ADVERTISEMENT

ಉನ್ನತ ದರ್ಜೆಗೆ ರಣಜಿ ಟ್ರೋಫಿ ಕ್ರಿಕೆಟ್

ಬಿಸಿಸಿಐ ನೂತನ ಅಧ್ಯಕ್ಷ ರೋಜರ್ ಬಿನ್ನಿ ಆಶಯ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2022, 4:38 IST
Last Updated 21 ಅಕ್ಟೋಬರ್ 2022, 4:38 IST
ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಗುರುವಾರ ಆಗಮಿಸಿದ ಬಿಸಿಸಿಐ ನೂತನ ಅಧ್ಯಕ್ಷ ರೋಜರ್ ಬಿನ್ನಿ ಅವರನ್ನು ಕೆಎಸ್‌ಸಿಎ ಉಪಾಧ್ಯಕ್ಷ ಜೆ. ಅಭಿರಾಮ್ ಸ್ವಾಗತಿಸಿದರು. ಖಜಾಂಚಿ ವಿನಯ್ ಮೃತ್ಯುಂಜಯ ಇದ್ದಾರೆ –ಪ್ರಜಾವಾಣಿ ಚಿತ್ರ
ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಗುರುವಾರ ಆಗಮಿಸಿದ ಬಿಸಿಸಿಐ ನೂತನ ಅಧ್ಯಕ್ಷ ರೋಜರ್ ಬಿನ್ನಿ ಅವರನ್ನು ಕೆಎಸ್‌ಸಿಎ ಉಪಾಧ್ಯಕ್ಷ ಜೆ. ಅಭಿರಾಮ್ ಸ್ವಾಗತಿಸಿದರು. ಖಜಾಂಚಿ ವಿನಯ್ ಮೃತ್ಯುಂಜಯ ಇದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ದೇಶಿ ಕ್ರಿಕೆಟ್‌ನಲ್ಲಿಯೇ ಪ್ರತಿಷ್ಠಿತವಾದ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಗುಣಮಟ್ಟವನ್ನು ಇನ್ನಷ್ಟು ಉನ್ನತ ದರ್ಜೆಗೇರಿಸುವ ಅಗತ್ಯವಿದೆ. ಹೆಚ್ಚು ಆಟಗಾರರು ಇದರಲ್ಲಿ ಆಡುವಂತೆ ಆಕರ್ಷಣೀಯಗೊಳಿಸಬೇಕಿದೆ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ನೂತನ ಅಧ್ಯಕ್ಷ ರೋಜರ್ ಬಿನ್ನಿ ಅಭಿಪ್ರಾಯಪಟ್ಟರು.

ಮಂಡಳಿಯ ಅಧ್ಯಕ್ಷರಾದ ನಂತರ ಇದೇ ಮೊದಲ ಬಾರಿಗೆ ತಮ್ಮ ತವರು ಬೆಂಗಳೂರಿಗೆ ಆಗಮಿಸಿರುವ ಅವರು ಗುರುವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಪ್ರಸ್ತುತ ದೇಶಿ ಕ್ರಿಕೆಟ್‌ ಆಟಗಾರರಿಗೆ ಉತ್ತಮ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಟೂರ್ನಿಗಳ ಸಂದರ್ಭದಲ್ಲಿ ಉತ್ತಮ ಸಾರಿಗೆ ಹಾಗೂ ವಸತಿ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಈ ಕಾರ್ಯ ಚೆನ್ನಾಗಿಯೇ ನಡೆಯುತ್ತಿದೆ. ಕರ್ನಾಟಕವಂತೂ ಈ ವಿಷಯದಲ್ಲಿ ಮುಂಚೂಣಿಯಲ್ಲಿದೆ. ತನ್ನ ಆಟಗಾರರಿಗೆ ಪಿಂಚಣಿ ಸೌಲಭ್ಯ ಸಿಗುವಂತೆ
ಮಾಡಲು ರಣಜಿ ಟೂರ್ನಿಯಲ್ಲಿ ಆಡುವಂತಹ ಅವಕಾಶಗಳನ್ನು ಕಲ್ಪಿಸುತ್ತಿದೆ’ ಎಂದರು.

ADVERTISEMENT

‘ದ್ವಿತೀಯ ದರ್ಜೆ ನಗರಗಳಲ್ಲೂ ಅಂತರರಾಷ್ಟ್ರೀಯ ದರ್ಜೆಯ ಕ್ರೀಡಾಂಗಣಗಳು ಇವೆ. ಈಗಾಗಲೇ ರಾಂಚಿ, ರಾಯಪುರದಂತಹ ನಗರಗಳಲ್ಲಿ ಐಪಿಎಲ್‌ ಪಂದ್ಯಗಳು ನಡೆದಿವೆ. ನಮ್ಮ ರಾಜ್ಯದಲ್ಲಿಯೂ ಹುಬ್ಬಳ್ಳಿ, ಮೈಸೂರು ಅಥವಾ ಶಿವಮೊಗ್ಗದ ಕ್ರೀಡಾಂಗಣಗಳು ಉತ್ತಮ ವಾಗಿವೆ. ಭವಿಷ್ಯದಲ್ಲಿ ಐಪಿಎಲ್‌ ಪಂದ್ಯಗಳನ್ನು ಆಯೋಜಿಸಿದರೆ ಅಚ್ಚರಿಯೇನಿಲ್ಲ’ ಎಂದೂ ಹೇಳಿದರು.

‘ದೇಶದ ಕ್ರೀಡಾಂಗಣಗಳಲ್ಲಿ ಪಂದ್ಯ ವೀಕ್ಷಣೆಗೆ ಬರುವ ಜನರಿಗೆ ಅತ್ಯಾಧುನಿಕ ಸೌಲಭ್ಯಗಳನ್ನು ನೀಡುವುದು ನಮ್ಮ ಕರ್ತವ್ಯ. ನಮ್ಮಲ್ಲಿರುವ ಕ್ರೀಡಾಂಗಣಗಳಲ್ಲಿ 30–40 ಸಾವಿರಕ್ಕೂ ಹೆಚ್ಚು ಪ್ರೇಕ್ಷಕರು ಸೇರುತ್ತಾರೆ. ಅವರಿಗೆ ಸುರಕ್ಷಿತವಾದ ವಾತಾವರಣ ನೆಲೆಗೊಳಿಸುವುದು ಮುಖ್ಯ’ ಎಂದು 67 ವರ್ಷದ ಬಿನ್ನಿ ಹೇಳಿದರು.

‘ನಮ್ಮ ದೇಶದ ಅಂತರರಾಷ್ಟ್ರೀಯ ಕ್ರೀಡಾಂಗಣಗಳಲ್ಲಿರುವ ಪಿಚ್‌ಗಳನ್ನು ಇನ್ನಷ್ಟು ಸುಧಾರಣೆ ಮಾಡಬೇಕಿದೆ. ಸ್ವಿಂಗ್ ಹಾಗೂ ಬೌನ್ಸ್‌ಸ್ನೇಹಿ ಪಿಚ್‌ಗಳನ್ನು ಸಿದ್ಧಗೊಳಿಸಲು ಆದ್ಯತೆ ನೀಡಬೇಕು. ಇದರಿಂದ ಭಾರತ ತಂಡವು ಇಂಗ್ಲೆಂಡ್, ಆಸ್ಟ್ರೇಲಿಯಾ ದೇಶಗಳಿಗೆ ಹೋದಾಗ ಆಡಲು ಸುಲಭವಾಗುತ್ತದೆ’ ಎಂದು ಹೇಳಿದರು.

‘ಮಹಿಳೆಯರ ಕ್ರಿಕೆಟ್‌ಗೆ ಹೆಚ್ಚು ಪ್ರೋತ್ಸಾಹ ನೀಡಲಾಗುವುದು. ಮುಂದಿನ ವರ್ಷ ಮಹಿಳಾ ಐಪಿಎಲ್ ಆಯೋಜನೆಯಾಗುತ್ತಿದೆ’ ಎಂದರು.

ಬಾಲ್ಯವನ್ನು ನೆನಪಿಸಿಕೊಂಡ ಬಿನ್ನಿ:‘ನಾನು ಈ ಹುದ್ದೆಗೇರುತ್ತೇನೆಂದು ಕನಸಿನಲ್ಲಿಯೂ ಯೋಚಿಸಿರಲಿಲ್ಲ. ಅದಾಗಿಯೇ ಒಲಿದುಬಂದಿದೆ. ಈ ಅವಕಾಶವನ್ನು ಕ್ರಿಕೆಟ್‌ಗೆ ಒಳ್ಳೆಯದನ್ನು ಮಾಡಲು ಬಳಸುತ್ತೇನೆ’ ಎಂದು ಹೇಳಿದರು. ‘ಬೆಂಗಳೂರಿನಲ್ಲಿ ಜೂನಿಯರ್ ಹಂತದಿಂದ ಕ್ರಿಕೆಟ್ ಆಡಲಾರಂಭಿಸಿದೆ. ಆಗೆಲ್ಲ ನನ್ನೊಂದಿಗೆ ಮುರಳಿ, ಶಾವೀರ್ ತಾರಾಪುರೆ ಮತ್ತಿತರರು ಇದ್ದರು. ಅವರೆಲ್ಲ ಈ ಸಭೆಯಲ್ಲಿದ್ದಾರೆ. ಬ್ರಿಜೇಶ್ ಪಟೇಲ್ ನನ್ನ ಮೊದಲ ನಾಯಕ. ನನ್ನ ಕುಟುಂಬ ಹಾಗೂ ಮಿತ್ರರೆಲ್ಲರ ಬೆಂಬಲದಿಂದಾಗಿ ಕ್ರಿಕೆಟ್‌ನಲ್ಲಿ ಎಲ್ಲವನ್ನೂ ಪಡೆದ ತೃಪ್ತಿ ನನ್ನದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.