕ್ಕೆ ಚಿಂತಿಸಬೇಕಿಲ್ಲ. ಫೈನಲ್ ಪಂದ್ಯದಲ್ಲಿ ಗೆಲ್ಲಲು ತಂಡದ ಆಟಗಾರರು ಮಾನಸಿಕವಾಗಿ ಸದೃಡರಾಗಿರಬೇಕು ಎಂದು ನಾಯಕ ವಿರಾಟ್ ಕೊಹ್ಲಿ ಕಿವಿಮಾತು ಹೇಳಿದ್ದಾರೆ.
ಮುಂಬೈನಲ್ಲಿ ಕೊಹ್ಲಿ ಪಡೆ ಮೂರು ವಾರಗಳ ಕಾಲ ಕ್ವಾರಂಟೈನ್ ಮುಗಿಸಿ ಹ್ಯಾಂಪ್‌ಶೈರ್‌ಗೆ ಜೂನ್ 3ರಂದು ಆಗಮಿಸಿತ್ತು. ಮೂರು ದಿನಗಳ ಕಾಲ ಎಲ್ಲರು ಪ್ರತ್ಯೇಕ ವಾಸದಲ್ಲಿ ಇದ್ದರು. ನಂತರ ಮೊದಲ ತರಬೇತಿಗೆ ಮೈದಾನಕ್ಕೆ ಇಳಿದಿದ್ದರು.
ದೀರ್ಘಾವಧಿಯ ಪಂದ್ಯ ಮತ್ತು ಬಯೋಬಬಲ್‌ನಿಂದಾಗುವ ಮಾನಸಿಕ ಒತ್ತಡ ಪರಿಹಾರಕ್ಕೆ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ಬಳಿಕ ಟೀಂ ಇಂಡಿಯಾಕ್ಕೆ ಮೂರು ವಾರಗಳ ವಿರಾಮವನ್ನು ಬಿಸಿಸಿಐ ಘೋಷಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.