ADVERTISEMENT

ಇದೇ 28ರಿಂದ ದೇಶೀಯ ಕ್ರಿಕೆಟ್‌ನಲ್ಲಿ ವನಿತೆಯರಿಗೆ ರೆಡ್‌ಬಾಲ್‌ ಟೂರ್ನಿ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2024, 16:13 IST
Last Updated 1 ಮಾರ್ಚ್ 2024, 16:13 IST
ಬಿಸಿಸಿಐ ಲಾಂಛನ
ಬಿಸಿಸಿಐ ಲಾಂಛನ   

ನವದೆಹಲಿ: ದೇಶೀಯ ಕ್ರಿಕೆಟ್‌ನಲ್ಲಿ ವನಿತೆಯರಿಗೆ ಮತ್ತೆ ರೆಡ್‌ ಬಾಲ್‌ (ದೀರ್ಘಾವಧಿ) ಟೂರ್ನಿಯನ್ನು ನಡೆಸಲು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಮುಂದಾಗಿದೆ. ಇದೇ 28ರಿಂದ ಪುಣೆಯಲ್ಲಿ ‘ಸೀನಿಯರ್ ಇಂಟರ್ ಜೋನಲ್ ಮಲ್ಟಿ ಡೇ ಟ್ರೋಫಿ’ಯನ್ನು ಆಯೋಜಿಸಲಾಗಿದೆ.

ಆರು ವರ್ಷಗಳ ಬಳಿಕ ಮಹಿಳೆಯರಿಗೆ ರೆಡ್ ಬಾಲ್ ಟೂರ್ನಿಯನ್ನು ನಡೆಸಲಾಗುತ್ತಿದೆ. 2018ರಲ್ಲಿ ಕೊನೆಯ ಬಾರಿ ರೆಡ್ ಬಾಲ್ ಪಂದ್ಯಗಳನ್ನು ಆಯೋಜಿಸಲಾಗಿತ್ತು. ಇತ್ತೀಚೆಗಷ್ಟೇ ಭಾರತದ ಮಹಿಳಾ ತಂಡವು ಟೆಸ್ಟ್‌ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡಗಳ ವಿರುದ್ಧ ಉತ್ತಮ ಪ್ರದರ್ಶನ ನೀಡಿ ಎಲ್ಲರ ಮನಗೆದ್ದಿತು.

ರೆಡ್ ಬಾಲ್ ಟೂರ್ನಿಯನ್ನು ಆಯೋಜಿಸಲು ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಸಿದ್ಧತೆ ನಡೆಸಿದೆ. ಮಹಿಳಾ ಪ್ರೀಮಿಯರ್‌ ಲೀಗ್‌ ಮುಗಿದ ಬೆನ್ನಲ್ಲೇ ಪುಣೆಯಲ್ಲಿ ಈ ಟೂರ್ನಿ ಆರಂಭವಾಗಲಿದೆ. ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ, ಸೆಂಟ್ರಲ್‌ ಮತ್ತು ಈಶಾನ್ಯ ವಲಯ ಹೀಗೆ ಆರು ತಂಡಗಳು ಟೂರ್ನಿಯಲ್ಲಿ ಪಾಲ್ಗೊಳ್ಳಲಿವೆ.

ADVERTISEMENT

ತಲಾ ಮೂರು ದಿನಗಳ ಐದು ಪಂದ್ಯಗಳ ಸರಣಿಯಲ್ಲಿ ತಂಡಗಳು ಸೆಣಸಲಿವೆ. 2018ರ ಋತುವಿನಲ್ಲಿ ಎರಡು ದಿನಗಳ ಪಂದ್ಯ ಆಡಿಸಲಾಗಿತ್ತು. ಈ ಬಾರಿ ಒಂದು ದಿನ ಹೆಚ್ಚು ಇರಲಿದೆ. ಮಾರ್ಚ್ 28ರಂದು ಪೂರ್ವ– ಈಶಾನ್ಯ ವಲಯ ಮತ್ತು ಪಶ್ಚಿಮ– ಸೆಂಟ್ರಲ್‌ ವಲಯದ ನಡುವಿನ ಕ್ವಾರ್ಟರ್‌ಫೈನಲ್‌ ಪಂದ್ಯದೊಂದಿಗೆ ಟೂರ್ನಿ ಆರಂಭವಾಗಲಿದೆ. ಏ.3ರಿಂದ ಸೆಮಿಫೈನಲ್‌ ಮತ್ತು ಏ.9ರಿಂದ ಫೈನಲ್‌ ಪಂದ್ಯ ನಿಗದಿಯಾಗಿದೆ.

‘ಬಿಸಿಸಿಐ ತೆಗೆದುಕೊಂಡ ಕ್ರಮ ಸ್ವಾಗತಾರ್ಹವಾದುದು. ಈ ಮೂಲಕ ರಾಷ್ಟ್ರೀಯ ತಂಡದ ಆಟಗಾರ್ತಿಯರಿಗೂ ಮತ್ತೆ ಟೆಸ್ಟ್ ಕ್ರಿಕೆಟ್ ಆಡಲು ಅವಕಾಶ ಸಿಗಲಿದೆ. ಮುಂದಿನ ಪೀಳಿಗೆಯ ಕ್ರಿಕೆಟಿಗರು ದೇಶೀಯ ಮಟ್ಟದಲ್ಲಿ ರೆಡ್ ಬಾಲ್ ಕ್ರಿಕೆಟ್ ಆಡುವ ಅಗತ್ಯವಿದೆ’ ಎಂದು ಭಾರತ ತಂಡದ ಮಾಜಿ ವೇಗದ ಬೌಲರ್‌ ಅಮಿತಾ ಶರ್ಮಾ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.