ಮುಂಬೈ: ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿರುವ ಮಾಜಿ ಕ್ರಿಕೆಟಿಗ, ಭಾರತ ತಂಡದ ಮಾಜಿ ಕೋಚ್ ಅಂಶುಮಾನ್ ಗಾಯಕವಾಡ್ ಅವರ ಚಿಕಿತ್ಸೆಗಾಗಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ₹1 ಕೋಟಿ ನೆರವು ಘೋಷಿಸಿದೆ.
ಭಾರತ ತಂಡದ ಮಾಜಿ ನಾಯಕ ಡಿ.ಕೆ. ಗಾಯಕವಾಡ್ ಅವರ ಪುತ್ರನಾಗಿರುವ ಅಂಶುಮಾನ್ ಅವರು ಪ್ರಸ್ತುತ ಲಂಡನ್‌ನ ಕಿಂಗ್ಸ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆರ್ಥಿಕ ಸಂಕಷ್ಟದಲ್ಲಿರುವ ಗಾಯಕವಾಡ್ ಅವರ ನೆರವಿಗೆ ಧಾವಿಸುವಂತೆ ಮಾಜಿ ಕ್ರಿಕೆಟಿಗರಾದ ಕಪಿಲ್ ದೇವ್ ಮತ್ತು ಸಂದೀಪ್ ಪಾಟೀಲ ಅವರು ಈಚೆಗೆ ಬಿಸಿಸಿಐಗೆ ಮನವಿ ಮಾಡಿದ್ದರು. ಅದರ ಬೆನ್ನಲ್ಲೇ ಬಿಸಿಸಿಐ ನೆರವು ಪ್ರಕಟಿಸಿದೆ.
‘ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ಅಂಶುಮಾನ್ ಗಾಯಕವಾಡ್ ಅವರ ಚಿಕಿತ್ಸೆಗಾಗಿ ತಕ್ಷಣವೇ ಜಾರಿಗೆ ಬರುವಂತೆ ₹ 1 ಕೋಟಿ ಬಿಡುಗಡೆ ಮಾಡುವಂತೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಸೂಚನೆ ನೀಡಿದ್ದಾರೆ. ಅವರ ಆರೋಗ್ಯದ ಕುರಿತು ಬಿಸಿಸಿಐ ನಿರಂತರವಾಗಿ ಗಮನ ಹರಿಸಲಿದೆ. ಅವರು ಈ ಹೋರಾಟದಲ್ಲಿ ಗೆದ್ದು ಬರುತ್ತಾರೆ ಎಂಬ ವಿಶ್ವಾಸವಿದೆ’ ಎಂದು ಬಿಸಿಸಿಐ ಅಪೆಕ್ಸ್ ಕೌನ್ಸಿಲ್ ಹೇಳಿಕೆಯಲ್ಲಿ ತಿಳಿಸಿದೆ.
71 ವರ್ಷದ ಅಂಶುಮಾನ್ 1975ರಿಂದ 1987ರ ಅವಧಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಅವರು 40 ಟೆಸ್ಟ್ ಮತ್ತು 15 ಏಕದಿನ ಪಂದ್ಯಗಳನ್ನು ಆಡಿದ್ದಾರೆ. 1997-99 ಅವಧಿಯಲ್ಲಿ ಅವರು ಭಾರತ ತಂಡದ ಕೋಚ್ ಆಗಿ ಕರ್ತವ್ಯ ನಿರ್ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.