ನವದೆಹಲಿ: ಯುವ ಕ್ರಿಕೆಟ್ ಆಲ್‌ರೌಂಡರ್‌ಗಳಿಗಾಗಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ವಿಶೇಷ ಶಿಬಿರವನ್ನು ಆಯೋಜಿಸಿದೆ. ಮುಂಬೈನ ಅರ್ಜುನ್ ತೆಂಡೂಲ್ಕರ್ ಸೇರಿದಂತೆ 20 ಮಂದಿ ಯುವ ಆಲ್‌ರೌಂಡರ್‌ಗಳನ್ನು ಈ ಶಿಬಿರಕ್ಕೆ ಆಯ್ಕೆ ಮಾಡಲಾಗಿದೆ.
ಬೆಂಗಳೂರಿನಲ್ಲಿರುವ ಎನ್‌ಸಿಎನಲ್ಲಿ ಮೂರು ವಾರಗಳ ಕಾಲ ಈ ಶಿಬಿರವು ನಡೆಯಲಿದೆ. ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ಕೂಡ ಭಾಗವಹಿಸುವರು. ಅವರು ಹೋದ ರಣಜಿ ಋತುವಿನಲ್ಲಿ ಗೋವಾ ತಂಡದಲ್ಲಿ ಆಡಿದ್ದರು. ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದಾರೆ.
‘ಇದೇ ವರ್ಷ ಏಷ್ಯಾ ಕಪ್ (23 ವರ್ಷದೊಳಗಿನವರು) ಕ್ರಿಕೆಟ್ ಟೂರ್ನಿ ಇದೇ ವರ್ಷ ನಡೆಯಲಿದೆ. ಈ ಟೂರ್ನಿಯಲ್ಲಿ ಆಡುವ ತಂಡ ಕಟ್ಟಲು ಪ್ರತಿಭಾನ್ವಿತ ಆಟಗಾರರ ಶೋಧ ಆರಂಭವಾಗಿದೆ. ಅದರ ಭಾಗವಾಗಿ ಆಲ್‌ರೌಂಡರ್ ಶಿಬಿರ ಆಯೋಜಿಸಲಾಗುತ್ತಿದೆ. ಎನ್‌ಸಿಎ ಮುಖ್ಯಸ್ಥರಾಗಿರುವ ವಿವಿಎಸ್ ಲಕ್ಷ್ಮಣ್ ಅವರು ಈ ಕುರಿತು ಬಹಳ ಆಸಕ್ತಿಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಬಹುಕೌಶಲ ಇರುವವರನ್ನು ಬೆಳೆಸುವತ್ತ ಚಿತ್ತ ನೆಟ್ಟಿದ್ದಾರೆ‘ ಎಂದು ಬಿಸಿಸಿಐನ ಮೂಲಗಳು ತಿಳಿಸಿವೆ.
ರಾಷ್ಟ್ರೀಯ ಸೀನಿಯರ್ ಆಯ್ಕೆ ಸಮಿತಿ ಮುಖ್ಯಸ್ಥ ಶಿವಸುಂದರ್ ದಾಸ್ (ಹಂಗಾಮಿ) ಅವರು ಈ ಶಿಬಿರಕ್ಕೆ ಆಟಗಾರರನ್ನು ಆಯ್ಕೆ ಮಾಡಿದ್ದಾರೆನ್ನಲಾಗಿದೆ.
‘ಅಪ್ಪಟ ಆಲ್‌ರೌಂಡರ್‌ಗಳಿಗಾಗಿಯೇ ಶಿಬಿರ ಆಯೋಜಿಸಲಾಗಿದೆ. ಅದರಲ್ಲಿ ಕೆಲವರು ಬೌಲಿಂಗ್ ಆಲ್‌ರೌಂಡರ್‌ಗಳು ಇನ್ನುಳಿದವರು ಬ್ಯಾಟಿಂಗ್ ಆಲ್‌ರೌಂಡರ್‌ಗಳಾಗಿದ್ದಾರೆ. ಈ ಪ್ರತಿಭಾನ್ವಿತರಲ್ಲಿರುವ ಸಾಮರ್ಥ್ಯವನ್ನು ಗುರುತಿಸಿ ಪ್ರೋತ್ಸಾಹ ನೀಡುವುದು ಮುಖ್ಯ ಉದ್ದೇಶವಾಗಿದೆ. ಮುಂದಿನ ಹಂತಕ್ಕೆ ಸಿದ್ಧಗೊಳಿಸುವುದಾಗಿದೆ‘ ಎಂದೂ ಮೂಲಗಳು ತಿಳಿಸಿವೆ.
ಸೌರಾಷ್ಟ್ರದ ಎಡಗೈ ಮಧ್ಯಮವೇಗಿ ಮತ್ತು ಬಿರುಸಿನ ಹೊಡೆತಗಳ ಬ್ಯಾಟರ್ ಆಗಿರುವ ಚೇತನ್ ಸಕಾರಿಯಾ, ಪಂಜಾಬ್ ತಂಡದ ಅಭಿಷೇಕ್ ಶರ್ಮಾ, ಗೋವಾದ ಆಫ್‌ಸ್ಪಿನ್ ಆಲ್‌ರೌಂಡರ್ ಮೋಹಿತ್ ರೇಡ್ಕರ್, ರಾಜಸ್ಥಾನದ ಮಾನವ್ ಸುತಾರ್, ದೆಹಲಿಯ ವೇಗದಬೌಲರ್ ಹರ್ಷಿತ್ ರಾಣಾ ಹಾಗೂ ಮಧ್ಯಮವೇಗಿ ದಿವಿಜ್ ಮೆಹ್ರಾ ಅವರು ಈ ಶಿಬಿರದಲ್ಲಿದ್ದಾರೆ.
’ಈಚೆಗೆ ಇಂಗ್ಲೆಂಡ್‌ನಲ್ಲಿ ನಡೆದ ಡಬ್ಲ್ಯುಟಿಸಿ ಫೈನಲ್‌ನಲ್ಲಿ ಭಾರತ ತಂಡದ ನೆಟ್ ಬೌಲರ್ ಆಗಿ ಹರ್ಷಿತ್ ತೆರಳಬೇಕಿತ್ತು. ಅವರ ಪ್ರವಾಸಿ ವೀಸಾ ಮತ್ತಿತರ ದಾಖಲೆಗಳನ್ನು ಸಿದ್ಧಗೊಳಿಸಲಾಗಿತ್ತು. ಆದರೆ ಕೊನೆಯ ಹಂತದಲ್ಲಿ ಆಂಧ್ರದ ಯರಾ ಪೃಥ್ವಿ ರಾಜ್ ಅವರನ್ನು ಕಳುಹಿಸಲಾಯಿತು. ಹರ್ಷಿತ್ ಉತ್ತಮ ಬ್ಯಾಟರ್ ಕೂಡ ಹೌದು. ಅವರನ್ನು ಆಯ್ಕೆಗಾರರು ಗುರುತಿಸಿರುವುದು ಉತ್ತಮ ಸಂಗತಿ‘ ಎಂದು ಡಿಡಿಸಿಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.