ADVERTISEMENT

ಐಸಿಸಿ ಮುಖ್ಯಸ್ಥ ಶಶಾಂಕ್ ಮನೋಹರ್ ಮೇಲೆ ಬಿಸಿಸಿಐ ಗರಂ

ಟಿ20 ವಿಶ್ವಕಪ್ ನಿರ್ಧಾರ ವಿಳಂಬಕ್ಕೆ ಕಾರಣ: ಆರೋಪ

ಪಿಟಿಐ
Published 18 ಜೂನ್ 2020, 1:59 IST
Last Updated 18 ಜೂನ್ 2020, 1:59 IST
ಶಶಾಂಕ್ ಮನೋಹರ್
ಶಶಾಂಕ್ ಮನೋಹರ್   

ನವದೆಹಲಿ: ಟ್ವೆಂಟಿ–20 ವಿಶ್ವಕಪ್ ಟೂರ್ನಿಯ ಆಯೋಜನೆಯ ಕುರಿತು ಸ್ಪಷ್ಟ ನಿರ್ಧಾರ ಕೈಗೊಳ್ಳುವಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್‌ ಬೇಕೆಂತಲೆ ಹಿಂಜರಿಯುತ್ತಿದೆ. ಅದಕ್ಕೆ ಕಾರಣ ಅದರ ಮುಖ್ಯಸ್ಥ ಶಶಾಂಕ್ ಮನೋಹರ್ ಎಂದು ಬಿಸಿಸಿಐ ಅಧಿಕಾರಿಗಳು ಆರೋಪಿಸಿದ್ದಾರೆ.

ಕ್ರಿಕೆಟ್ ಆಸ್ಟ್ರೇಲಿಯಾದ ಮುಖ್ಯಸ್ಥ ಇಯರ್ಲ್ ಎಡ್ಡಿಂಗ್ಸ್‌ ಅವರೇ ತಮ್ಮ ದೇಶದಲ್ಲಿ ಟಿ20 ವಿಶ್ವಕಪ್ ಆಯೋಜನೆಯು ಕಷ್ಟಕರ ಎಂದು ಹೇಳುತ್ತಿರುವಾಗ ಐಸಿಸಿ ಏಕೆ ವಿಳಂಬ ಮಾಡುತ್ತಿದೆ. ಇದರಿಂದಾಗಿ ಇಂಡಿಯನ್ ಪ್ರೀಮಿಯರ್ ಲೀಗ್ ಆಯೋಜನೆಗೆ ಸಿದ್ಧತೆ ಮಾಡಿಕೊಳ್ಳಲೂ ತಡವಾಗುತ್ತಿದೆ.

‘ತಮ್ಮ ಸ್ಥಾನದಿಂದ ಶೀಘ್ರದಲ್ಲಿಯೇ ನಿರ್ಗಮಿಸಲಿರುವ ಐಸಿಸಿ ಮುಖ್ಯಸ್ಥರು (ಮನೋಹರ್) ಏಕೆ ಈ ಗೊಂದಲವನ್ನು ಸೃಷ್ಟಿಸುತ್ತಿದ್ದಾರೆ. ಆತಿಥೇಯ ಕ್ರಿಕೆಟ್ ಮಂಡಳಿಯೇ ಟಿ20 ವಿಶ್ವಕಪ್ ಟೂರ್ನಿ ಆಯೋಜಿಸಲು ಸಿದ್ಧವಿಲ್ಲ. ಆದರೂ ಈ ಕುರಿತು ತೀರ್ಮಾನಿಸಲು ಒಂದು ತಿಂಗಳ ಅವಧಿ ಬೇಕೆ? ಬಿಸಿಸಿಐಯನ್ನು ಅಡಕತ್ತ ರಿಯಲ್ಲಿ ಸಿಲುಕಿಸುತ್ತಿರುವುದು ಏಕೆ?’ ಎಂದು ಮಂಡಳಿಯ ಹಿರಿಯ ಅಧಿಕಾ ರಿಯೊಬ್ಬರು ಕೇಳಿದ್ದಾರೆ.

ADVERTISEMENT

ಜೂನ್ ಆರಂಭದಲ್ಲಿ ಐಸಿಸಿಯು ನಡೆಸಿದ್ದ ಕಾಲ್‌ ಕಾನ್ಫರೆನ್ಸ್‌ನಲ್ಲಿ ಟಿ20 ವಿಶ್ವಕಪ್ ಟೂರ್ನಿಯ ಆಯೋಜನೆಯ ಕುರಿತು ಸ್ಪಷ್ಟ ನಿರ್ಧಾರ ತೆಗೆದುಕೊಂಡಿರಲಿಲ್ಲ. ಹಂತಹಂತವಾಗಿ ‍ಪರಿಸ್ಥಿತಿಯನ್ನು ಅವಲೋಕಿಸಿ ಮುಂದಿನ ತಿಂಗಳು ನಿರ್ಧರಿಸಲಾಗುವುದು ಎಂದು ಪ್ರಕಟಿಸಲಾಗಿತ್ತು.

‘ಆದಷ್ಟು ಬೇಗ ತೀರ್ಮಾನ ತೆಗೆದು ಕೊಂಡರೆ ಐಪಿಎಲ್ ಆಯೋಜನೆ ಪೂರ್ವಸಿದ್ಧತೆ ಮಾಡಲು ಅನುಕೂಲ. ಉಳಿದ ಸದಸ್ಯ ರಾಷ್ಟ್ರಗಳಿಗೂ ತಮ್ಮ ತಮ್ಮ ದ್ವಿಪಕ್ಷೀಯ ಸರಣಿಗಳ ವೇಳಾಪಟ್ಟಿಯನ್ನು ಮರುಹೊಂದಾಣಿಕೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ತೀರ್ಮಾನವನ್ನೇ ವಿಳಂಬ ಮಾಡಿದರೆ ಯಾವುದಕ್ಕೂ ಅವಕಾಶ ಇರುವುದಿಲ್ಲ’ ಎಂದು ಅಧಿಕಾರಿಯು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.