ನವದೆಹಲಿ: ಭಾರತ ತಂಡವು ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 'ವೈಟ್‌ವಾಷ್' ಮುಖಭಂಗ ಅನುಭವಿಸಿರುವುದನ್ನು ಬಿಸಿಸಿಐ ಗಂಭೀರವಾಗಿ ಪರಿಗಣಿಸಿದೆ. ಆಸ್ಟ್ರೇಲಿಯಾದಲ್ಲಿ ಇದೇ ತಿಂಗಳು ಆರಂಭವಾಗುವ ಬಾರ್ಡರ್–ಗವಾಸ್ಕರ್ ಟೆಸ್ಟ್ ಸರಣಿಯ ನಂತರ, ಮುಂದಿನ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ಗೆ (ಡಬ್ಲ್ಯುಟಿಸಿ) ಸಂಬಂಧಿಸಿದಂತೆ ಕೆಲವು ಹಿರಿಯ ಆಟಗಾರರ ಭವಿಷ್ಯದ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
ಅಂತರರಾಷ್ಟ್ರೀಯ ಕ್ರಿಕೆಟ್‌ನ ಅಂತಿಮ ಘಟ್ಟದಲ್ಲಿರುವ ನಾಯಕ ರೋಹಿತ್ ಶರ್ಮಾ, ಮಾಜಿ ನಾಯಕ ವಿರಾಟ್ ಕೊಹ್ಲಿ, ಅನುಭವಿಗಳಾದ ರವೀಂದ್ರ ಜಡೇಜ ಹಾಗೂ ರವಿಚಂದ್ರನ್ ಅಶ್ವಿನ್ ಅವರಲ್ಲಿ ಒಂದಿಬ್ಬರಿಗೆ ಆಸ್ಟ್ರೇಲಿಯಾ ಸರಣಿಯೇ ಕೊನೆಯ ಅವಕಾಶವಾಗುವ ಸಾಧ್ಯತೆ ಇದೆ.
ನ್ಯೂಜಿಲೆಂಡ್ ವಿರುದ್ಧದ ಅಂತಿಮ ಟೆಸ್ಟ್ ಬಳಿಕ ಮಾಧ್ಯಮದವರೊಂದಿಗೆ ರೋಹಿತ್ ಮಾತನಾಡಿದ್ದಾರೆ. ಟೆಸ್ಟ್ ನಾಯಕತ್ವದ ಹಿನ್ನಡೆಯ ಕುರಿತು ಕೇಳಿದ್ದಕ್ಕೆ, 'ನೋಡಿ, ಅಷ್ಟು ಮುಂದಾಲೋಚನೆ ಮಾಡಿಲ್ಲ. ಸದ್ಯಕ್ಕೆ, ಆಸ್ಟ್ರೇಲಿಯಾ ಎದುರಿನ ಸರಣಿಯತ್ತ ಗಮನ ಹರಿಸುವುದು ಮುಖ್ಯ' ಎಂದಿದ್ದಾರೆ.
'ಆಸ್ಟ್ರೇಲಿಯಾ ಸರಣಿಗೆ ಹೊರತಾದ ವಿಚಾರಗಳ ಕಡೆಗೆ ನೋಡುವುದಿಲ್ಲ. ಆ ಸರಣಿ ನಮ್ಮ ಪಾಲಿಗೆ ಪ್ರಮುಖವಾದದ್ದು. ಮುಂದೆ ಏನಾಗುತ್ತದೆ ಎಂದು ಚಿಂತಿಸುವ ಬದಲು, ಟೂರ್ನಿ ಮೇಲೆ ಗಮನ ಕೇಂದ್ರೀಕರಿಸಲು ಪ್ರಯತ್ನಿಸುತ್ತೇವೆ' ಎಂದು ಸ್ಪಷ್ಟಪಡಿಸಿದ್ದಾರೆ.
ಭಾರತದ 'WTC' ಫೈನಲ್ ತಲುಪದಿದ್ದರೆ...
ಹಿರಿಯ ಆಟಗಾರರ ಭವಿಷ್ಯದ ಕುರಿತು, ಬಿಸಿಸಿಐ, ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್, ಮುಖ್ಯ ಕೋಚ್ ಗೌತಮ್ ಗಂಭೀರ್ ಹಾಗೂ ನಾಯಕ ರೋಹಿತ್ ನಡುವೆ ಅನೌಪಚಾರಿಕ ಚರ್ಚೆಯಾಗುವ ಸಾಧ್ಯತೆ ಇದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
'ಮುಂದಿನ ಯೋಜನೆಗಳ ಬಗ್ಗೆ ಚರ್ಚೆಯಾಗಬಹದು. ತಂಡವು ನವೆಂಬರ್ 10ರಂದು ಆಸ್ಟ್ರೇಲಿಯಾಗೆ ತೆರಳುವುದರಿಂದ ಆ ಚರ್ಚೆ ಅನೌಪಚಾರಿಕವಾಗಿರಲಿದೆ. ನ್ಯೂಜಿಲೆಂಡ್ ವಿರುದ್ಧ ದೊಡ್ಡ ಸೋಲು ಅನುಭವಿಸಿದ್ದರೂ, ಆಸ್ಟ್ರೇಲಿಯಾ ಸರಣಿಗೆ ಈಗಾಗಲೇ ತಂಡ ಘೋಷಣೆಯಾಗಿರುವುದರಿಂದ ಯಾವುದೇ ಗೊಂದಲವಿಲ್ಲ' ಎಂದಿವೆ.
ಅಗರ್ಕರ್ ಹಾಗೂ ಗಂಭೀರ್, ಹಿರಿಯ ಆಟಗಾರರೊಂದಿಗೆ ಮಾತುಕತೆ ನಡೆಸಬಹುದು.
'ಡಬ್ಲ್ಯುಟಿಸಿ' ಫೈನಲ್ ಪಂದ್ಯವು 2025ರ ಜೂನ್‌ನಲ್ಲಿ ಲಾರ್ಡ್ಸ್‌ನಲ್ಲಿ ನಡೆಯಲಿದೆ. ಅದಕ್ಕೆ, ಅರ್ಹತೆ ಪಡೆಯಲು ಭಾರತವು ಉಳಿದ ತಂಡಗಳನ್ನು ಅವಲಂಬಿಸುವ ಬದಲು, ಆಸ್ಟ್ರೇಲಿಯಾ ಎದುರಿನ ಸರಣಿಯಲ್ಲಿ 4–0 ಅಂತರದ ಗೆಲುವು ಸಾಧಿಸಬೇಕಿದೆ. ಆದರೆ, ಅದು ಅಷ್ಟು ಸುಲಭವಲ್ಲ.
ಭಾರತವು ಬಾರ್ಡರ್–ಗವಾಸ್ಕರ್ ಟೂರ್ನಿಯಲ್ಲಿ ಹಿನ್ನಡೆ ಅನುಭವಿಸಿದರೂ, ಫೈನಲ್ ತಲುಪಬಹುದು. ಆದರೆ, ಇತರ ಪಂದ್ಯಗಳ ಫಲಿತಾಂಶವು ನಿರ್ಣಾಯಕವಾಗಲಿದೆ.
'ಒಂದುವೇಳೆ ಭಾರತ ತಂಡ ಇಂಗ್ಲೆಂಡ್‌ನಲ್ಲಿ ನಡೆಯುವ 'ಡಬ್ಲ್ಯುಟಿಸಿ' ಫೈನಲ್ ತಲುಪಲು ವಿಫಲವಾದರೆ, ನಾಲ್ವರು ಸೂಪರ್ ಸೀನಿಯರ್‌ಗಳು ಇಂಗ್ಲೆಂಡ್ ಎದುರಿನ ಐದು ಪಂದ್ಯಗಳ ಸರಣಿಗೆ ತೆರಳುವ ವಿಮಾನದಲ್ಲಿ ಇರುವುದಿಲ್ಲ ಎಂಬುದನ್ನು ಯಾರು ಬೇಕಾದರೂ ಖಚಿತವಾಗಿ ಹೇಳಬಹುದು' ಎಂದು ಅಭಿಪ್ರಾಯಪಟ್ಟಿವೆ.
ಯುವ ಆಟಗಾರರಿಗೆ ಮಣೆ!
'ಡಬ್ಲ್ಯುಟಿಸಿ' ಫೈನಲ್ ನಂತರ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಸರಣಿಯು 2025ರ ಜೂನ್‌ನಲ್ಲಿ ಆರಂಭವಾಗಲಿದೆ. ಇದರೊಂದಿಗೆ, ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮಿಂಚಲು ಸಜ್ಜಾಗಿರುವ ಸಾಯಿ ಸುದರ್ಶನ್, ದೇವದತ್ತ ಪಡಿಕ್ಕಲ್ ಅವರಂತಹ ಯುವ ಆಟಗಾರರಿಗೆ ಮಣೆ ಹಾಕುವ ಮೂಲಕ ಆಯ್ಕೆ ಸಮಿತಿಯು ಬಲವಂತವಾಗಿ ದೀರ್ಘಾವಧಿಯ ಯೋಜನೆಗಳತ್ತ ಗಮನ ಹರಿಸುವ ಸಾಧ್ಯತೆ ಇದೆ.
ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರಿರುವ ವಾಷಿಂಗ್ಟನ್ ಸುಂದರ್, ಮುಂದಿನ 10 ವರ್ಷಗಳವರೆಗೆ ತಂಡಕ್ಕೆ ನೆರವಾಗುವ ಭರವಸೆ ಮೂಡಿಸಿದ್ದಾರೆ. ಇದರಿಂದಾಗಿ, ಆಸ್ಟ್ರೇಲಿಯಾ ಸರಣಿಯ ಬಳಿಕ, ಆರ್.ಅಶ್ವಿನ್ (38) ಭವಿಷ್ಯದ ಕುರಿತು ಚರ್ಚೆಯಾಗಬಹುದು.
ಆಲ್‌ರೌಂಡರ್ ಜಡೇಜ ಅವರು ಉತ್ತಮ ಫಿಟ್‌ನೆಸ್ ಮತ್ತು ವಿದೇಶಿ ಪಿಚ್‌ಗಳಲ್ಲಿ ಉತ್ತಮ ಪ್ರದರ್ಶನ ತೋರಿದ್ದರೂ, ಅವರ ಬದಲು ಸ್ಥಾನ ಪಡೆಯಲು ಅಕ್ಷರ್ ಪಟೇಲ್ ಅವರಂತಹ ಆಟಗಾರರು ಸಾಲಿನಲ್ಲಿದ್ದಾರೆ.
2021ರ ಫೆಬ್ರುವರಿ ಇಂದ ಈಚೆಗೆ ರೋಹಿತ್ ಶರ್ಮಾ ಅವರು ತವರಿನಲ್ಲಿ ಆಡಿದ 35 ಇನಿಂಗ್ಸ್‌ಗಳಲ್ಲಿ 37.81 ರ ಸರಾಸರಿಯಲ್ಲಿ 1,210 ರನ್ ಗಳಿಸಿದ್ದಾರೆ. ಆದರೆ, ಕಳೆದ 10 ಇನಿಂಗ್ಸ್‌ಗಳಲ್ಲಿ ಗಳಿಸಿರುವುದು ಎರಡೇ ಅರ್ಧಶತಕ. ಉಳಿದ ಎಂಟರಲ್ಲಿ, 6 ಬಾರಿ ಹತ್ತಕ್ಕಿಂತ ಹಾಗೂ 2 ಸಲ 20ಕ್ಕಿಂತ ಕಡಿಮೆ ರನ್ ಗಳಿಸಿದ್ದಾರೆ.
ಇದೇ ಅವಧಿಯಲ್ಲಿ ವಿರಾಟ್ ಕೊಹ್ಲಿ ತವರಿನಲ್ಲಿ 25 ಇನಿಂಗ್ಸ್ ಆಡಿದ್ದು, 30.91ರ ಸರಾಸರಿಯಲ್ಲಿ 742 ರನ್ ಗಳಿಸಿದ್ದಾರೆ. ಅವರ ಬ್ಯಾಟ್‌ನಿಂದ ಬಂದಿರುವುದು ಒಂದೇ ಅರ್ಧಶತಕ.
'ಆಸ್ಟ್ರೇಲಿಯಾ ಪಿಚ್‌ಗಳು ಬ್ಯಾಟಿಂಗ್ ಮಾಡಲು ಹೆಚ್ಚು ಉತ್ತಮವಾಗಿವೆ ಎಂಬುದರಲ್ಲಿ ಅನುಮಾನವಿಲ್ಲ. ಆದರೆ, ಈ ರೀತಿಯ (ನ್ಯೂಜಿಲೆಂಡ್ ಎದುರಿನ ಸೋಲು) ಅವಮಾನದ ಬಳಿಕ ತಮ್ಮೊಳಗಿನ ಅನುಮಾನಗಳನ್ನು ತೊಡೆದು ಆಡುವುದು ಕಠಿಣವಾಗಲಿದೆ' ಎಂದು ಮಾಜಿ ಕ್ರಿಕೆಟಿಗರೊಬ್ಬರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.